ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಕ್ಷೇತ್ರಕ್ಕಾಗಿ ಮಹದೇವಪ್ಪ ಹುಡುಕಾಟ

ಸಿ.ವಿ.ರಾಮನ್ ನಗರ ಬಿಟ್ಟು ಮೈಸೂರಿನತ್ತ ಚಿತ್ತ
Last Updated 2 ಮಾರ್ಚ್ 2018, 11:31 IST
ಅಕ್ಷರ ಗಾತ್ರ

ಮೈಸೂರು: ತಿ.ನರಸೀಪುರ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಈ ಬಾರಿಯ ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ.

ಈವರೆಗೆ ಪ್ರತಿನಿಧಿಸಿಕೊಂಡು ಬಂದಿರುವ ಕ್ಷೇತ್ರವನ್ನು ಮಗ ಸುನಿಲ್ ಬೋಸ್‌ಗೆ ಬಿಟ್ಟುಕೊಡಬೇಕೇ? ಇಲ್ಲವೆ ತಾವೇ ಸ್ಪರ್ಧಿಸಬೇಕೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಈ ಕ್ಷೇತ್ರದಿಂದ ಮಗ ಕಣಕ್ಕಿಳಿದರೆ ಬೇರೆ ಯಾವ ಸುರಕ್ಷಿತ ಕ್ಷೇತ್ರ ಇದೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಪುತ್ರನನ್ನು ರಾಜಕೀಯವಾಗಿ ಮುಂದೆ ತರುವ ಪ್ರಯತ್ನ ಈ ಎಲ್ಲಾ ಗೊಂದಲಗಳಿಗೆ ದಾರಿ ಮಾಡಿಕೊಟ್ಟಿದೆ.

ನಂಜನಗೂಡು ಉಪಚುನಾವಣೆ ಸಮಯದಲ್ಲಿ ಸುನಿಲ್ ಬೋಸ್‌ಗೆ ಟಿಕೆಟ್ ನೀಡುವಂತೆ ಅವರು ಒತ್ತಾಯಿಸಿದ್ದರು. ಬೋಸ್‌ ಸ್ಪರ್ಧಿಸಿದರೆ ಗೆಲುವು ಕಷ್ಟಕರ ಎಂಬ ವಾತಾವರಣ ಇದೆ, ಹೀಗಾಗಿ ಸ್ಪರ್ಧೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಕೊನೆಗೆ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಅವರನ್ನು ಪಕ್ಷಕ್ಕೆ ಕರೆತಂದು ನಿಲ್ಲಿಸಲಾಯಿತು. ನಂಜನ ಗೂಡು ಕ್ಷೇತ್ರದಲ್ಲಿ ಬೋಸ್‌ ಸ್ಪರ್ಧಿಸಿದರೆ, ಫಲಿತಾಂಶ ಏನೇ ಆಗಿದ್ದರೂ ಮುಂದಿನ ಸ್ಪರ್ಧೆಗೆ ವೇದಿಕೆ ಸಿಕ್ಕಂತಾಗುತ್ತದೆ ಎಂಬ ಲೆಕ್ಕಾಚಾರವನ್ನು ಮಹದೇವಪ್ಪ ಹಾಕಿದ್ದರು. ಆದರೆ, ಅದು ಕೈಗೂಡಲಿಲ್ಲ.

ನಂತರದ ಬೆಳವಣಿಗೆಯಲ್ಲಿ, ಮುಂಬರುವ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಿಂದ ಮಗ ಸುನಿಲ್‌ಗೆ, ನಂಜನಗೂಡು ಕ್ಷೇತ್ರದಿಂದ ತಮಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಬಳಿ ಬೇಡಿಕೆ ಇಟ್ಟಿದ್ದರು. ಒಂದು ಜಿಲ್ಲೆಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ, ಈ ರೀತಿ ಮಾಡಿದರೆ ಉತ್ತರ ಕರ್ನಾಟಕ ಭಾಗದ ಬಹುತೇಕ ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್ ಕೇಳುತ್ತಾರೆ. ಆಗ ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಕೊಳ್ಳಬೇಕಾಗುತ್ತದೆ.

ಜತೆಗೆ ನಂಜನಗೂಡಿನಲ್ಲಿ ಕೇಶವ ಮೂರ್ತಿ ಶಾಸಕರಾಗಿ ಒಂದು ವರ್ಷವೂ ಆಗಿಲ್ಲ. ಅವರ ಬದಲಿಗೆ ಬೋಸ್‌ಗೆ ಟಿಕೆಟ್ ನೀಡಿದರೆ ತಪ್ಪು ಸಂದೇಶ ರವಾನೆ ಆಗಬಹುದು ಎಂದು ಮುಖ್ಯಮಂತ್ರಿ ಖಾರವಾಗಿ ಉತ್ತರ ನೀಡಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ನಂಜನಗೂಡಿನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇಶವಮೂರ್ತಿಗೆ ಟಿಕೆಟ್ ನೀಡಲಾಗುವುದು ಎಂದು ಪ್ರಕಟಿಸಿದ್ದರು.

ಮಗನನ್ನು ರಾಜಕೀಯವಾಗಿ ಮುಂದೆ ತರಬೇಕಿದ್ದು, ತಿ.ನರಸೀಪುರ ದಿಂದ ಬೋಸ್‌ಗೆ ಟಿಕೆಟ್ ಕೊಟ್ಟರೆ, ಬೆಂಗಳೂರಿನ ಸಿ.ವಿ.ರಾಮನ್ ನಗರದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಮಹದೇವಪ್ಪ ಕೇಳಿಕೊಂಡಿ ದ್ದರು. ಇದಕ್ಕೆ ಸಿದ್ದರಾಮಯ್ಯ ಸಹ ಒಪ್ಪಿದ್ದರು. ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಪಿ.ರಮೇಶ್ ಮನವೊಲಿಸಿ, ಚುನಾವಣೆ ಸಿದ್ಧತೆ ಆರಂಭಿಸಿದ್ದರು.

ಮೊದಲ ಹಂತದಲ್ಲಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಲಿದೆ ಎಂಬ ವರದಿ ಬಂದಿತ್ತು. ಈ ವಿಚಾರವನ್ನು ರಮೇಶ್‌ಗೆ ತಿಳಿಸಿ ಮಹದೇವಪ್ಪ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿತ್ತು. ಅಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಿ ಸ್ಪರ್ಧೆಗೆ ವೇದಿಕೆ ಸಿದ್ಧಪಡಿಸುವ ಪ್ರಯತ್ನದಲ್ಲಿ ತೊಡಗಿದ್ದರು.

ಅದೇ ಸಮಯಕ್ಕೆ ರಮೇಶ್– ಮಹದೇವಪ್ಪ ನಡುವೆ ಕೆಲ ವಿಚಾರಗಳಲ್ಲಿ ಬಿರುಕು ಕಾಣಿಸಿಕೊಂಡಿತು. ಇದು ದೊಡ್ಡದಾಗುತ್ತಾ ಸಾಗಿದಂತೆ ಅದೇ ಸಮಯಕ್ಕೆ ಮತ್ತೊಮ್ಮೆ ನಡೆಸಿದ ಸಮೀಕ್ಷೆಯಲ್ಲಿ ಮಹದೇವಪ್ಪ ಸ್ಪರ್ಧಿಸಿ ದರೂ ಗೆಲುವು ಕಷ್ಟಕರ, ‘ವಾತಾವರಣ’ ಬದಲಾಗಿದ್ದು ಕಾಂಗ್ರೆಸ್ ತೀವ್ರ ಸ್ಪರ್ಧೆ ಎದುರಿಸಬೇಕಾಗುತ್ತದೆ ಎಂಬ ಅಭಿಪ್ರಾಯ ಕೇಳಿಬಂತು. ಈ ಎಲ್ಲಾ ಬೆಳವಣಿಗೆಗಳ ನಂತರ ಸ್ಪರ್ಧೆಯಿಂದ ಅವರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಮತ್ತೆ ಜಿಲ್ಲೆಯಲ್ಲೇ ಸ್ಪರ್ಧಿಸುವ ಪ್ರಯತ್ನ ನಡೆಸಿದ್ದಾರೆ. ತಿ.ನರಸೀಪುರ ದಿಂದ ಮಗ ಸ್ಪರ್ಧಿಸುವುದರಿಂದ ನಂಜನಗೂಡಿನಿಂದಲೇ ಟಿಕೆಟ್ ನೀಡಬೇಕು ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಇದಕ್ಕೆ ಸಿದ್ದರಾಮಯ್ಯ ಒಪ್ಪುತ್ತಿಲ್ಲ. ನಂಜನ ಗೂಡು ಟಿಕೆಟ್ ವಿಚಾರದಲ್ಲಿ ಇಬ್ಬರ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
***
ಇಬ್ಬರ ನಡುವೆ ಬಿರುಕು

ವಿ.ಶ್ರೀನಿವಾಸ ಪ್ರಸಾದ್‌ ಪಕ್ಷ ತೊರೆಯಲು ಕಾರಣವಾದ ವಿಚಾರಗಳು, ನೋಟು ರದ್ದತಿಯ ನಂತರ ಹಣ ವರ್ಗಾವಣೆ ದಂಧೆ ಆರೋಪದ ಮೇಲೆ ಉನ್ನತ ಅಧಿಕಾರಿಗಳ ಮನೆಗಳ ಮೇಲೆ ನಡೆದ ದಾಳಿ, ನಂಜನಗೂಡು ಉಪಚುನಾವಣೆ ಸಮಯದಲ್ಲಿ ನಡೆದ ಬೆಳವಣಿಗೆಗಳು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು.

ಇವು ಸಿದ್ದರಾಮಯ್ಯ– ಮಹದೇವಪ್ಪ ನಡುವಿನ ಬಿರುಕಿಗೂ ಕಾರಣವಾಗಿದ್ದವು. ಕಳೆದ ದಸರಾ ಸಮಯದಲ್ಲಿ ಭಿನ್ನಾಭಿಪ್ರಾಯದ ವಿಚಾರಗಳು ಅಲ್ಲಲ್ಲಿ ಚರ್ಚೆಯಾಗಿದ್ದವು. ಒಂದು ಹಂತದಲ್ಲಿ ಮಹದೇವಪ್ಪ ಅವರಿಂದ ಸಿದ್ದರಾಮಯ್ಯ ಸ್ವಲ್ಪಮಟ್ಟಿನ ಅಂತರ ಕಾಯ್ದುಕೊಂಡಿದ್ದರು. ನಂತರ ಮಹದೇವಪ್ಪ ಅವರೇ ಹತ್ತಿರಕ್ಕೆ ಬಂದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT