ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಾಸ್ಟರ್ ಪ್ಲಾನ್ ಗುಮ್ಮ?

Last Updated 28 ನವೆಂಬರ್ 2011, 5:50 IST
ಅಕ್ಷರ ಗಾತ್ರ

ಹಾವೇರಿ: `ಮಾಸ್ಟರ್ ಪ್ಲಾನ್~ ಗುಮ್ಮ ಮತ್ತೆ ನಗರದಲ್ಲಿ ಹರಿದಾಡುತ್ತಿದ್ದು, ಈಗ ನಡೆದಿರುವ ತೆರವು ಕಾರ್ಯಾ ಚರಣೆ ಮಾಸ್ಟರ್ ಪ್ಲಾನ್ ಆಗಿದೆಯೋ ಅಥವಾ ನಗರಸಭೆ ಆಸ್ತಿಯ ಅತಿಕ್ರಮಣ ತೆರವು ಕಾರ್ಯವೋ ಎಂಬ ಜಿಜ್ಞಾಸೆ ಸಾರ್ವಜನಿಕ ವಲಯವನ್ನು ಕಾಡುತ್ತಿದೆ.

ನಗರದ ಜನಸಂಖ್ಯೆ ಹಾಗೂ ವಾಹನ ಗಳ ದಟ್ಟಣೆ ಹೆಚ್ಚಾದಂತೆ ಇಲ್ಲಿನ ರಸ್ತೆ ಗಳು ಮತ್ತಷ್ಟು ಇಕ್ಕಟ್ಟಾಗಿವೆ. ಇದರಿಂದ ಇಲ್ಲಿನ ಪ್ರಮುಖ ರಸ್ತೆಗಳಾದ ಎಂ.ಜಿ. ರಸ್ತೆ, ಜೆ.ಪಿ. ರಸ್ತೆ, ಗೂಗಿಕಟ್ಟಿ ರಸ್ತೆಗಲ್ಲಿ ಸಂಚಾರ ವ್ಯವಸ್ಥೆಯೇ ಇಲ್ಲದಂತಾಗಿದೆ. ಜನತೆಗೆ ಆಗುತ್ತಿರುವ ತೊಂದರೆ ನಿವಾರಣೆಗಾಗಿ ಈ ರಸ್ತೆಗಳ ಅಗಲೀಕರಣ ಮಾಡಬೇಕೆಂಬ ಚಿಂತನೆ ದಶಕದ ಹಿಂದೆಯೇ ಆರಂಭಗೊಂಡಿದೆ.

ಅದರ ಮೊದಲ ಪ್ರಯತ್ನವಾಗಿಯೇ 2001 ರಲ್ಲಿ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ನಗರದ ಮಾಸ್ಟರ್ ಪ್ಲಾನ್‌ನ ಕ್ರಿಯಾ ಯೋಜನೆ ತಯಾರಿಸಿತು. ಅದಕ್ಕೆ ಸರ್ಕಾರದಿಂದ ಅನುಮೋದನೆ ಕೂಡಾ ಪಡೆಯಿತು.

ಅದರ ಪ್ರಕಾರ ನಗರದ ರಸ್ತೆಗಳ ಮಧ್ಯದಿಂದ ಎರಡು ಬದಿಯಲ್ಲಿ 6 ಮೀಟರ್ ರಸ್ತೆಯನ್ನು ವಿಸ್ತರಿಸುವುದು ಜತೆಗೆ ಮೂರು ಮೀಟರ್ ಸೆಟ್‌ಬ್ಯಾಕ್ ಬಿಡುವುದು ಸೇರಿ ಒಟ್ಟು 9 ಮೀಟರ್ ರಸ್ತೆ ನಿರ್ಮಿಸುವುದಾಗಿದೆ.

ಜನತೆಯ ಸಹಕಾರ ಹಾಗೂ ರಾಜಕೀಯ ಇಚ್ಛಾಶಕ್ತಿ ಇದ್ದರೆ, ಮಾಸ್ಟರ್ ಪ್ಲಾನ್ ಜಾರಿಯಾಗಿ 10 ವರ್ಷಗಳೇ ಗತಿಸುತ್ತಿದ್ದವು. ಆದರೆ, ಈವರೆಗೆ ಅದು ಸಾಧ್ಯವಾಗದೇ ಮಾಸ್ಟರ್ ಪ್ಲಾನ್ ಕೇವಲ `ಕಾಗದದ ಪ್ಲಾನ್~ ಆಗಿ ಉಳಿದಿದೆ.

ಈಗ ಮತ್ತೆ ಜೀವ: ಕಳೆದ ವರ್ಷ ಏಕಾಏಕಿ ಮಾಸ್ಟರ್ ಪ್ಲಾನ್ ಅನು ಷ್ಠಾನಕ್ಕೆ ತರಲು ಮುಂದಾದ ನಗರಸಭೆ ಸಿಟಿ ಸರ್ವೆ ನಕ್ಷೆ ಪ್ರಕಾರ ಕಟ್ಟಡಗಳ ತೆರುವಿಗೆ ಗುರುತು ಸಹ ಹಾಕಿತು. ಆದರೆ, ಅದಕ್ಕೆ ಸುಮಾರು 10 ಕೋಟಿ ರೂ.ಅವಶ್ಯಕತೆಯಿದೆ. ಸರ್ಕಾರಕ್ಕೆ ಪತ್ರ ಬರೆಯಲಾಗವುದು ಎಂದು ಹೇಳಿ ಸುಮ್ಮನಾಗಿಬಿಟ್ಟಿತು.

ಈಗ ರಸ್ತೆ ಅಗಲೀಕರಣದ ನೆಪದಲ್ಲಿ ಮತ್ತೆ ಮಾಸ್ಟರ್ ಪ್ಲಾನ್‌ಗೆ ಜೀವ ಬಂದಿದೆ. ಅಧಿಕಾರಿಗಳ ಪ್ರಕಾರ ಇದು ಮಾಸ್ಟರ್ ಪ್ಲಾನ್ ಅಲ್ಲ. ನಗರಸಭೆ ಆಸ್ತಿಯನ್ನು ಅತಿಕ್ರಮಣ ಮಾಡಿರುವು ದನ್ನು ತೆರವುಗೊಳಿಸುವ ಹಾಗೂ ರಸ್ತೆ ವಿಸ್ತರಣೆಗೊಳಿಸುವ ಕಾರ್ಯಾ ಚರಣೆಯಾಗಿದೆ. ಆದರೂ ಜನರನ್ನು ಕರೆದು ಸಭೆ ಮಾಡುತ್ತಿರುವುದು ಜನರಲ್ಲಿ ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟದೆ.

9 ಮೀಟರ್ ರಸ್ತೆ: `1994 ರ ನಗರಾಭಿವೃದ್ಧಿ ಯೋಜನಾ ಕಾಯ್ದೆ ಪ್ರಕಾರ ಪ್ರತಿಯೊಂದು ರಸ್ತೆಗಳು ರಸ್ತೆ ಮಧ್ಯದಿಂದ ಎರಡು ಬದಿಯಲ್ಲಿ ಸುಮಾರು 6 ಮೀಟರ್ ರಸ್ತೆ ಅಗಲ ವಿರಬೇಕು. ನಂತರ 3 ಮೀಟರ್ ಸೆಟ್ ಬ್ಯಾಕ್ ಬಿಡಬೇಕೆಂಬ ನಿಯಮವಿದೆ.
 
ಈ 9 ಮೀಟರ್ ಜಾಗೆ ವ್ಯಾಪ್ತಿ ಯಲ್ಲಿ ಬರುವ ಎಲ್ಲ ಕಟ್ಟಡಗಳು ಅತಿಕ್ರಮಣ ಕಟ್ಟಡಗಳಾಗಿವೆ. ಅವು ಗಳನ್ನು ತೆರವ ುಗೊಳಿಸಿ ರಸ್ತೆ ಅಗಲೀಕರಣ ಮಾಡಲಾಗುತ್ತದೆ. ಇದು ಮಾಸ್ಟರ್ ಪ್ಲಾನ್ ಅಲ್ಲ. ಆದರೆ, ಅದರಷ್ಟೇ ರಸ್ತೆ ದೊಡ್ಡದಾಗಲಿದೆ~ ಎಂದು ಉಪ ವಿಭಾಗಾಧಿಕಾರಿ ರಾಜೇಂದ್ರ ಚೋಳನ್ ತಿಳಿಸುತ್ತಾರೆ.

ಹೊಸ ಕ್ರಿಯಾ ಯೋಜನೆ ಇಲ್ಲ: 2001 ರಲ್ಲಿ ಸರ್ಕಾರ ಒಪ್ಪಿಗೆ ಸೂಚಿಸಿ ರುವ ಮಾಸ್ಟರ್ ಪ್ಲಾನ್ ನಂತರ ಯಾವುದೇ ಹೊಸ ಕ್ರಿಯಾ ಯೋಜನೆ ಯನ್ನು ಸರ್ಕಾರಕ್ಕೆ ಕಳುಹಿಸಿಲ್ಲ. 2010 ರಲ್ಲಿ 9 ಮೀಟರ್ ರಸ್ತೆ ಜತೆಗೆ 3 ಮೀಟರ್ ಸೆಟ್‌ಬ್ಯಾಕ್ ಬಿಡುವ ಹೊಸ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಚಿಂತನೆ ನಡೆದಿತ್ತು. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಿರೀಶ ತುಪ್ಪದ ಹೇಳುತ್ತಾರೆ.

ಅದು ಅಲ್ಲದೇ ಹಳೆಯ ಪ್ಲಾನ್ ಪ್ರಕಾರ ಬಹುತೇಕ ಸಾರ್ವಜನಿಕರ ಸ್ವಂತ ಆಸ್ತಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಅತಿಕ್ರಮಣ ಮಾಡಿದ ಜಾಗೆಯಷ್ಟೇ ಹೋಗುತ್ತದೆ. ಮೂರ‌್ನಾಲ್ಕು ಕಡೆಗಳಲ್ಲಿ ಅಲ್ಪ ಸ್ವಲ್ಪ ಸಾರ್ವಜನಿಕ ಆಸ್ತಿ ಹೋಗಲಿದೆ ಎನ್ನುತ್ತಾರೆ ಅವರು.

ಮೂರು ಕೋಟಿ ಸಾಕು: ಈಗ ಉದ್ದೇಶಿಸಿರುವ ರಸ್ತೆ ಅಗಲೀಕರಣ ಹಾಗೂ ಗಟಾರು ನಿರ್ಮಾಣಕ್ಕೆ ಸುಮಾರು ಮೂರು ಕೋಟಿ ರೂ. ಅವಶ್ಯಕತೆಯಿದೆ. ಈಗಾಗಲೇ ನಗರಸಭೆ ಬಳಿ 2 ಕೋಟಿ ರೂ. ತೆಗೆದಿರಿಸಲಾಗಿದೆ ಎಂದು ನಗರಸಭೆ ಆಯುಕ್ತ ಎಚ್.ಕೆ.ರುದ್ರಪ್ಪ ಹೇಳುತ್ತಾರೆ.

ಅವೈಜ್ಞಾನಿಕ: ನಗರಸಭೆ ನಗರದಲ್ಲಿ ನಡೆಸುತ್ತಿರುವ ರಸ್ತೆ ಅಗಲೀಕರಣ ಅವೈಜ್ಞಾನಿಕ ಹಾಗೂ ವ್ಯಾಪಾರಸ್ಥರಿಗೆ ಮಾರಕವಾಗಿದೆ. ಕಟ್ಟಡ ನಿರ್ಮಿಸುವ ಪೂರ್ವದಲ್ಲಿಯೇ ನಗರಸಭೆ ಕಾನೂನಿನ ಪ್ರಕಾರ ರಸ್ತೆ ಹಾಗೂ ಸೆಟ್ ಬ್ಯಾಕ್ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು. ಅದನ್ನು ಮಾಡದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿ ನಂತರ ವಾಸ ಯೋಗ್ಯ ಪ್ರಮಾಣ ಪತ್ರವನ್ನು ನೀಡಿದ ಬಳಿಕ ಈಗ ಅತಿಕ್ರಮಣ ಎಂದರೆ ಹೇಗೆ? ನಗರಸಭೆ ಅಧಿಕಾರಿಗಳ ತಪ್ಪಿಗೆ ಕಟ್ಟಡ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯೇ? ಎಂದು ಸ್ಥಳೀಯ ನಿವಾಸಿ ಸುರೇಶ ಹೊಸಮನಿ ಎಂದು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT