ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು | ಪಹಣಿಯಲ್ಲಿನ ನ್ಯೂನತೆ ಸರಿಪಡಿಸಲು ಆಗ್ರಹ: ವಿವಿಧ ರೈತ ಸಂಘಗಳಿಂದ ಧರಣಿ

ಕಂದಾಯ ಇಲಾಖೆ ಮುಂಭಾಗದಲ್ಲಿ ವಿವಿಧ ರೈತ ಸಂಘಗಳಿಂದ ಧರಣಿ
Published 26 ಫೆಬ್ರುವರಿ 2024, 14:33 IST
Last Updated 26 ಫೆಬ್ರುವರಿ 2024, 14:33 IST
ಅಕ್ಷರ ಗಾತ್ರ

ಸವಣೂರು: ತಾಲ್ಲೂಕಿನ ರೈತರ ಪಹಣಿಯಲ್ಲಿನ ನ್ಯೂನತೆ ಸರಿಪಡಿಸುವಂತೆ ಹಲವು ಬಾರಿ ಕಂದಾಯ ಇಲಾಖೆಗೆ, ಜಿಲ್ಲಾಡಳಿತ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಇದುವರೆಗೂ ಪರಿಹರಿಸಿಲ್ಲ ಎಂದು ಆರೋಪಿಸಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಕಂದಾಯ ಇಲಾಖೆ ಮುಂಭಾಗದಲ್ಲಿ ಸೋಮವಾರ ಅನಿರ್ದಿಷ್ಟ ಸತ್ಯಾಗ್ರಹ ಚಳುವಳಿ ಕೈಗೊಂಡರು.

ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬಾರ್ಕಿ ಮಾತನಾಡಿ, ‘ರೈತರ ಪಹಣಿಯಲ್ಲಿನ ವಿವಿಧ ಷರತ್ತುಗಳನ್ನು ಕಡಿಮೆ ಮಾಡದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ಸೌಲಭ್ಯ, ಸರ್ಕಾರದ ಸೌಲಭ್ಯ, ಅಣ್ಣ ತಮ್ಮಂದಿರಿಗೆ ಆಸ್ತಿ ವಿಂಗಣೆ ಮಾಡಿಕೊಳ್ಳಲಾಗದೆ ನಿತ್ಯ ಕಂದಾಯ ಇಲಾಖೆಗೆ ಅಲೆದಾಡುವಂತಾಗಿದೆ. ಸ್ಥಳೀಯ ಶಾಸಕರಾದ ಬಸವರಾಜ ಬೊಮ್ಮಾಯಿ ಅವರು ನೀರಾವರಿ, ಗೃಹ ಸಚಿವ ಹಾಗೂ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ನಡೆಸಿದೂ ಸ್ಥಳೀಯ ರೈತರ ಪಹಣಿಯಲ್ಲಿನ ನ್ಯೂನತೆ ಸರಿಪಡಿಸದೇ ಕ್ರಮ ಕೈಗೊಳ್ಳದೆ ರೈತರಿಗೆ ಅನ್ಯಾಯ ಮಾಡಿದ್ದಾರೆ. ರಾಜಕಾರಣಿಗಳು ರೈತರನ್ನು ಚುನಾವಣೆಯಲ್ಲಿ ಮತಬ್ಯಾಂಕ್‌ ಮಾಡಿಕೊಂಡಿದ್ದಾರೆ ಹೊರತು ಅವರ ಹಿತಾಸಕ್ತಿ ಕಾಯಲು ನಿಷ್ಕಾಳಜಿ ವಹಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಳಕ್ಕೆ ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಭೇಟಿ ನೀಡಿ, ‘ನಮ್ಮ ಅಧಿಕಾರ ವ್ಯಾಪ್ತಿಯಲ್ಲಿನ ಪಹಣಿ ಪತ್ರಿಕೆಯಲ್ಲಿನ ನ್ಯೂನತೆ ಸರಿಪಡಿಸುವ ಕೆಲಸವನ್ನು ತ್ವರಿತವಾಗಿ ಮಾಡುತ್ತೇವೆ. ಉಳಿದ ಕೆಲಸವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಅವರ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆ ಹಿಂಪಡೆಯಿರಿ’ ಎಂದು ಮನವಿ ಮಾಡಿದರು.

ರೈತ ಮುಖಂಡ ಚನ್ನಪ್ಪ ಮರಡೂರ ಮಾತನಾಡಿ, ‘ರೈತರ ಪಹಣಿಯಲ್ಲಿನ ನ್ಯೂನತೆ ಸರಿಪಡಿಸುವ ಭರವಸೆ ನೀಡಿದರೆ ಸಾಲದು. ಕಂದಾಯ ಸಚಿವರು ಆಗಮಿಸಿ ಎಲ್ಲ ನ್ಯೂನತೆಗಳನ್ನು ಸರಿಪಡಿಸುವರೆಗೆ ಹೋರಾಟ ಮುಂದುವರೆಸುತ್ತೇವೆ’ ಎಂದು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್‌ ಭರತ್‌ರಾಜ ಕೆ.ಎನ್, ಡಿ.ವಾಯ್.ಎಸ್.ಪಿ ಮಂಜುನಾಥ ಜಿ, ಸಿಬಿಐ ಶಶಿಧರ ಜೆ, ಹುಲಗೂರ ಪಿಎಸ್‌ಐ ಪರಶುರಾಮ ಕಟ್ಟಿಮನಿ ಬೇಟಿ ನೀಡಿದರು.

ರೈತ ಸಂಘ ರಾಜ್ಯ ಘಟಕ ಅಧ್ಯಕ್ಷ ಸಿದ್ದನಗೌಡ ಪಾಟೀಲ, ರೈತ ಸಂಘದ ಪದಾಧಿಕಾರಿಗಳಾದ ರಮೇಶ ದೊಡ್ಡೂರ, ಸಂಗಮೇಶ ಪಿತಾಂಬ್ರಶೆಟ್ಟಿ, ನೂರಅಹ್ಮದ ಮುಲ್ಲಾ, ಅಬ್ದುಲ್‌ಖಾದರ ಬುಡಂದಿ, ಬಸವರಾಜ ದೇವಗೇರಿ, ಮಲ್ಲೇಶ ಬಾರ್ಕಿ, ಫಕ್ಕಿರಪ್ಪ ಜೋಗೇರ, ರವಿ ದೊಡ್ಡಮನಿ,  ಸೇರಿದಂತೆ ತಾಲ್ಲೂಕಿನ ರೈತರು ಇದ್ದರು.

ಅಧಿಕಾರಿಗಳ ನಿರ್ಲಕ್ಷ್ಯ

‘ರೈತರ ಜಮೀನಿನ ದಾಖಲೆಗಳು  2000ರಲ್ಲಿ ನಡೆದ ನೀರಿನ ಗಲಬೆಯಲ್ಲಿ ಕಂದಾಯ ಇಲಾಖೆಗೆ ಬಿದ್ದ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಮೂಲ ದಾಖಲೆಗಳು ಯಾವುದು ಕಚೇರಿಯಲ್ಲೂ ಇಲ್ಲ. ರೈತರ ಬಳಿ ಇದ್ದ ಮೂಲ ದಾಖಲೆಗಳನ್ನು ನೀಡಿದರೆ ಮಾತ್ರ ದಾಖಲೆಗಳನ್ನು ಸರಿಪಡಿಸಲಾಗುತ್ತದೆ ಎಂದು ಹೇಳುವ ಮೂಲಕ ಅಧಿಕಾರಿಗಳು ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಬಾರ್ಕಿ ದೂರಿದರು. ‘ಕಚೇರಿಯ ಪಕ್ಕದ ಗೋದಾಮಿನಲ್ಲಿ ಕೆಲವು ದಾಖಲೆಗಳು ದೊರೆತಿದ್ದು ಇನ್ನು ಕೆಲವು ಗೆದ್ದಿಲು ತಿಂದು ಹಾಳಾಗಿವೆ. ಇದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯೇ ಕಾರಣ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT