ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು ನಗರಸಭೆ: ಮೊದಲ ಹಂತದ ಆಯವ್ಯಯ ಪೂರ್ವಭಾವಿ ಸಭೆ

Published 3 ಜನವರಿ 2024, 16:07 IST
Last Updated 3 ಜನವರಿ 2024, 16:07 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಬುಧವಾರ ಪ್ರಸಕ್ತ ಸಾಲಿನ ಸಾರ್ವಜನಿಕರ ಮೊದಲ ಹಂತದ ಬಜೆಟ್‌ ಪೂರ್ವ ಭಾವಿ (ಆಯವ್ಯಯ) ಸಭೆ ನಡೆಯಿತು. ನಗರಸಭಾ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರತಿ ವರ್ಷ ಆಯವ್ಯಯ ಸಭೆಗೆ ಸಾರ್ವಜನಿಕರಿಂದ ಅನೇಕ ಸಲಹೆ ಸೂಚನೆ ಪಡೆಯುತ್ತೀರಿ. ಅವುಗಳಲ್ಲಿ ಒಂದಾದರೂ ಅನುಷ್ಠಾನಕ್ಕೆ ಬರುವುದಿಲ್ಲ. ಪ್ರತಿ ವರ್ಷವೂ ಹಳೆಯ ಸಮಸ್ಯೆಗಳೇ ಹೊಸ ಸಮಸ್ಯೆಗಳಾಗಿ ಪರಿವರ್ತನೆ ಆಗುತ್ತಿವೆ ಎಂದು ಅಧಿಕಾರಿಗಳನ್ನು ಸದಸಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ನಗರಸಭೆ ಅಧ್ಯಕ್ಷರಿಲ್ಲದೆ ಈ ಸಭೆ ನಡೆಯುವುದು ಸೂಕ್ತವಲ್ಲ. ನಗರಸಭೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರನ್ನು ಸಭೆಗೆ ಕರೆಸಿ ಅವರ ಸಮ್ಮುಖದಲ್ಲಿಯೇ ಬಜೆಟ್‌ ಪೂರ್ವ ಭಾವಿ ಸಭೆ ನಡೆಯಲಿ ಎಂದು ಪಟ್ಟು ಹಿಡಿದಾಗ ಪೌರಾಯುಕ್ತ ನಿಂಗಪ್ಪ ಎಚ್. ಕುಮ್ಮಣ್ಣನವರ ಅವರು ಆಯವ್ಯಯದ ಬಗ್ಗೆ ನಿಮ್ಮ ಸಲಹೆ ಸೂಚನೆಗಳನ್ನು ಮೊದಲು ನೀಡಿರಿ ಅವುಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದಾಗ ಸಭೆ ಮುಂದುವರೆಯಿತು.

ನಗರಸಭೆಯ ಅವ್ಯವಸ್ಥೆ, ಸಾರ್ವಜನಿಕರ ಸಮಸ್ಯೆಗಳ ಹಾಗೂ ಅಧಿಕಾರಿಗಳ ನಿರ್ಲಕ್ಷತನದ ಬಗ್ಗೆ ಸಾರ್ವಜನಿಕರು ಅಹವಾಲು ಹೇಳಿಕೊಂಡಾಗ ಪೌರಾಯುಕ್ತರು ಆಯವ್ಯಯದ ಬಗ್ಗೆ ಮಾತ್ರ ಸಲಹೆ ಸೂಚನೆ ನೀಡಲು ಒತ್ತಿ ಹೇಳಿದರು.

ನಗರದ ಅಂಗಡಿ, ಪ್ರಮುಖ ವೃತ್ತಗಳು, ಚಿತ್ರಮಂದಿರಗಳು, ಸರ್ಕಾರಿ ಕಚೇರಿಗಳ ನಾಮಫಲಕಗಳನ್ನು ಕನ್ನಡದಲ್ಲಿ ಬರೆಸಲು ಕನ್ನಡ ಪರ ಸಂಘಟನೆ ಅಧ್ಯಕ್ಷ ಪರಮೇಶ ಮಠದ ಹಾಗೂ ನಿತ್ಯಾನಂದ ಕುಂದಾಪುರ ಸೂಚಿಸಿದರು.

ನಗರದ ಮುಖ್ಯ ರಸ್ತೆಗಳ ಪ್ರಮುಖ ವರ್ತುಲಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಡಾ.ಗಿರೀಶ ಕೆಂಚಪ್ಪನವರ ಸಭೆಗೆ ತಿಳಿಸಿದರು.

ಅವಶ್ಯಕತೆ ಇರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ರಾಜ ಕಾಲುವೆ ದುರಸ್ಥಿಪಡಿಸಬೇಕು. ನಗರದ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು, ಉದ್ಯಾನವನಗಳಲ್ಲಿ ಜಾಲಿ ಮುಳ್ಳಿನ ಕಂಠಿಗಳು ಬೆಳೆದಿವೆ. ಸ್ವಚ್ಚಗೊಳಿಸಿ ಫೆನ್ಸಿಂಗ್‌ ಹಾಕಿ ಅಗತ್ಯ ಗಿಡಗಳನ್ನು ಹಚ್ಚಿ ನಗರದ ಸೌಂದರರ್ಯ ಹೆಚ್ಚಿಸಬೇಕು ಎಂದು ಡಾ. ನಾರಾಯಣಸಾ ಪವಾರ ಮನವಿ ಮಾಡಿದರು.

ದೇವರಗುಡ್ಡ ರಸ್ತೆಯ ವೀರಶೈವ ಮುಕ್ತಿಧಾಮ ರಸ್ತೆ ಸಂಪೂರ್ಣ ಕಿತ್ತುಹೋಗಿದೆ. ಅನೇಕ ವಾರ್ಡಗಳಲ್ಲಿ ರಸ್ತೆಗಳು ಹದಗೆಟ್ಟು ಹೋಗಿವೆ. ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಬೇಕು, ಕೊಟ್ಟೂರೇಶ್ವರಮಠದ ಸಮೀಪದ ದೊಡ್ಡ ಕೆರೆ ಅಭಿವೃದ್ದಿಪಡಿಸಬೇಕು. ನಗರಸಭೆ ಕ್ರೀಡಾಂಗಣದ ಅಭಿವೃದ್ಧಿ ಮಾಡಿ ಕ್ರೀಡಾಪಟುಗಳಿಗೆ ಉತ್ತೇಜನ ಸಿಗುವಂತಾಗಬೇಕು. ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು. ಸಾರ್ವಜನಿಕರ ಆಸ್ತಿಯ ಖಾತೆಯ ಇ- ಸ್ವತ್ತು ಪಡೆಯಲು ಸರಳೀಕರಿಸಬೇಕು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಅನೇಕರು ಸಲಹೆ ನೀಡಿದರು.

ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ ಅವರು ನಾಯಿಗಳನ್ನು ಹಿಡಿಯುವ, ಜೀವ ತೆಗೆಯುವ ಅಧಿಕಾರ ಕಾನೂನಿಗೆ ಮತ್ತು ನಗರಸಭೆಗೆ ಅಧಿಕಾರ ಇಲ್ಲ. ನಾಯಿಗಳ ಸಂತಾನೋತ್ಪತ್ತಿ ಕ್ಷೀಣಿಸಲು ಪಶು ಸಂಗೋಪನಾ ಇಲಾಖೆಯಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ತಿಳಿಸಿದರು. ರಸ್ತೆ, ಚರಂಡಿ ಉದ್ಯಾನ ದುರಸ್ಥಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಗರಸಭೆ ಸದಸ್ಯರು ಮತ್ತು ನಾಗರಿಕರು ನೀಡಿರುವ ಸಲಹೆಗಳನ್ನು ಪರಿಗಣಿಸಿ, ನಗರಸಭೆ ಅನುದಾನದ ಲಭ್ಯತೆ ನೋಡಿಕೊಂಡು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ನಗರಸಭಾ ಸದಸ್ಯರಾದ ಪ್ರಕಾಶ ಪೂಜಾರ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ, ತ್ರಿವೇಣಿ ಪವಾರ, ಮಲ್ಲಿಕಾರ್ಜುನ ಅಂಗಡಿ, ಪುಟ್ಟಪ್ಪ ಮರಿಯಮ್ಮನವರ, ಪ್ರಭಾವತಿ ತಿಳವಳ್ಳಿ, ರಮೇಶ್ ಕರಡಣ್ಣನವರ, ನೂರಲ್ಲಾ ಖಾಜಿ, ನಾಗರಾಜ್ ಪವಾರ, ಜಯಶ್ರೀ ಪಿಸೆ ಹಾಗೂ ಸಾರ್ವಜನಿಕರಾದ ಡಾ. ಎಸ್ .ಎಲ್. ಪವಾರ, ಗುರುಪ್ರಸಾದ್ ಜಂಬಗಿ, ಶಿವಕುಮಾರ ಜಾಧವ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT