ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮಾಣಪತ್ರಕ್ಕಾಗಿ ನಿತ್ಯ ಅಲೆದಾಟ

ಮೂರು ದಿನಗಳಿಂದ ಸ್ಥಗಿತಗೊಂಡ ಅಂತರ್ಜಾಲ ಸೇವೆ; ಕ್ರಮಕ್ಕೆ ಆಗ್ರಹ
Last Updated 21 ನವೆಂಬರ್ 2019, 20:00 IST
ಅಕ್ಷರ ಗಾತ್ರ

ನಿಡಗುಂದಿ: ಪಟ್ಟಣದಲ್ಲಿ ನ.19 (ಮಂಗಳವಾರ)ರಿಂದ ಅಂತರ್ಜಾಲ ಸೇವೆ ಸ್ಥಗಿತಗೊಂಡ ಪರಿಣಾಮ ಇಲ್ಲಿಯ ತಾಲ್ಲೂಕು ಆಡಳಿತದ ಬಹುತೇಕ ಕಾರ್ಯಗಳು ಸ್ಥಗಿತಗೊಂಡಿದ್ದು, ಜನರು ಪ್ರಮಾಣಪತ್ರಗಳನ್ನು ಪಡೆಯಲು ಪರದಾಡುವಂತಾಗಿದೆ.

ಅಟಲ್‌ ಜಿ ಜನಸ್ನೇಹಿ ಕೇಂದ್ರ (ನೆಮ್ಮದಿ ಕೇಂದ್ರ) ಹಾಗೂ ಭೂಮಿ ಕೇಂದ್ರಗಳು ಸಂಪೂರ್ಣ ಸ್ಥಗಿತಗೊಂ
ಡಿವೆ. ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸ್ವೀಕಾರ ಹಾಗೂ ಪ್ರಮಾಣಪತ್ರ ವಿತರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಪ್ರತಿನಿತ್ಯ ಆದಾಯ, ಜಾತಿ, ಜನನ, ಮರಣ ಸೇರಿದಂತೆ ಸರ್ಕಾರದ ವಿವಿಧ 42 ಪ್ರಮಾಣಪತ್ರಗಳನ್ನು ಪಡೆಯಲು ತಾಲ್ಲೂಕಿನ ಜನ ನೆಮ್ಮದಿ ಕೇಂದ್ರವನ್ನೇ ಅವಲಂಬಿಸಬೇಕು. ಅದಕ್ಕಾಗಿ ನೆಮ್ಮದಿ ಕೇಂದ್ರದ ಬಳಿ ನಿತ್ಯವೂ ಜನಜಂಗುಳಿಯೇ ಇರುತ್ತಿತ್ತು. ಆದರೆ, ಅಂತರ್ಜಾಲ ಸೇವೆ ಲಭ್ಯವಿಲ್ಲದ ಕಾರಣ ತಾಲ್ಲೂಕಿನ ನಾನಾ ಕಡೆಯಿಂದ ಬರುವ ಸಾರ್ವಜನಿಕರು ನಿರಾಶೆಯಿಂದ ಮರಳುತ್ತಿದ್ದಾರೆ. ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿತ್ಯವೂ ತಹಶೀಲ್ದಾರ್ ಕಚೇರಿ ಸುತ್ತಮುತ್ತ ಇರುವ ಝೆರಾಕ್ಸ್‌, ಅರ್ಜಿ ವಿತರಣಾ ಅಂಗಡಿಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಸ್ಥಗಿತಗೊಂಡ ಭೂಮಿ ಕೇಂದ್ರ: ಜಮೀನಿನ ವಾರಸಾ, ವಾಟ್ನಿ, ತಿದ್ದುಪಡಿ, ದಾಖಲಾತಿ ಸೇರಿದಂತೆ ನಾನಾ ಕೆಲಸ
ಗಳನ್ನು ನಿರ್ವಹಿಸುವ ಭೂಮಿ ಕೇಂದ್ರ ಕೂಡಾ ಬಂದಾಗಿದೆ.

‘ತಕ್ಷಣವೇ ಇಂಟರ್‌ನೆಟ್‌ ಸೇವೆ ಆರಂಭಗೊಳಿಸಿ, ಪ್ರಮಾಣಪತ್ರಗಳು ಲಭ್ಯ ವಾಗುವಂತೆ ಮಾಡಬೇಕು’ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

‘ಮೊಬೈಲ್‌ನಲ್ಲೇ ಹೈಸ್ಪೀಡ್ ಇಂಟರ್‌ನೆಟ್‌ ಬಳಸುವ ಈ ದಿನಗಳಲ್ಲಿ ನೆಟ್‌ವರ್ಕ್‌, ಸರ್ವರ್ ಸಮಸ್ಯೆಯಿಂದ ಎರಡು ದಿನಗಳಿಂದ ಇಡೀ ತಾಲ್ಲೂಕು ಆಡಳಿತದ ಪ್ರಮಾಣಪತ್ರಗಳ ವಿತರಣೆ ಸ್ಥಗಿತಗೊಂಡರೆ ಹೇಗೆ’ ಎಂದು ನಿಡಗುಂದಿಯ ಬಸವರಾಜ ದಂಡಿನ ಪ್ರಶ್ನಿಸುತ್ತಾರೆ.

ತೊಂದರೆ ಏನು?: ‘ಬಿಎಸ್ಎನ್ಎಲ್ ಸ್ಥಿರ ದೂರವಾಣಿಯ ಮೊಡೆಮ್ ಮೂಲಕ ತಾಲ್ಲೂಕು ಕಚೇರಿಗೆ ಇಂಟರ್‌ನೆಟ್ ಸಂಪರ್ಕ ತೆಗೆದುಕೊಳ್ಳಲಾಗಿದೆ. ಎರಡು ದಿನದಿಂದ ಸರ್ವರ್ ಸಮಸ್ಯೆ ಇದೆ. ಈ ಸಮಸ್ಯೆ ನಮ್ಮಲ್ಲಿ ಮಾತ್ರ ಅಲ್ಲ, ಜಿಲ್ಲೆಯ ಎಲ್ಲ ನೆಮ್ಮದಿ ಕೇಂದ್ರಗಳಲ್ಲೂ ಇದೆ’ ಎಂದು ನಿಡಗುಂದಿ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ತ್ವರಿತ ವಿತರಣೆ: ‘ಇಂಟರನೆಟ್‌ ಸ್ಥಗಿತದ ಬಗ್ಗೆ ಜಿಲ್ಲಾ ಮಟ್ಟದ ತಾಂತ್ರಿಕ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಒಂದೆರಡು ದಿನದಲ್ಲಿ ಎಲ್ಲವೂ ಸರಿ ಹೋಗಲಿದ್ದು, ಎಲ್ಲ ಪ್ರಮಾಣಪತ್ರಗಳನ್ನು ತ್ವರಿತಗತಿಯಲ್ಲಿ ವಿತರಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT