ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ: ಮೆಣಸಿನಕಾಯಿ ಆವಕದಲ್ಲಿ ದಿಢೀರ್‌ ಹೆಚ್ಚಳ

ಪ್ರಸಕ್ತ ಹಂಗಾಮಿನಲ್ಲಿ ದಾಖಲೆಯ ಆವಕ
Published 12 ಫೆಬ್ರುವರಿ 2024, 14:44 IST
Last Updated 12 ಫೆಬ್ರುವರಿ 2024, 14:44 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ 60,870 ಕ್ವಿಂಟಲ್‌ (2,43,483ಚೀಲ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ದಿಢೀರ್‌ ಹೆಚ್ಚಳ ಕಂಡು ಬಂದಿದೆ.
ಪರಿಣಾಮ ಎಲ್ಲೆಂದರಲ್ಲಿ ಮೆಣಸಿನಕಾಯಿ ಚೀಲಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಪ್ರಾಂಗಣದಲ್ಲಿ ಕಾಲಿಡಲು ಜಾಗವಿಲ್ಲದಂತಾಗಿದೆ.

ರಾಜ್ಯ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದ್ದರೂ ಮೆಣಸಿನಕಾಯಿ ಬೆಳೆಗಾರರು ಬಂಪರ್‌ ಬೆಳೆ ಬೆಳೆದಿದ್ದಾರೆ. ಪ್ರಸಕ್ತ ಹಂಗಾಮಿನಲ್ಲಿ ಮೊದಲ ಬಾರಿಗೆ 2ಲಕ್ಷಕ್ಕೂ ಹೆಚ್ಚು ಚೀಲ ಮೆಣಸಿನಕಾಯಿ ಆವಕವಾಗುವ ಮೂಲಕ ದಾಖಲೆ ನಿರ್ಮಿಸಿದೆ.

ಎರಡು ವರ್ಷಗಳ ಹಿಂದೆ ಒಂದೇ ದಿನದಲ್ಲಿ ಗರಿಷ್ಠ 61,782ಕ್ವಿಂಟಲ್‌ (2,47,127 ಚೀಲ) ಆವಕವಾಗುವ ಮೂಲಕ ಮಾರುಕಟ್ಟೆ ಇತಿಹಾಸದಲ್ಲಿ ದಾಖಲೆ ನಿರ್ಮಾಣವಾಗಿತ್ತು. ಒಟ್ಟಾರೆ ಸೋಮವಾರ 31,375 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟವಿಲ್ಲದ 562 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ.

15 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ಗರಿಷ್ಠ ₹57,333 ರಂತೆ, 8 ಚೀಲ ಕಡ್ಡಿ ಮೆಣಸಿನಕಾಯಿ ಗರಿಷ್ಠ ₹51,091 ರಂತೆ ಮಾರಾಟವಾಗಿದ್ದು, ಕಳೆದ ಗುರುವಾರಕ್ಕಿಂತ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹5 ಸಾವಿರ, ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹6 ಸಾವಿರ ಇಳಿಕೆಯಾಗಿದೆ. ಗುಂಟೂರು ತಳಿ ಮಾತ್ರ ₹18,269ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗುವ ಮೂಲಕ ಸ್ಥಿರತೆ ಕಾಯ್ದುಕೊಂಡಿದೆ.

ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹41,059, ಬ್ಯಾಡಗಿ ಕಡ್ಡಿ ₹37,269 ಹಾಗೂ ಗುಂಟೂರ ತಳಿ ₹14,209 ರಂತೆ ಮಾರಾಟವಾಗಿದ್ದು ತುಸು ಇಳಿಕೆಯಾಗಿದೆ.

ಸೋಮವಾರದ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 407 ಖರೀದಿ ವರ್ತಕರು ಪಾಲ್ಗೊಂಡಿದ್ದರು. ಅವರು ಒಟ್ಟಾರೆ 2.52 ಲಕ್ಷ ಬಾರಿ ದರವನ್ನು ಕೋಟ್‌ ಮಾಡಿದ್ದಾರೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಸೋಮವಾರದ ಮಾರುಕಟ್ಟೆ ದರ

ಕನಿಷ್ಠ– ಗರಿಷ್ಠ

ಬ್ಯಾಡಗಿ ಕಡ್ಡಿ ₨2,899- ₨51,091
ಬ್ಯಾಡಗಿ ಡಬ್ಬಿ ₨3,209- ₨57,333
ಗುಂಟೂರ ತಳಿ ₨1,629-₨18,269

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT