ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡಸ | ಚರಂಡಿ ಅವ್ಯವಸ್ಥೆ: ಮನೆಗೆ ನೀರು-ಅಧಿಕಾರಿಗಳಿಗೆ ಗ್ರಾಮಸ್ಥರ ಹಿಡಿಶಾಪ

ಪುಟ್ಟಪ್ಪ ಲಮಾಣಿ
Published 18 ಮೇ 2024, 5:59 IST
Last Updated 18 ಮೇ 2024, 5:59 IST
ಅಕ್ಷರ ಗಾತ್ರ

ತಡಸ (ಅಡವಿಸೋಮಪುರ): ಕಳೆದ ವರ್ಷ ಮಳೆ ಸುರಿದ ಸಂದರ್ಭದಲ್ಲಿ ಹಲವು ಮನೆ ಹಾಗೂ ಅಂಗನವಾಡಿ ಒಳಗೆ ನೀರು ಹೊಕ್ಕು ತೊಂದರೆ ಉಂಟಾಗಿತ್ತು. ಈ ವರ್ಷವೂ ಮಳೆ ಆರಂಭವಾಗಿದ್ದು, ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಕಾರಣ ಗುರುವಾರ ಸುರಿದ ಮಳೆಗೆ ಶಾಲಾ ಮೈದಾನದಲ್ಲಿ ಮಳೆ ನೀರು ತುಂಬಿಕೊಂಡಿತು.

ಅಡವಿ ಸೋಮಪುರ ಗ್ರಾಮದಲ್ಲಿ ಸಮರ್ಪಕವಾಗಿ ಚರಂಡಿ ಕಾಲುವೆಗಳಿಲ್ಲದೆ ಹಾಗೂ ಇರುವ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಮಳೆ ನೀರು ಸರಾಗವಾಗಿ ಹೋಗಲು ತಡೆಯಾಗಿ ಮನೆಗಳಿಗೆ ನೀರು ನುಗ್ಗುತ್ತದೆ.

‘ಈ ಕುರಿತು ಹಲವು ಬಾರಿ ಕುನ್ನೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಗಮನಕ್ಕೆ ತಂದರೂ ಅಗತ್ಯ ಕಾರ್ಯ ಮಾತ್ರ ಆಗಿಲ್ಲ. ಮನೆಯೊಳಗೆ ನೀರು ನುಗ್ಗಿ ಹಾನಿ ಅನುಭವಿಸುವಂತಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿ ಕಾಲುವೆಯನ್ನು ಸರಿಪಡಿಸಬೇಕು’ ಎಂದು ಗ್ರಾಮದ ಗೌರಮ್ಮ ಪಾಟೀಲ್ ಆರೋಪಿಸಿದರು.

ಹಾಳಾದ ಶುದ್ಧ ನೀರಿನ ಘಟಕ: ‘ಅಡವಿ ಸೋಮಪುರ ಗ್ರಾಮಕ್ಕೆ ಸರಿಯಾಗಿ ಕುಡಿಯುವ ನೀರಿನ ಪೂರೈಕೆ ಆಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವೂ ಪಾಳು ಬಿದ್ದಿದ್ದು, ಲಕ್ಷಗಟ್ಟಲೆ ರೂಪಾಯಿ ವ್ಯಯ ಮಾಡಿರುವ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮೀನಮೇಷ ಎಣಿಸುತ್ತಿದೆ’ ಎಂದು ಗ್ರಾಮಸ್ಥರು ಹೇಳಿದರು.

ಸಿ.ಡಿ ಗುಣಮಟ್ಟ ಕಳಪೆ: ‘ಆರು ತಿಂಗಳ ಹಿಂದೆ ದರ್ಗಾ ಬಳಿ ಸಿ.ಡಿ ನಿರ್ಮಾಣ ಮಾಡಲಾಗಿದೆ. ಆದರೆ ಅದಕ್ಕೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸದ ಕಾರಣ ಕಾಮಗಾರಿ ಗುಣಮಟ್ಟವೂ ಕಳಪೆ ಆಗಿದೆ. ಚರಂಡಿಯು ಚಿಕ್ಕದಾಗಿದ್ದು. ವಾಹನಗಳು ಸಂಚರಿಸುತ್ತಿರುವುದರಿಂದ ಕೆಲವೇ ದಿನಗಳಲ್ಲಿ ಅವು ಹಾಳಾಗುತ್ತವೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಗ್ರಾಮದ ಈರಣ್ಣ ವಾಲಿಕಾರ್ ಕಿಡಿಕಾರಿದರು.

ಗುರುವಾರ ಮಳೆ ಸುರಿದಾಗ ಅಡವಿಸೋಮಪುರ ಗ್ರಾಮದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿತು
ಗುರುವಾರ ಮಳೆ ಸುರಿದಾಗ ಅಡವಿಸೋಮಪುರ ಗ್ರಾಮದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿತು
ಚರಂಡಿ ಹೂಳನ್ನು ಶೀಘ್ರವೇ ತೆರವು ಮಾಡಿಸುತ್ತೇವೆ. ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮಸ್ಥರು ಬಳಸದೇ ಇರುವುದರಿಂದ ಕಾರ್ಯ ನಿರ್ವಹಿಸುತ್ತಿಲ್ಲ
ಎಸ್.ಎಸ್. ಪಾವೀನ್ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕುನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT