ಬಂದ್: ಮೂಡದ ಸಹಮತ!

7
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಕ್ಕೊರೊಲಿನ ಬೆಂಬಲ

ಬಂದ್: ಮೂಡದ ಸಹಮತ!

Published:
Updated:

ಹಾವೇರಿ: ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ವಿವಿಧ ಸಂಘಟನೆಗಳು, ಹೋರಾಟಗಾರರು, ಸಾಹಿತಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದರೂ, ಪ್ರತ್ಯೇಕ ರಾಜ್ಯ ರಚನೆ ಹಾಗೂ ಬಂದ್‌ ಕುರಿತು ವಿಭಿನ್ನ ನಿಲುವು ತಳೆದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ, ‘ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಆಗ್ರಹಿಸಿ ಆ.2ರಂದು ಬಂದ್ ಮಾಡಲಾಗುವುದು’ ಎಂದು ತಿಳಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಭಾಗದ ಬೇಡಿಕೆಗಳಿಗೆ ಸ್ಪಂದಿಸಿದ್ದು, ಆ.2ರ ಬಂದ್ ಹಿಂಪಡೆಯಲಾಗಿದೆ. ಸಾಂಕೇತಿಕವಾಗಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ತಿಳಿಸಿದ್ದಾರೆ.

ಇತ್ತ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಕನ್ನಡ ಮತ್ತು ರೈತ ಪರ ಹೋರಾಟ ಸಮಿತಿಗಳು, ಸಾಹಿತ್ಯ ಸಂಘಟನೆಗಳು, ದಲಿತ ಸಂಘರ್ಷ ಸಮಿತಿಗಳು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ‘ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬೆಂಬಲ ಇಲ್ಲ. ಕರ್ನಾಟಕ ಅಖಂಡವಾಗಿರಬೇಕು. ಆದರೆ, ಅಭಿವೃದ್ಧಿಯಲ್ಲಿನ ಪ್ರಾದೇಶಿಕ ಅಸಮತೋಲನೆಯನ್ನು ಸರಿಪಡಿಸಿ, ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡಿಸಬೇಕು’ ಎಂದು ಆಗ್ರಹಿಸಿವೆ. 

ರಜೆ ಇಲ್ಲ:  ಶಾಂತಿಯುತ ಪ್ರತಿಭಟನೆಗಳನ್ನು ನಡೆಸಬಹುದು. ಆದರೆ, ಕಾನೂನು ಉಲ್ಲಂಘನೆಯ ಪ್ರಕರಣಗಳು ಕಂಡು ಬಂದರೆ, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ತಿಳಿಸಿದರು.  ಶಾಲಾ–ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಗುರುವಾರ ರಜೆ ಇಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಹಾಲು, ದಿನಪತ್ರಿಕೆಗಳು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಅಡೆತಡೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಅಥವಾ ಕಾನೂನು ಉಲ್ಲಂಘನೆ ಘಟನೆಗಳು ನಡೆದರೆ, ಕ್ರಮಕೈಗೊಳ್ಳಲಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದರು.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !