ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ‘ಮನೆಗೊಂದು ಪದವಿ’ ಅಭಿಯಾನ!

ಕೆಎಸ್‌ಒಯುನಿಂದ ರೈತರು, ಅಂಗವಿಲರಿಗೆ ಪದವಿ ಶಿಕ್ಷಣ
Last Updated 12 ಜುಲೈ 2019, 19:30 IST
ಅಕ್ಷರ ಗಾತ್ರ

ಹಾವೇರಿ: ಉನ್ನತ ಶಿಕ್ಷಣದಿಂದ ವಂಚಿತರಾಗಿರುವ ರೈತರು,ಅಂಗವಿಕಲರು, ಆರ್ಥಿಕ ದುರ್ಬಲರ ಕುಟುಂಬಗಳಿಗೆ ಅನುಕೂಲವಾಗಲೆಂದೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಪ್ರಾರಂಭಿಸಿರುವ ‘ಮನೆಗೊಂದು ಕಡ್ಡಾಯ ಪದವಿ’ ಅಭಿಯಾನ ಇದೀಗ ಜಿಲ್ಲೆಗೂ ಕಾಲಿಟ್ಟಿದೆ.

ಮೊದಲ ಹಂತದಲ್ಲಿ ದಾವಣಗೆರೆಯಲ್ಲಿ ಅಭಿಯಾನ ನಡೆದಿದ್ದು, ಕೆಎಸ್‌ಒಯುನ ಪ್ರಾದೇಶಿಕ ಕೇಂದ್ರದ ಅಧಿಕಾರಿ ಡಾ.ಸುಧಾಕರ ಹೊಸಳ್ಳಿ ಅವರ ನೇತೃತ್ವದ ತಂಡ ಮನೆ–ಮನೆಗೂ ತೆರಳಿ ಪದವಿ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ‍್ರಯತ್ನಿಸಿತ್ತು.ಅದರ ಫಲವಾಗಿ 70 ವರ್ಷದ ವೃದ್ಧೆಯೊಬ್ಬರು ಪ‍ದವಿ ಶಿಕ್ಷಣ ಪಡೆಯಲು ಮುಂದಾದರು.ಅವರ ಬೆನ್ನಲ್ಲೇ ಸ್ಥಳೀಯ ರೈತರ ಮಕ್ಕಳೂ ಉನ್ನತ ಶಿಕ್ಷಣಕ್ಕೆ ಮುಂದಡಿ ಇಟ್ಟರು.

ಈ ಯಶಸ್ಸಿನ ಬೆನ್ನಲ್ಲೇ ಹಾವೇರಿಯಲ್ಲೂ ಅಭಿಯಾನ ಪ್ರಾರಂಭಿಸಿರುವ ತಂಡ, ಶುಕ್ರವಾರ ಸಾಂಕೇತಿಕವಾಗಿ ನಗರದ ನಾಲ್ಕು ಕುಟುಂಬಗಳನ್ನು ಭೇಟಿಯಾಗಿದೆ. ಭೀಮಾರೆಡ್ಡಿ ಎಂಬವರು ಪಿಯುಸಿ ನಂತರ ಕಾಲೇಜು ತೊರೆದಿದ್ದ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕಾಲೇಜಿಗೆ ಸೇರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಪ‍ದವಿ ಶಿಕ್ಷಣದ ಆಸಕ್ತರನ್ನು ಸೆಳೆಯಲುಇದೇ ತಿಂಗಳಲ್ಲೇ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುವುದಕ್ಕೂ ಕೆಎಸ್‌ಒಯು ನಿರ್ಧರಿಸಿದೆ.

‘ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳುನಮ್ಮ ಪ್ರಾದೇಶಿಕ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಈ ಮೂರು ಜಿಲ್ಲೆಗಳಲ್ಲಿ ಲಕ್ಷಾಂತರ ಮಂದಿ ಯುವಕರು ಪದವಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. 2018–19ನೇ ಸಾಲಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ನಮ್ಮಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 338. ಹೀಗಾಗಿ, ಆ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಅಭಿಯಾನ ಪ್ರಾರಂಭಿಸಿದ್ದೇವೆ’ ಎಂದು ಸುಧಾಕರ ಹೊಸಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾವೇರಿಯಲ್ಲಿ ಪಿಯುಸಿ ನಂತರ ಕಾಲೇಜು ಮೆಟ್ಟಿಲು ಹತ್ತದ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಹೀಗಾಗಿ, ನಾವೇ ಮನೆ–ಮನೆಗೂ ಹೋಗಿ ಅವರ ಕುಟುಂಬ ಸದಸ್ಯರ ಮನವೊಲಿಸುತ್ತಿದ್ದೇವೆ. ವಿ.ವಿಯ ಸೌಲಭ್ಯಗಳು ಹಾಗೂ ಅವರ ಮುಂದಿರುವ ಆಯ್ಕೆಗಳನ್ನು ಗಮನಕ್ಕೆ ತರುತ್ತಿದ್ದೇವೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಿದ್ದೇವೆ. ಅವರೆಲ್ಲ ದೂರ ಶಿಕ್ಷಣದ ಮೂಲಕವೂ ಪದವಿ ಪಡೆಯಬಹುದಾಗಿದೆ’ ಎಂದು ಮಾಹಿತಿ ನೀಡಿದರು.

ಕಲಿತರೇ ಖುಷಿ ಅಲ್ಲವೇ: ‘ಮಕ್ಕಳು ಕಾಲೇಜಿಗೆ ಹೋದರೆ ಕೆಲಸ ಮಾಡುವರ‍್ಯಾರು ಎಂಬ ಭಾವನೆ ಗ್ರಾಮೀಣ ಭಾಗಗಳಲ್ಲಿ ಎಲ್ಲ ಪೋಷಕರಲ್ಲೂ ಇರುತ್ತದೆ. ಕೆಲಸ ಮಾಡಿಕೊಂಡೇ ಬಿಡುವಿನ ಅವಧಿಯಲ್ಲಿ ಪದವಿ ಪಡೆಯಬಹುದು ಎಂದಾದರೆ ಏಕೆ ಶಿಕ್ಷಣ ಕೊಡಿಸಬಾರದು. ಮಕ್ಕಳು ಕಲಿತರೆ ಹೆತ್ತವರಿಗೆ ಖುಷಿಯೇ ಅಲ್ಲವೇ. ಹೀಗಾಗಿ, ನಾನು ಶಿಕ್ಷಣ ಕೊಡಿಸಲು ಒಪ್ಪಿದ್ದೇನೆ‘ ಎಂದು ಭೀಮಾರೆಡ್ಡಿ ಹೇಳಿದರು.

ಮತ್ತೆ ವಿದ್ಯಾರ್ಥಿಗಳಾದ ಹಿರಿಯರು!

‘ದಾವಣಗೆರೆಯಲ್ಲಿ ಗುರುಮೂರ್ತಿ ಹಿರೇಮಠ ಎಂಬ ಶಿಕ್ಷಕರ ಕುಟುಂಬದ ಮನೆಯಿಂದ ಆಂದೋಲನ ಪ್ರಾರಂಭಿಸಿದ್ದೆವು. ದೂರಶಿಕ್ಷಣದ ಮೂಲಕ ಪದವಿ ಪಡೆಯುವುದಾಗಿ ಅರ್ಜಿ ಸ್ವೀಕರಿಸಿದ ಅವರು, ತಮ್ಮ ಕುಟುಂಬದ ಇನ್ನೂ ಇಬ್ಬರಿಗೆ ಪದವಿ ಶಿಕ್ಷಣ ಕೊಡಿಸಲು ಮುಂದೆ ಬಂದಿದ್ದಾರೆ. ಇದೇ ತಿಂಗಳಲ್ಲಿ ಮೂವರೂ ಪ್ರವೇಶ ಪಡೆದು, ಅಧಿಕೃತವಾಗಿ ವಿ.ವಿಯ ವಿದ್ಯಾರ್ಥಿಗಳಾಗಲಿದ್ದಾರೆ’ ಎಂದು ಹೊಸಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT