ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು: ಕಾಂಗ್ರೆಸ್‌ ಸೇರಲು ಆರ್‌.ಶಂಕರ್‌ ನಿರ್ಧಾರ

ಬಿಜೆಪಿ ನನ್ನ ಬೆನ್ನಿಗೆ ಇರಿದಿದೆ: ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಕಣ್ಣೀರು
Published 1 ಏಪ್ರಿಲ್ 2024, 7:00 IST
Last Updated 1 ಏಪ್ರಿಲ್ 2024, 7:00 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಬಗ್ಗೆ ಮಾಜಿ ಸಚಿವ ಆರ್‌.ಶಂಕರ್‌ ಅವರು ಇಲ್ಲಿನ ಬೀರೇಶ್ವರನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಭಾನುವಾರ ಕಾರ್ಯಕರ್ತರ ಸಭೆ ನಡೆಸಿದರು. ಆರ್‌.ಶಂಕರ್‌ ಅಭಿಮಾನಿಗಳ ಸಂಘದಿಂದ 

ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಕರ್ತರ ಜೊತೆಗೆ ಚರ್ಚಿಸಿದ ಅವರು, ನೂರಾರು ಕಾರ್ಯಕರ್ತರ ಅನಿಸಿಕೆ ಪಡೆದು ಕಾಂಗ್ರೆಸ್‌ ಪಕ್ಷ ಸೇರುವ ಬಗ್ಗೆ ಘೋಷಣೆ ಮಾಡಿದ್ದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

‘ನನ್ನ ಪದೇ ಪದೇ ಕೆಲವರು ಮಾತಿನಿಂದ ಚುಚ್ಚಿ ಕೊಲ್ಲುತ್ತಿದ್ದಾರೆ. ತಾಲ್ಲೂಕು ಅಭಿವೃದ್ಧಿಗಾಗಿ ಕೆಲವು ನಿರ್ಧಾರ ತೆಗೆದುಕೊಂಡೆ. ಆಗ ನನ್ನನ್ನು ಇಬ್ಬರು ಮುಖ್ಯಮಂತ್ರಿಗಳು ಗುಲಾಮನಂತೆ ಕಂಡರು. ಅದರಲ್ಲಿ ಬಿಎಸ್ ಯಡಿಯೂರಪ್ಪ ಮೊದಲಿನವರು. ತಾಲ್ಲೂಕಿನ ಅಭಿವೃದ್ಧಿಗಾಗಿ ಬಿಜೆಪಿಗೆ ಹೋದೆ. ಬಿಜೆಪಿ ಪಕ್ಷ ನಂಬಿದೆ. ನನ್ನ ನಂಬಿಕೆಯನ್ನು ಯಡಿಯೂರಪ್ಪ ಅವರು ಕುತ್ತಿಗೆ ಹಿಚುಕಿ ಕೊಂದರು’ ಎಂದು ಆರೋಪಿಸಿದರು.

ಕಳೆದ ಉಪ ಚುನಾವಣೆಯಲ್ಲಿ ನಮ್ಮ ಮನೆಗೆ ಬಂದು ರೊಟ್ಟಿ ಬುತ್ತಿ ನೀಡಿದ್ದ ಮಾಜಿ ಸಿಎಂ ಬೊಮ್ಮಾಯಿ ನನಗೆ ಮೋಸ ಮಾಡಿದರು ಎಂದು  ಶಂಕರ್ ಕಣ್ಣಿರು ಹಾಕಿದರು. ಇನ್ನು ಮೇಲೆ ನಿಮ್ಮ ಅಭಿಪ್ರಾಯ ಪಡೆಯದೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವದಿಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ನಾನು ಬೆಂಬಲ ನೀಡಲು ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದೇನೆ. ಎಲ್ಲ ಕಡೆ ಕಾಂಗ್ರೆಸ್‌ ಪಕ್ಷದ ಅಲೆ ಇದೆ. ಸರ್ಕಾರದ ಗ್ಯಾರಂಟಿಗಳು ಕೈಹಿಡಿದಿವೆ. ಕಾಂಗ್ರೆಸ್ ಪಕ್ಷದ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದದೇವರಮಠ ಅವರನ್ನು ಈ ಕ್ಷೇತ್ರದಿಂದ 1 ಲಕ್ಷಕ್ಕೂ ಹೆಚ್ಚು ಮತಗಳನ್ನು ನಾನು ಕೊಡಿಸುವೆ ಎಂದು ಭರವಸೆ ನೀಡಿದರು.

ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪಕ್ಷ ಸೇರುವೆ. ನಂತರ ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಶಾಸಕ ಪ್ರಕಾಶ ಕೋಳಿವಾಡ ಅವರ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡಲಾಗುವುದು ಎಂದರು.

ಕುರುಬ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ ಮಾತನಾಡಿ, ಹಿಂದುಳಿದ ವರ್ಗಕ್ಕೆ ಬಿಜೆಪಿ ಬಾರಿ ಅನ್ಯಾಯ ಮಾಡಿದೆ. ಹಿಂದುಳಿದವರನ್ನು ತುಳಿಯಲು ಹೊರಟಿದ್ದಾರೆ. ಇದಕ್ಕೆ ಕುರುಬ ಸಮಾಜ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದೆ ಎಂದರು.

ಆರ್‌.ಶಂಕರ ಅಭಿಮಾನಿ ಬಳಗದ ಮುಖಂಡ ರಾಜು ಅಡಿವೆಪ್ಪನವರ ಮಾತನಾಡಿ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಅಖಂಡ ಧಾರವಾಡ ಜಿಲ್ಲೆಗೆ ಏನೂ ಅಭಿವೃದ್ಧಿ ಕೈಗೊಂಡಿಲ್ಲ. ನಿರುದ್ಯೋಗಿಗಳಿಗೆ ಯಾವುದೇ ಉದ್ಯೋಗ ನೀಡಿಲ್ಲ. ಅವರನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ. ಇನ್ನು ಮುಂದೆ ಇಂತಹ ತಪ್ಪು ಮಾಡಲ್ಲ ಎಂದರು.

ಮುಖಂಡರಾದ ರತ್ನಾಕರ ಕುಂದಾಪುರ, ಕೃಷ್ಣಮೂರ್ತಿ ಸುಣಗಾರ, ಶಿವಪ್ಪ ಮಣೇಗಾರ ಮಾತನಾಡಿದರು.

ನಗರಸಭೆ ಸದಸ್ಯ ಹಬೀಬ ಕಂಬಳಿ ಹಾಗೂ ನೂರಲ್ಲಾ ಖಾಜಿ, ಮಂಜಯ್ಯ ಚಾವಡಿ, ನಂದೀಶ ಆರ್‌, ಗಣೇಶ ಗೋಣಿಬಸಮ್ಮನವರ, ಭೀಮಣ್ಣ ಅರಳೀಕಟ್ಟಿ, ಲಕ್ಷ್ಮೀ ಕದರಮಂಡಲಗಿ, ಶಿವಕುಮಾರ ಕೋಲಕಾರ, ಶ್ರೀನಿವಾಸ ತುಮ್ಮಿನಕಟ್ಟಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT