ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಲ ಮಾಡಿದ್ದೆ ರಾಜ್ಯ ಸರ್ಕಾರದ ಸಾಧನೆ: ಬಸವರಾಜ ಬೊಮ್ಮಾಯಿ

Published 5 ಏಪ್ರಿಲ್ 2024, 15:57 IST
Last Updated 5 ಏಪ್ರಿಲ್ 2024, 15:57 IST
ಅಕ್ಷರ ಗಾತ್ರ

ಹಾನಗಲ್: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಾಲ ಮಾಡುವುದನ್ನು ಬಿಟ್ಟು ಬೇರೆನೂ ಮಾಡಿಲ್ಲ. ಕಾಂಗ್ರೆಸ್ ಶಾಸಕರೇ ಪತ್ರ ಬರೆದು, ತಮ್ಮ ಕ್ಷೇತ್ರದಲ್ಲಿ ಬರ ನಿರ್ವಹಣೆ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿ ಮಾಡಿದೆ’ ಎಂದು ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಹಿರೂರ ಗ್ರಾಮದಲ್ಲಿ ಶುಕ್ರವಾರ ನಡೆದ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಬರಗಾಲ ಗ್ಯಾರಂಟಿ,
ಭ್ರಷ್ಟಾಚಾರ ಗ್ಯಾರಂಟಿ, ಜೀರೋ ಅಭಿವೃದ್ಧಿ ಗ್ಯಾರಂಟಿ, ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಕೂಡ ಗ್ಯಾರಂಟಿ’ ಎಂದು ಹೇಳಿದರು.

‘ಲೋಕಸಭೆ ಚುನಾವಣೆ ತನ್ನದೇ ಮಹತ್ವ ಹೊಂದಿದೆ. ದೇಶದ ಗಡಿ ಭದ್ರತೆ, ಆಂತರಿಕ ಸುರಕ್ಷತೆ ಮತ್ತು ಪ್ರಗತಿಯ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿರುತ್ತದೆ. ಇದೇ ಕಾರಣಕ್ಕಾಗಿ ಹತ್ತು ವರ್ಷದಿಂದ
ದೇಶದ ಜನತೆ ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತಿದ್ದಾರೆ’ ಎಂದರು.

‘ಹಾನಗಲ್ ಕ್ಷೇತ್ರದಲ್ಲಿ ಸಿ.ಎಂ.ಉದಾಸಿ ಮತ್ತು ಮನೋಹರ ತಹಸೀಲ್ದಾರ್ ನಡುವೆ ಅಭಿವೃದ್ಧಿಯ ವಿಚಾರವಾಗಿ ಪೈಪೋಟಿ ಇತ್ತು. ಈ ಇಬ್ಬರು ನಾಯಕರು ಕ್ಷೇತ್ರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಈಗ ಸಿ.ಎಂ.ಉದಾಸಿ ನಮ್ಮೊಂದಿಗೆ ಇಲ್ಲ. ಅವರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಂಸದನಾದರೂ, ಶಾಸಕನಂತೆ ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಕೊಳ್ಳುತ್ತೇನೆ’ ಎಂದರು.

ಮಾಜಿ ಸಚಿವ ಮನೋಹರ ತಹಸೀಲ್ದಾರ್, ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ರಾಜಣ್ಣ ಪಟ್ಟಣದ, ರಾಘವೇಂದ್ರ ತಹಸೀಲ್ದಾರ್, ರಾಜಶೇಖರ ಕಟ್ಟೆಗೌಡ್ರ, ಜಿ.ಎಸ್.ದೇಶಪಾಂಡೆ,
ಬಿ.ಆರ್.ಪಾಟೀಲ, ಕಸ್ತೂರೆವ್ವ ವಡ್ಡರ, ಭೋಜರಾಜ ಕರೂದಿ, ಚಂದ್ರಣ್ಣ ಹರಿಜನ, ಮಹೇಶ ಕಮಡೊಳ್ಳಿ, ಮಾಲತೇಶ ಸೊಪ್ಪಿನ, ರಾಮನಗೌಡ ಪಾಟೀಲ ಮತ್ತಿತರರು ಇದ್ದರು.

ರಾಜ್ಯ ಸರ್ಕಾರ ಪತನದ ದಿನಗಣನೆ ಆರಂಭ

‘ಒಂದು ವರ್ಷದ ಒಳಗಾಗಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬರುತ್ತದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ರಾಜ್ಯ ಸರ್ಕಾರ ಪತನದ ದಿನಗಣನೆ ಪ್ರಾರಂಭವಾಗಲಿದೆ’ ಎಂದು ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಹೇಳಿದರು.

‘ರಾಜ್ಯ ಸರ್ಕಾರದಲ್ಲಿ ಜನರ ಕೆಲಸಗಳಿಗೆ ಸಮಯವೇ ಇಲ್ಲ. ಅಧಿಕಾರದಲ್ಲಿದ್ದವರು ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಓಡಾಡುತ್ತಿದ್ದಾರೆ. ಕೆಲವು ಸಚಿವರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯ ಮಾಡಲಾಗಿದೆ. 5 ಗ್ಯಾರಂಟಿಗಳ ಜೊತೆಯಲ್ಲಿ ಅಭ್ಯರ್ಥಿಗಳನ್ನು ಸೋಲಿಸುವ ಗ್ಯಾರಂಟಿಯೂ ಸಿದ್ದರಾಮಯ್ಯ ಸರ್ಕಾರದ್ದಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT