ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಹಾವೇರಿ: ದೇಶಸೇವೆಗೆ ಜೀವನವನ್ನೇ ಮುಡಿಪಿಟ್ಟ ಚನ್ನಮ್ಮ

ಶ್ರದ್ಧಾಂಜಲಿ ಸಭೆಯಲ್ಲಿ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ವಿ.ಎನ್. ತಿಪ್ಪನಗೌಡ್ರ ಅಭಿಮತ
Published 21 ಡಿಸೆಂಬರ್ 2023, 16:20 IST
Last Updated 21 ಡಿಸೆಂಬರ್ 2023, 16:20 IST
ಅಕ್ಷರ ಗಾತ್ರ

ಹಾವೇರಿ: ಮಹಾತ್ಮ ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ಆದರ್ಶಗಳನ್ನು ರೂಢಿಸಿಕೊಂಡು ದೇಶಸೇವೆಗೆ ತಮ್ಮ ಜೀವನವನ್ನು ಮುಡಿಪಿಟ್ಟ ಹೆಗ್ಗಳಿಕೆ ಚನ್ನಮ್ಮ ಹಳ್ಳಿಕೇರಿ ಅವರದ್ದು ಎಂದು ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ ವಿ.ಎನ್. ತಿಪ್ಪನಗೌಡ್ರ ಅಭಿಪ್ರಾಯಪಟ್ಟರು.

ನಗರದ ವಿಶ್ವಗುರು ವಿದ್ಯಾವರ್ಧಕ ಸೇವಾ ಸಂಸ್ಥೆಯಲ್ಲಿ ಗುರುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚನ್ನಮ್ಮ ಅವರಿಗೆ ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಏಕೀಕರಣ ಚಳವಳಿಗಾರರ ಬಗ್ಗೆ ಅಭಿಮಾನವಿತ್ತು. ನಮ್ಮ ನೆಲದ ಸತ್ವವನ್ನು ಇಡೀ ನಾಡಿಗೆ ಪರಿಚಯಿಸಿದ ಹಿರಿಮೆ ಅವರಿಗಿದೆ. ಆದರ್ಶ ಬದುಕಿನ ಅವರ ವ್ಯಕ್ತಿತ್ವ ನಮಗೆ ಮಾದರಿ ಎಂದರು.

ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಜನಸಮುದಾಯವನ್ನು ಆಕರ್ಷಿಸಿದ್ದ ಗಾಂಧಿ ಮತ್ತು ಬಾವೆ ಅವರ ತತ್ವಾದರ್ಶಗಳನ್ನು ತಮ್ಮ ಜೀವನವಿಡೀ ಅನುಸರಿಸಿದ ಚನ್ನಮ್ಮ ಹಳ್ಳಿಕೇರಿ ನಮ್ಮ ಹೆಮ್ಮೆ ಎಂದರು.

ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ಮಾತನಾಡಿ, ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ನಾನು ನಿರ್ಮಿಸಿ, ನಿರ್ದೇಶಿಸಿದ ಹಾವೇರಿ ವೀರರ ಸ್ವಾತಂತ್ರ್ಯ ಸಂಗ್ರಾಮ ಸಾಕ್ಷ್ಯಚಿತ್ರಕ್ಕೆ ತಮ್ಮ ಮನದಾಳದ ಮಾತುಗಳನ್ನಾಡಿ ನನ್ನನ್ನು ಹುರಿದುಂಬಿಸಿದ್ದರು ಎಂದರು.

ವಿಶ್ವಗುರು ವಿದ್ಯಾವರ್ಧಕ ಸೇವಾ ಸಂಸ್ಥೆಯ ಅಧ್ಯಕ್ಷ ಈರಣ್ಣ ಬೆಳವಡಿ, ಎಸ್.ಎನ್. ತಿಪ್ಪನಗೌಡ್ರ, ಎಸ್.ಆರ್. ಹಿರೇಮಠ, ಜಿ.ಎಂ. ಓಂಕಾರಣ್ಣನವರ, ಶಶಿಕಲಾ ಅಕ್ಕಿ, ನೇತ್ರಾವತಿ ಅಂಗಡಿ, ಶೇಖರ ಭಜಂತ್ರಿ, ಹನುಮಂತಸಿಂಗ್ ರಜಪೂತ, ಸೋಮನಾಥ ಡಿ, ನಾಗರಾಜ ಹುಡೇದ, ಸಿದ್ದೇಶ್ವರ ಹುಣಸಿಕಟ್ಟಿಮಠ, ಮುತ್ತುರಾಜ ಗುತ್ತಲ ಇದ್ದರು.

ಹಾವೇರಿ ನಗರದ ವಿಶ್ವಗುರು ವಿದ್ಯಾವರ್ಧಕ ಸೇವಾ ಸಂಸ್ಥೆಯಲ್ಲಿ ಗಾಂಧಿವಾದಿ ಚನ್ನಮ್ಮ ಹಳ್ಳಿಕೇರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಹಾವೇರಿ ನಗರದ ವಿಶ್ವಗುರು ವಿದ್ಯಾವರ್ಧಕ ಸೇವಾ ಸಂಸ್ಥೆಯಲ್ಲಿ ಗಾಂಧಿವಾದಿ ಚನ್ನಮ್ಮ ಹಳ್ಳಿಕೇರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು

‘ಚನ್ನಮ್ಮರ ಆದರ್ಶ ಅನುಕರಣೀಯ’

ಹಾವೇರಿ: ಮಹಾತ್ಮ ಗಾಂಧಿ ಹಾಗೂ ಸಂತ ವಿನೋಬಾ ಭಾವೆ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಹೊಸರಿತ್ತಿಯ ಹೋರಾಟಗಾರ್ತಿ ಚನ್ನಮ್ಮ ಹಳ್ಳಿಕೇರಿ ಅವರು ಬುಧವಾರ ಪುಣೆ ಸಮೀಪದ ಪೌನಾರ್‌ ವಿನೋಬಾ ಆಶ್ರಮದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಗೌರಿಮಠದ ಶಿವಯೋಗಿ ಶಿವಾಚಾರ್ಯರು ಮಾತನಾಡಿ ಹಳ್ಳಿಕೇರಿ ಚನ್ನಮ್ಮ ಅವರನ್ನು ನಮ್ಮ ಮಠದಲ್ಲಿಯೇ ನಡೆದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ 6ನೇ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಗೌರವ ಸಲ್ಲಿಸಲಾಗಿತ್ತು. ವಿದ್ಯಾರ್ಥಿಗಳು ಚನ್ನಮ್ಮಾಜಿ ಅವರ ಹೋರಾಟದ ಆದರ್ಶ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದರು. ಚಿಂತನ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ ಮತ್ತು ಹಾವೇರಿ ಕಚುಸಾಪ ಕಾರ್ಯದರ್ಶಿ ಡಾ.ಗಂಗಯ್ಯ ಕುಲಕರ್ಣಿ ಮಾತನಾಡಿದರು. ಕಚುಸಾಪ ಅಧ್ಯಕ್ಷ ವಿರೂಪಾಕ್ಷ ಲಮಾಣಿ ಅವರು ಸಂತಾಪ ಸೂಚಿಸಿದರು. ಈ ವೇಳೆ ಮುಖ್ಯಶಿಕ್ಷಕ ಶಂಕರ ಅಕ್ಕಸಾಲಿ ನಿಂಗಪ್ಪ ಆರ್. ಮಾಂತೇಶ ಸಂಗೂರ ರವಿ ತಿಮ್ಮನಗೌಡ್ರ ಶಿಕ್ಷಕಿಯರಾದ ಲಕ್ಷ್ಮಿ ಜಂತಿಕಟ್ಟಿ ಸರಸ್ವತಿ ಹಿರೇಮಠ ಮಂಜುಳಾ ಇಳಿಗೇರ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT