3 ವರ್ಷಗಳಿಂದ ಇಲ್ಲಿ ‘ಶೂನ್ಯ’ ‍ಪ್ರವೇಶ!

7
151 ವರ್ಷದ ಹಂಸಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ

3 ವರ್ಷಗಳಿಂದ ಇಲ್ಲಿ ‘ಶೂನ್ಯ’ ‍ಪ್ರವೇಶ!

Published:
Updated:
Deccan Herald

ಹಂಸಭಾವಿ (ಹಾವೇರಿ  ಜಿಲ್ಲೆ): ಕಳೆದ ಮೂರು ವರ್ಷಗಳಲ್ಲಿ ಈ ಶಾಲೆಗೆ ಸೇರಿದ ಒಟ್ಟು ಮಕ್ಕಳ ಸಂಖ್ಯೆ ‘0’. ಹೀಗಾಗಿ ಒಂದನೇ, ಎರಡನೇ, ಮೂರನೇ ತರಗತಿಯಲ್ಲಿರುವ ಮಕ್ಕಳ ಸಂಖ್ಯೆಯೂ ‘0’ !

ಇನ್ನುಳಿದಂತೆ ನಾಲ್ಕು, ಐದನೇ ತರಗತಿಯಲ್ಲಿ ತಲಾ ಇಬ್ಬರು, ಆರನೇ ತರಗತಿಯಲ್ಲಿ 6, ಏಳನೇ ತರಗತಿಯಲ್ಲಿ 10 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆ, 20 ವಿದ್ಯಾರ್ಥಿಗಳಿದ್ದು, ನಾಲ್ಕು ಶಿಕ್ಷಕರು ಇದ್ದಾರೆ.

ಇದು, ಹಂಸಭಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ದು:ಸ್ಥಿತಿ. 1867ರಲ್ಲಿ ಆರಂಭಗೊಂಡ ಶಾಲೆ ಈಗ 151ನೇ ವರ್ಷಾಚರಣೆಯಲ್ಲಿದೆ. ಇಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ.

‘ಖಾಸಗಿ ಶಾಲೆಗಳ ಪ್ರಭಾವ, ಜನಪ್ರತಿನಿಧಿಗಳ ನಿರ್ಲಕ್ಷ್ಯ, ಕೆಲ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರಾಸಕ್ತಿಯ ಪರಿಣಾಮ ಒಂದೂವರೆ ಶತಮಾನ ಕಂಡ ಶಾಲೆ ಅವಸಾನದ ಅಂಚಿಗೆ ತಲುಪಿದೆ’ ಎಂದು ಗ್ರಾಮಸ್ಥ ಬಸವರಾಜ ಚಕ್ರಸಾಲಿ ಬೇಸರ ವ್ಯಕ್ತಪಡಿಸಿದರು.

‘ಶಾಲೆಯಲ್ಲಿ 2008ರಲ್ಲಿ 143 ವಿದ್ಯಾರ್ಥಿಗಳಿದ್ದರು. ನಂತರ ಗ್ರಾಮದಲ್ಲಿ ನಾಲ್ಕು ಖಾಸಗಿ ಶಾಲೆಗಳು ಆರಂಭಗೊಂಡ ಬಳಿಕ ನಿರಂತರ
ವಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಹೀಗಾಗಿ, ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಜೊತೆ ಈ ಶಾಲೆಯನ್ನು
ವಿಲೀನ ಮಾಡುವ ಕುರಿತು ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ’ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

‘ಶಾಲೆಯ ಕಾಂಪೌಂಡ್ ಕುಸಿದಿದ್ದು, ರಾತ್ರಿ ವೇಳೆ ಶಾಲೆಯ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಶಾಲೆಯ ಹಳೇ ಕೊಠಡಿಗಳು ಪಾಳು ಬಿದ್ದಿದ್ದು, ಸುತ್ತಲೂ ಮಾಲಿನ್ಯ ಹೆಚ್ಚಿದೆ. ಶಾಲೆಗೆ ಉತ್ತಮ ಕೊಠಡಿಗಳನ್ನು ನಿರ್ಮಿಸಬೇಕು. ಸರ್ಕಾರಿ ಶಾಲೆಯನ್ನು ಉಳಿಸಬೇಕು’ ಎಂದು ಗ್ರಾಮದ ಪುಟ್ಟಪ್ಪ ವಾಲಿ ಆಗ್ರಹಿಸಿದರು.

ಮಕ್ಕಳ ಪ್ರವೇಶ ಹೆಚ್ಚಿಸಲು ಹಾಗೂ ಶಾಲೆಯನ್ನು ಅಭಿವೃದ್ಧಿಪಡಿಸಲು ಶ್ರಮಿಸಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ವಿ.ಸಿ.ಬನ್ನಿಹಟ್ಟಿ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !