ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿಗೆ ನದಿ ನೀರು ಪೂರೈಕೆ ಸ್ಥಗಿತ

ಉಲ್ಬಣಿಸಿದ ಕುಡಿಯುವ ನೀರಿನ ಸಮಸ್ಯೆ; ಹೊಂಡ ಸ್ವಚ್ಛಗೊಳಿಸದೆ ಕಲುಷಿತಗೊಂಡ ನೀರು
Published 3 ಏಪ್ರಿಲ್ 2024, 4:39 IST
Last Updated 3 ಏಪ್ರಿಲ್ 2024, 4:39 IST
ಅಕ್ಷರ ಗಾತ್ರ

ಬ್ಯಾಡಗಿ: ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಯಂತೆ ಸಕಾಲಕ್ಕೆ ಮಳೆಯಾಗದೆ ಬಿತ್ತನೆ ಮಾಡಿದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಕೆರೆ ಕಟ್ಟೆಗಳ ಒಡಲು ಬರಿದಾಗಿದ್ದು, ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಪಟ್ಟಣದಲ್ಲಿರುವ ಕುಡಿಯುವ ನೀರಿನ ಹೊಂಡವನ್ನು ಸ್ವಚ್ಛಗೊಳಿಸಿ ಸಕಾಲಕ್ಕೆ ನದಿ ನೀರು ಸಂಗ್ರಹಿಸಿದ್ದರೆ, ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಹೊಂಡಕ್ಕೆ ನೀರು ಪೂರೈಕೆಯಾಗಿಲ್ಲ, ಹೀಗಾಗಿ ಅದರಲ್ಲಿ ಸಂಗ್ರಹವಿರುವ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಾಗಿಲ್ಲ.

‘ಹೊಂಡವನ್ನು ಸ್ವಚ್ಛಗೊಳಿಸುವಲ್ಲಿ ಬ್ಯಾಡಗಿ ಪುರಸಭೆ ವಿಫಲವಾಗಿದೆ. ಪುರಸಭೆಗೆ ಹಲವಾರು ಬಾರಿ ಮೌಖಿಕವಾಗಿ ಮನವಿ ಮಾಡಿಕೊಂಡರೂ ಯಾರೂ ಹೊಂಡವನ್ನು ಸ್ವಚ್ಛಗೊಳಿಸಲು ಮುಂದಾಗಲಿಲ್ಲ’ ಎಂದು ನಿವೃತ್ತ ನೌಕರ ಬಸವರಾಜ ದೇಸೂರ ಅಸಮಾಧಾನ ವ್ಯಕ್ತಪಡಿಸಿದರು.

ಬತ್ತಿದ ತುಂಗಭದ್ರಾ: ಈಗ ತುಂಗಭದ್ರಾ ನದಿಯ ಒಡಲು ಬರಿದಾಗಿದೆ. ಬ್ಯಾಡಗಿ ಪಟ್ಟಣಕ್ಕೆ ಮುದೇನೂರ ಜಾಕ್‌ವೆಲ್‌ನಿಂದ ಪೂರೈಕೆಯಾಗುತ್ತಿದ್ದ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಹೊಂಡದಲ್ಲಿ ನೀರು ಸಂಗ್ರಹವಾಗಿದ್ದರೆ ಎಷ್ಟೊತ್ತಿಗಾದರೂ ಹೋಗಿ ನೀರು ತರಬಹುದಾಗಿತ್ತು. ಕುಡಿಯುವ ನೀರಿನ ಸಮಸ್ಯೆಯಾಗಬಹುದೆಂದು ಪುರಸಭೆ ಸದಸ್ಯರಾದರೂ ಯೋಚಿಸಬಹುದಾಗಿತ್ತು ಎಂದು ನಾಗರಿಕರು ಅಸಮಾಧಾನ ಹೊರಹಾಕಿದರು.

ಅರೆ ಮಲೆನಾಡಿಗೂ ನೀರಿಗೆ ಬರ: ಅರೆ ಮಲೆನಾಡು ಪ್ರದೇಶವಾದ ಕಾಗಿನೆಲೆ ಹೋಬಳಿಯ ಬಹುತೇಕ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸಿವೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಟಾನಗೊಂಡಿದ್ದರೂ ಕೆರೆಗಳಲ್ಲಿ ನೀರು ಸಂಗ್ರಹವಾಗದೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ.  

‘ಪಟ್ಟಣದಲ್ಲಿ ನೀರಿನ ಸಮಸ್ಯೆ ಹೋಗಲಾಡಿಸಲು ಪುರಸಭೆ ಮುಂದಾಗಿದ್ದು, ಪಟ್ಟಣದ ಸುತ್ತಲೂ ಇರುವ ಕೊಳವೆ ಬಾವಿಗಳಿಂದ ಟ್ಯಾಂಕ್‌ಗಳಿಗೆ ತುಂಬಿಸಲಾಗುತ್ತದೆ. ಅವುಗಳಿಂದ ನೀರು ತೆಗೆದುಕೊಂಡು ಹೋಗುವಂತೆ ಜನತೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಸಿಸ್ಟರ್ನ್‌ ಟ್ಯಾಂಕ್‌ ಇಲ್ಲದ ಕಡೆ ನೇರವಾಗಿ ಕೊಳವೆ ಬಾವಿಗಳಿಂದ ನೀರು ಬಿಡಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮರ ಹೊಳೆಯಪ್ಪಗೋಳ ಮಾಹಿತಿ ನೀಡಿದರು.

ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಗ್ರಾಮದ ಕೆರೆ ನೀರಿಲ್ಲದೇ ಸಂಪೂರ್ಣ ಒಣಗಿದೆ
ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಗ್ರಾಮದ ಕೆರೆ ನೀರಿಲ್ಲದೇ ಸಂಪೂರ್ಣ ಒಣಗಿದೆ

ಕೆರೆ ತುಂಬಿಸುವ ಯೋಜನೆಯನ್ನು ನೀರಾವರಿ ನಿಗಮ ಅನುಷ್ಠಾನಗೊಳಿಸಲು ಸಾಕಷ್ಟು ವಿಳಂಭ ಮಾಡಿದೆ. ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ

-ಕಿರಣ ಗಡಿಗೋಳ ರೈತ ಮುಖಂಡ

ಬಸನಕಟ್ಟಿ ಕೆರೆಗೆ ₹1 ಕೋಟಿ ಖರ್ಚು ಮಾಡಿ ತಡೆಗೋಡೆ ನಿರ್ಮಿಸಿರುವುದು ಕಳೆಪ ಕಾಮಗಾರಿಗೆ ಸಾಕ್ಷಿಯಾಗಿದೆ. ಕಾಮಗಾರಿಯ ಕುರಿತು ತನಿಖೆ ನಡೆಸಬೇಕು

–ಎಂ.ಡಿ. ಚಿಕ್ಕಣ್ಣನವರ ಮಾಜಿ ಸೈನಿಕ

‘ಕೆರೆ ತುಂಬಿಸುವ ಯೋಜನೆಗೆ ಎಳ್ಳುನೀರು’ ‘ಕರ್ನಾಟಕ ನೀರಾವರಿ ನಿಗಮ ವಹಿಸಿಕೊಂಡಿದ್ದ ಕೆಂಗೊಂಡ ಮತ್ತು ಆಣೂರು ಕೆರೆ ತುಂಬಿಸುವ ಯೋಜನೆಗೆ ಎಳ್ಳುನೀರು ಬಿಟ್ಟಿದೆ. ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಪೈಪ್‌ಗಳ ಅಳವಡಿಕೆಯಿಂದಾಗಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದ ನದಿ ನೀರು ಕೆರೆಗಳಿಗೆ ಹರಿಯಲೇ ಇಲ್ಲ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಸಮಸ್ಯೆ ಇನ್ನಷ್ಟು ಜಟಿಲಗೊಳ್ಳಲು ಕಾರಣವಾಗಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

40 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ಹಿರೇಅಣಜಿ ಕೆರವಡಿ ಗುಂಡೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಲಾ 4 ಸೂಡಂಬಿ ಚಿಕ್ಕಬಾಸೂರ ಬನ್ನಿಹಟ್ಟಿ ಬಿಸಲಹಳ್ಳಿ ತಲಾ 3 ಘಾಳಪೂಜಿ ತಡಸ ಕಾಗಿನೆಲೆ ಶಿಡೇನೂರು ಮಲ್ಲೂರು ತಲಾ 2 ಹೆಡಿಗ್ಗೊಂಡ ಹಿರೇಹಳ್ಳಿ ಕುಮ್ಮೂರು ಮಾಸಣಗಿ ಬುಡಪನಹಳ್ಳಿಯ ತಲಾ ಒಂದೊಂದು ಗ್ರಾಮ ಸೇರಿದಂತೆ ಒಟ್ಟಾರೆ 40 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ‘ಬನ್ನಿಹಟ್ಟಿ ಪಂಚಾಯ್ತಿ ವ್ಯಾಪ್ತಿಯ ತಲಾ 4 ಗುಂಡೇನಹಳ್ಳಿ ಕೆರವಡಿ ತಲಾ 3 ಹಿರೇಅಣಜಿ 2 ಮಲ್ಲೂರು ಹಿರೇಹಳ್ಳಿ ಕಾಗಿನೆಲೆ ಮಾಸಣಗಿ ತಡಸ ಬುಡಪನಹಳ್ಳಿಯ ತಲಾ ಒಂದೊಂದು ಗ್ರಾಮಗಳು ಸೇರಿದಂತೆ ಒಟ್ಟು 18 ಗ್ರಾಮಗಳಲ್ಲಿ ಬರ ಯೋಜನೆಯಡಿ ರೈತರಿಂದ ಕೊಳವೆ ಬಾವಿಗಳನ್ನು ಎರವಲು ಪಡೆಯಲಾಗಿದೆ. ಅವುಗಳ ಮೂಲಕ ಸದ್ಯ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಸುರೇಶ ಬೇಡರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT