ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಲಗೆ ನಾದಕ್ಕೆ ಕುಣಿದ ಯುವಕರು

ಹಾನಗಲ್: ಹೋಳಿ ರಂಗೇರಿಸಿದ ವಿವಿಧ ವೇಷಭೂಷಣ
Published 30 ಮಾರ್ಚ್ 2024, 16:18 IST
Last Updated 30 ಮಾರ್ಚ್ 2024, 16:18 IST
ಅಕ್ಷರ ಗಾತ್ರ

ಹಾನಗಲ್: ಹಾನಗಲ್‌ ಪಟ್ಟಣದಲ್ಲಿ ಹೋಳಿಯ ಬಣ್ಣದಾಟ ಭಾನುವಾರ ನಡೆಯಲಿದ್ದು, ಇದರ ಮುನ್ನಾದಿನ ಶನಿವಾರ ವಿವಿಧ ವೇಷಗಳನ್ನು ತೊಟ್ಟ ಯುವಕರು ಸೋಗು ಹಾಕಿಕೊಂಡು ಹೋಳಿ ರಂಗು ಸೃಷ್ಠಿಸಿದರು.

ದೇವತೆಗಳ ಸೋಗು, ಭವಿಷ್ಯ ನುಡಿಯುವ ಯುಗಪುರುಷ, ಅರಬ್ಬರ ವೇಷಭೂಷಣ, ತರಲೆ ಮಾಡುವ ಕೋತಿಗಳ ಹಿಂಡು, ವಿಚಿತ್ರ ಭಿಕ್ಷುಕರು, ರಾಣಿಗ್ಯಾ ವೇಷ, ಹೀಗೆ ಬಗೆಬಗೆಯ ಸೋಗು ಹಾಕಿಕೊಂಡು
ಮನೆ ಮತ್ತು ಅಂಗಡಿಗಳಿಗೆ ಹಠಾತ್ ಹಾಜರಾಗುತ್ತಿದ್ದ ಯುವಕರ ಸಮೂಹ ಅಚ್ಚರಿ ಮೂಡಿಸುತ್ತಿತ್ತು. ಹಲಗೆ ನಾದಕ್ಕೆ ತಕ್ಕ ನೃತ್ಯ ಮಾಡುವ ವಿಧ ವಿಧವಾದ ವೇಷಧಾರಿಗಳು ಹೋಳಿ ಸಂಭ್ರಮಕ್ಕೆ ಕಿಚ್ಚು ಹಚ್ಚಿದ್ದರು.

ತಾರಕೇಶ್ವರ ದೇವಸ್ಥಾನದ ಎದುರು ಕದಂಬ ಯುವಶಕ್ತಿ ವತಿಯಿಂದ ಶುಕ್ರವಾರ ರಂಗಿನ ರಾತ್ರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿವಿಧ ಭಾಗದಲ್ಲಿ ಮಹಿಳೆಯರಿಗೆ ಮಡಕೆ ಒಡೆಯುವ ಸ್ಪರ್ಧೆ ನಡೆದವು.

ಶನಿವಾರ ಸಂಜೆ ಬಳಿಕ ಇಲ್ಲಿನ ಗಾಂಧಿ ವೃತ್ತದ ಗಣೇಶ ದೇವಸ್ಥಾನದಿಂದ ವಿವಿಧ ರೂಪಕಗಳ ಮೆರವಣಿಗೆ ನಡೆಯಿತು. ಬಳಿಕ ತಾರಕೇಶ್ವರ ವೇದಿಕೆಯಲ್ಲಿ ಸೋಗು ಹಾಕಿದ ಯುವಕರಿಗೆ
ಬಹುಮಾನ ವಿತರಿಸಲಾಯಿತು.

ಈ ಬಾರಿಯೂ ನಗಲಿಲ್ಲ ರತಿ–ಮನ್ಮಥ

ನಗೆ ಮಲ್ಲರಿಗೆ ಸವಾಲು ಹಾಕಿ ಪ್ರತಿಷ್ಠಾಪನೆಗೊಳ್ಳುವ ರತಿ-ಮನ್ಮಥ ವೇಷಧಾರಿಗಳ ಪ್ರಸಂಗ ಹಾನಗಲ್ ಹೋಳಿಯ ವಿಶೇಷ ಆಕರ್ಷಣೆಯಾಗಿದ್ದು ಇಲ್ಲಿನ ಗಾಂಧಿ ವೃತ್ತದಲ್ಲಿ ಶುಕ್ರವಾರ ಸಂಜೆ ಒಂದು ತಾಸು ಆಸೀನರಾಗಿದ್ದ ಜೀವಂತ ರತಿ-ಮನ್ಮಥರನ್ನು ನಗಿಸಲು ಸಾಧ್ಯವಾಗಲಿಲ್ಲ. ಸತತ 17 ವರ್ಷ ಈ ಸಾಧನೆ ಮಾಡಿರುವ ರತಿ ಮನ್ಮಥ ವೇಷಧಾರಿ ಮಾಲತೇಶ ತುಮರಿಕೊಪ್ಪ ಮತ್ತು ಮಹೇಶ ಕೊಲ್ಲಾಪೂರ ಅವರು ಈ ಬಾರಿಯೂ ಸೋತಿಲ್ಲ. ಗಂಭೀರ ವದನರಾಗಿ ಕುಳಿತುಕೊಳ್ಳುವ ಇವರನ್ನು ನಗಿಸಿದವರಿಗೆ ಈ ಸಲವೂ ಆಕರ್ಷಕ ಬಹುಮಾನ ಘೋಷಿಸಲಾಗಿತ್ತು. ನಗದು ಚಿನ್ನ ಬೆಳ್ಳಿ ಮತ್ತು ಬೈಕ್ ಬಹುಮಾನವಾಗಿ ಘೋಷಿಸಲಾಗಿತ್ತು. ಆದರೆ ಇವರ ಮುಂದೆ ನಗಿಸಲು ಬಂದವರೇ ಬೆಸ್ತು ಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT