ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಜಿಲ್ಲೆಯ 325 ಗ್ರಾಮಗಳಲ್ಲಿ ಜಲಸಂಕಟ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಗರ: ನಿರುಪಯುಕ್ತವಾದ ಶುದ್ಧ ನೀರಿನ ಘಟಕಗಳು
Published 13 ಏಪ್ರಿಲ್ 2024, 5:26 IST
Last Updated 13 ಏಪ್ರಿಲ್ 2024, 5:26 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾಗು ಮಳೆಯ ತೀವ್ರ ಕೊರತೆಯಿಂದ ಬರಗಾಲ ಬಂದಿದ್ದು, ಕೆರೆ–ಕಟ್ಟೆ, ಬಾವಿ–ನದಿ, ಹಳ್ಳ–ಕೊಳ್ಳಗಳು ಬತ್ತಿ ಹೋಗಿವೆ. ಸುಡು ಬೇಸಿಗೆಯಲ್ಲಿ ಜನ–ಜಾನುವಾರು ಕುಡಿಯುವ ನೀರಿಗಾಗಿ ಬವಣೆ ಪಡುವಂತಾಗಿದೆ. 

161 ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ 325 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜಲಜೀವನ ಮಿಷನ್‌, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆ ತುಂಬಿಸುವ ಯೋಜನೆಗಳು ಬೇಸಿಗೆಯಲ್ಲಿ ನೀರಿಲ್ಲದೆ ಬಣಗುಡುತ್ತಿವೆ. ಹೀಗಾಗಿ ಜನರು ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. 

ಬಹುಗ್ರಾಮ ಯೋಜನೆಗೆ ಗರ:

ಜಿಲ್ಲೆಯಲ್ಲಿ 17 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು (ಎಂ.ವಿ.ಎಸ್‌), ಅವುಗಳಲ್ಲಿ 8 ಯೋಜನೆಗಳು ತುಂಗಭದ್ರಾ ನದಿ ಮತ್ತು 9 ಯೋಜನೆಗಳು ವರದಾ ನದಿಯ ನೀರಿನ ಮೇಲೆ ಅವಲಂಬಿತವಾಗಿವೆ. ಪ್ರಸ್ತುತ ವರದಾ ನದಿ ಬತ್ತಿರುವ ಕಾರಣ 9 ಎಂ.ವಿ.ಎಸ್‌.ಗಳು ಸ್ಥಗಿತಗೊಂಡಿವೆ. ಉಳಿದ 5 ಯೋಜನೆಗಳು ಈ ತಿಂಗಳಾಂತ್ಯಕ್ಕೆ ಬಂದ್‌ ಆಗಲಿವೆ. ರಟ್ಟೀಹಳ್ಳಿ, ಬೈರನಪಾದ, ಅಗಡಿ ಯೋಜನೆಗಳು ಮಾತ್ರ ಚಾಲ್ತಿಯಲ್ಲಿವೆ ಎನ್ನುತ್ತಾರೆ ಅಧಿಕಾರಿಗಳು. 

171 ಕೊಳವೆಬಾವಿ ಬಾಡಿಗೆಗೆ:

‘ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ 64 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ 101 ಗ್ರಾಮಗಳಿಗೆ ನೀರು ಪೂರೈಸಲು 171 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದಿದ್ದೇವೆ. ಉಳಿದ ಗ್ರಾಮಗಳಲ್ಲಿ ಸಮಸ್ಯೆಯಾದರೆ, ನೀರು ಪೂರೈಸಲು ಮುನ್ನೆಚ್ಚರಿಕಾ ಕ್ರಮವಾಗಿ 458 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿದ್ದೇವೆ. ಇವುಗಳಿಂದ ಗ್ರಾಮಸ್ಥರಿಗೆ ನೀರು ಪೂರೈಸುತ್ತಿದ್ದು, ನೀರಿನ ಕೊರತೆ ತಕ್ಕಮಟ್ಟಿಗೆ ನಿವಾರಣೆಯಾಗಿದೆ. ಟ್ಯಾಂಕರ್‌ಗಳಿಂದ ನೀರು ಪೂರೈಸುವ ಸ್ಥಿತಿ ತಲೆದೋರಿಲ್ಲ’ ಎಂದು ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ ತಿಳಿಸಿದ್ದಾರೆ. 

90 ವಾರ್ಡ್‌ಗಳಲ್ಲಿ ಬಾಯಾರಿಕೆ:

ನಗರ ಪ್ರದೇಶದ 238 ವಾರ್ಡ್‌ಗಳ ಪೈಕಿ 90ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಜನರು ದೈನಂದಿನ ಬಳಕೆಗೆ ಖಾಸಗಿ ಟ್ಯಾಂಕರ್‌ ಹಾಗೂ ಕುಡಿಯಲು ಖಾಸಗಿ ಶುದ್ಧ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ. ಜನರಿಂದ ನೀರಿನ ಕರ ವಸೂಲಿ ಮಾಡುವ ನಗರ ಸ್ಥಳೀಯ ಸಂಸ್ಥೆಗಳು ನೀರು ಪೂರೈಸುವಲ್ಲಿ ವಿಫಲವಾಗಿವೆ ಎಂದು ಸಮಾಜ ಸೇವಕ ಎಂ.ಎಸ್‌.ಕೋರಿಶೆಟ್ಟರ್‌ ದೂರಿದ್ದಾರೆ. 

150 ಶುದ್ಧ ನೀರಿನ ಘಟಕ ಬಂದ್‌:

ಜಿಲ್ಲೆಯಲ್ಲಿ 686 ಶುದ್ಧ ನೀರಿನ ಘಟಕಗಳಿದ್ದು, ಇವುಗಳಲ್ಲಿ ಪ್ರಸ್ತುತ 600 ಚಾಲ್ತಿಯಲ್ಲಿವೆ. 83 ನೀರಿನ ಘಟಕಗಳು ಸ್ಥಗಿತಗೊಂಡಿವೆ ಎಂದು ಇಲಾಖೆಯ ಅಂಕಿಅಂಶಗಳು ಹೇಳುತ್ತವೆ. ಆದರೆ, ಜಿಲ್ಲೆಯಲ್ಲಿ 150ಕ್ಕೂ ಹೆಚ್ಚಿನ ಘಟಕಗಳು ಬಂದ್‌ ಆಗಿವೆ ಎಂಬುದು ಸಾರ್ವಜನಿಕರ ಆರೋಪ. ನೀರಿನ ಕೊರತೆ, ವಿದ್ಯುತ್‌ ಸಂಪರ್ಕ ಸಮಸ್ಯೆ, ಪಂಪ್‌ಸೆಟ್‌ ರಿಪೇರಿ, ಫಿಲ್ಟರ್‌ ಸಮಸ್ಯೆ, ಖಾಸಗಿ ಏಜೆನ್ಸಿಗಳ ನಿರ್ವಹಣೆ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದ ನೀರಿನ ಘಟಕಗಳು ಬಂದ್‌ ಆಗಿವೆ. 

ಜಿಲ್ಲೆಯ ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಆಲಿಸಿ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯಿಂದ ಸಹಾಯವಾಣಿ 94837 37129 ಆರಂಭಿಸಲಾಗಿದೆ

–ಅಕ್ಷಯ ಶ್ರೀಧರ್‌ ಸಿಇಒ ಜಿಲ್ಲಾ ಪಂಚಾಯಿತಿ

ವರದಾ ಮತ್ತು ಬೇಡ್ತಿ ನದಿ ಜೋಡಣೆ ಮಾಡಿದ್ದರೆ ಹಾವೇರಿ ಸೇರಿದಂತೆ 5 ಜಿಲ್ಲೆಗಳ ನೀರಿನ ಸಮಸ್ಯೆ ನೀಗುತ್ತಿತ್ತು. ವರದಾ ಮತ್ತು ತುಂಗಭದ್ರಾ ನದಿಗೆ ಬ್ಯಾರೇಜ್‌ ನಿರ್ಮಾಣ ಮಾಡಿದ್ದರೆ ಬೇಸಿಗೆಯಲ್ಲೂ ನೀರು ಸಿಗುತ್ತಿತ್ತು

– ಭುವನೇಶ್ವರ ಶಿಡ್ಲಾಪುರ ರೈತ ಮುಖಂಡ

ನೀರಿನ ಸಮಸ್ಯಾತ್ಮಕ ಗ್ರಾಮಗಳ ವಿವರ  ತಾಲ್ಲೂಕು; ಗ್ರಾಮಗಳ ಸಂಖ್ಯೆ ಬ್ಯಾಡಗಿ;41ಹಾನಗಲ್‌;46ಹಾವೇರಿ;34ಹಿರೇಕೆರೂರು;50ರಟ್ಟೀಹಳ್ಳಿ;36ರಾಣೆಬೆನ್ನೂರು;15ಸವಣೂರು;51ಶಿಗ್ಗಾವಿ;52ಒಟ್ಟು;325

ಖಾಸಗಿ ನೀರಿನ ಟ್ಯಾಂಕರ್‌ ಹಾವಳಿ ಹಾವೇರಿ ನಗರ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ನೀರಿನ ಟ್ಯಾಂಕರ್‌ಗಳ ಹಾವಳಿ ಜೋರಾಗಿದೆ. ತುಂಗಭದ್ರಾ ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಹಾವೇರಿ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಜನರು ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ನೀರಿಗೆ ದಿನದಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ಯಾಂಕರ್‌ಗೆ ₹500ರಿಂದ ₹700 ದರವನ್ನು ವಸೂಲಿ ಮಾಡಲಾಗುತ್ತಿದೆ. ಜನರು ಅನಿವಾರ್ಯವಾಗಿ ದುಬಾರಿ ಹಣ ಕೊಟ್ಟು ನೀರು ಬಳಸುವಂತಾಗಿದೆ. ನಗರ ಸ್ಥಳೀಯ ಸಂಸ್ಥೆಗಳಿಂದಲೇ ಕಡಿಮೆ ದರದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಿದರೆ ಜನರಿಗೆ ಉಪಯೋಗವಾಗುತ್ತದೆ. ಜೊತೆಗೆ ಮನೆ ನಳಗಳಿಗೆ ವಾರಕ್ಕೆ ಎರಡು ಬಾರಿ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ವಿದ್ಯಾನಗರ ಮತ್ತು ಬಸವೇಶ್ವರನಗರ ನಿವಾಸಿಗಳು ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT