7
ಐವರು ಆರೋಪಿಗಳು ಸಿಐಡಿ ಕಸ್ಟಡಿಯಲ್ಲಿ; ಸಾಕ್ಷಿದಾರರಿಂದಲೂ ಮಾಹಿತಿ ಸಂಗ್ರಹ

ನಾಲ್ವರು ಪೊಲೀಸ್ ಅಧಿಕಾರಿಗಳ ವಿಚಾರಣೆ

Published:
Updated:

ವಿಜಯಪುರ:  ಭೀಮಾ ತೀರದ ರೌಡಿ ಗಂಗಾಧರ ಚಡಚಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಎಡಿಜಿಪಿ ಚರಣ್‌ರೆಡ್ಡಿ ನೇತೃತ್ವದ ತಂಡ ಮಂಗಳವಾರ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದೆ.

ಧರ್ಮರಾಜ ಚಡಚಣನ ಎನ್‌ಕೌಂಟರ್‌ (ಅ 30, 2017) ನಡೆದ ಸಂದರ್ಭ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಡಾ.ಶಿವಕುಮಾರ ಗುಣಾರಿ, ಇಂಡಿ ಡಿವೈಎಸ್‌ಪಿ ರವೀಂದ್ರ ಶಿರೂರ್‌, ಝಳಕಿ ಪಿಎಸ್‌ಐ ಆಗಿದ್ದ ಸುರೇಶ ಗಡ್ಡಿ ಹಾಗೂ ಪ್ರಸ್ತುತ ಚಡಚಣ ವೃತ್ತದ ಸಿಪಿಐ ಜಾಕೀರ್‌ ಹುಸೇನ್‌ ಇನಾಂದಾರ ಅವರನ್ನು ವಿಚಾರಣೆಗೊಳಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲಾಗಿದೆ ಎಂಬುದು ತಿಳಿದು ಬಂದಿದೆ.

‘ವಿಚಾರಣೆಗೊಳಪಟ್ಟ ನಾಲ್ವರು ಪೊಲೀಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಿದ್ದಾರೆ. ಹೊಸ ವಿಷಯ ಯಾವೂದು ಪತ್ತೆಯಾಗಲಿಲ್ಲ. ತನಿಖೆ ಒಂದು ಹಂತಕ್ಕೆ ಬಂದಿದೆ. ಈ ಹಿಂದಿನ ಸಿಪಿಐ ಎಂ.ಬಿ.ಅಸೋಡೆ ವಿಚಾರಣೆಗೆ ಹಾಜರಾಗಬೇಕಿದೆ. ನೋಟಿಸ್‌ ನೀಡಿದರೂ ಇದೂವರೆಗೂ ಹಾಜರಾಗಿಲ್ಲ. ಅಸೋಡೆ ತನಿಖೆಗೊಳಪಡಿಸಿದ ಬಳಿಕ ಪ್ರಕರಣದ ಸ್ವರೂಪ ನಿಗದಿ ಪಡಿಸಲಾಗುವುದು’ ಎಂದು ಸಿಐಡಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ನ್ಯಾಯಾಂಗ ಬಂಧನದಲ್ಲಿದ್ದ ಸಿದ್ಧಗೊಂಡಪ್ಪ ಮುಡವೆ, ಭೀಮು ಪೂಜಾರಿ, ಚಾಂದ್‌ ಹುಸೇನಿ ಚಡಚಣ ಅವರನ್ನು ಹೆಚ್ಚಿನ ತನಿಖೆಗಾಗಿ ಸಿಐಡಿ ಕಸ್ಟಡಿಗೆ ಪಡೆದು, ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡ, ಭೀಮು ಬಿರಾದಾರ ಜತೆ ತೀವ್ರ ವಿಚಾರಣೆಗೊಳಪಡಿಸಲಾಗಿದೆ.

ಇದೇ ಸಂದರ್ಭ ಹತ್ಯೆಗೀಡಾಗಿರುವ ಗಂಗಾಧರ ಚಡಚಣನ ತಾಯಿ ವಿಮಲಾಬಾಯಿ ಚಡಚಣ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ 7–8 ಸಾಕ್ಷಿದಾರರನ್ನು ಮಂಗಳವಾರ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಲಾಗಿದೆ’ ಎಂದು ಸಿಐಡಿ ಎಸ್‌ಪಿ ಎಚ್‌.ಡಿ.ಆನಂದಕುಮಾರ್‌ ಮಾಹಿತಿ ನೀಡಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಈಗಾಗಲೇ 10 ಜನರನ್ನು ಬಂಧಿಸಿದ್ದೇವೆ. ಉಳಿದ ಮೂವರನ್ನು ಬಂಧಿಸಲಾಗುವುದು. ಈಗಾಗಲೇ ಒಂದು ತಿಂಗಳು ಮುಗಿದಿದೆ. ಎರಡು ತಿಂಗಳೊಳಗಾಗಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುತ್ತೇವೆ’ ಎಂದು ಸಿಐಡಿ ಎಡಿಜಿಪಿ ಕೆ.ಎಸ್‌.ಆರ್‌.ಚರಣ್‌ರೆಡ್ಡಿ ಹೇಳಿದರು.

ಸಿಐಡಿ ಕಸ್ಟಡಿಯಲ್ಲಿರುವ ಐವರು ಆರೋಪಿಗಳನ್ನು ಮಂಗಳವಾರ ಸಹ ಚಡಚಣ, ಕೆರೂರಿಗೆ ಕರೆದೊಯ್ದಿದ್ದ ಅಧಿಕಾರಿಗಳ ತಂಡ ತೀವ್ರ ವಿಚಾರಣೆಗೊಳಪಡಿಸಿದೆ. ಕೊಲೆಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !