‘ಮುಖ್ಯಮಂತ್ರಿ ವಿರುದ್ಧ ಜನಾಂದೋಲನ’

ರಾಮನಗರ: ‘ಬಡ್ತಿ ಮೀಸಲಾತಿ ಮಸೂದೆ ಅನುಷ್ಠಾನಗೊಳಿಸಿ, ಇಲ್ಲವಾದರೆ ರಾಜೀನಾಮೆ ನೀಡಿ’ ಎಂಬ ಘೋಷಣೆಯೊಂದಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಜನಾಂದೋಲನ ರೂಪಿಸಲಾಗುವುದು ಎಂದು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇ ಮೈಸೂರು, ಹೈದರಾಬಾದ್ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿಯೂ ಜನಾಂದೋಲನ ನಡೆಯಲಿದೆ. ಇದೇ 19ರಂದು ಬೆಂಗಳೂರಿನ ಟೌನ್ ಹಾಲ್ ಸಭಾಂಗಣದಲ್ಲಿ ಹೋರಾಟಗಾರರ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಚಿವ ಎಚ್.ಡಿ. ರೇವಣ್ಣ ಹಾಗೂ ಅಹಿಂಸ ಸಂಘಟನೆಯ ಒತ್ತಡಕ್ಕೆ ಮಣಿದು ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಸದನದ ನಿಂದನೆ ಆಗುತ್ತದೆ ಎಂಬುದರ ಅರಿವಿದ್ದರೂ ಸಹ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಈ ಕಾಯ್ದೆಯು ತಮ್ಮ ಶಿಶು ಎಂದು ಬೀಗುತ್ತಿದ್ದ ಕಾಂಗ್ರೆಸ್ ಮುಖಂಡರು ತಮ್ಮ ಶಿಶುವನ್ನು ಸಾಂದರ್ಭಿಕ ಶಿಶುವಾಗಿ ಬಂದ ಕುಮಾರಸ್ವಾಮಿ ಅವರ ಕೈಗೆ ನೀಡಿ ಅನ್ಯಾಯ ಮಾಡಿದ್ದಾರೆ ಎಂದರು.
ಕೋರ್ಟ್, ವಿಚಾರಣೆಗಳೆಂಬ ಕುಂಟು ನೆಪಗಳನ್ನು ಹೇಳಿ ಅನುಷ್ಠಾನದ ಮುಂದೂಡಿಕೆ ನಾಟಕವಾಡುತ್ತಿದ್ದಾರೆ. ತಮ್ಮ ಶಿಶುವನ್ನು ತಾವೇ ರಕ್ಷಿಸಿಕೊಳ್ಳಲಾಗದ ದಯನೀಯ ಸ್ಥಿತಿಗೆ ಕಾಂಗ್ರೆಸ್ ಬಂದಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ದಲಿತ ವಿರೋಧಿ ವರ್ತನೆಯನ್ನು ದಲಿತ ಮಂತ್ರಿಗಳು ಸಹಿಸಿಕೊಂಡು ಸಚಿವ ಸಂಪುಟದಲ್ಲಿ ಮುಂದುವರೆದಿದ್ದಾರೆ. ಕಾಯ್ದೆಯ ಅನುಷ್ಠಾನ ಕೇವಲ ಇಂದಿನ ಎಸ್ಸಿ ಎಸ್ಟಿ ನೌಕರರ, ಅಧಿಕಾರಿಗಳ ಬದುಕಿನ ಪ್ರಶ್ನೆಯಷ್ಟೇ ಆಗಿರದೆ ದಲಿತ ಜನಾಂಗದ ಮುಂದಿನ ಎಲ್ಲಾ ಪೀಳಿಗೆಗಳ ಅಸ್ತಿತ್ವದ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.
ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ನಾಯಕರನ್ನು ಒಕ್ಕೂಟದ ಮುಖಂಡರು ಭೇಟಿಯಾಗಿ ಒತ್ತಾಯಿಸಿದರೂ ಮುಖ್ಯಮಂತ್ರಿಗಳು ತಮ್ಮ ಮೊಂಡುತನ ಮುಂದುವರೆಸಿ ಮತ್ತೊಮ್ಮೆ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಾದ್ಯಂತ ಜನಾಂದೋಲನ ರೂಪಿಸಲಾಗುತ್ತಿದೆ ಎಂದರು.
ಕಾಯ್ದೆಯನ್ನು ಜಾರಿಗೊಳಿಸದ ಮೈತ್ರಿ ಸರ್ಕಾರ ಸಂಸತ್ ಚುನಾವಣೆ ಹಾಗೂ ರಾಮನಗರ ಕ್ಷೇತ್ರ ಉಪಚುನಾವಣೆಯಲ್ಲಿ ಬೆಲೆ ತೆರಬೇಕಾಗುತ್ತದೆ. ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಲು ಆರ್ ಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.
ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ, ಮುಖಂಡರಾದ ಬನಶಂಕರಿನಾಗು, ಹಾರೋಹಳ್ಳಿ ಚಂದ್ರು, ಮುತ್ತಯ್ಯ, ಯಡವನಹಳ್ಳಿ ಚಂದ್ರು, ನರೇಶ್, ಶ್ರೀಧರ್, ಕಲ್ಬಾಳ್ ಲಕ್ಷ್ಮಣ್, ಚಿದಂಬರಂ, ಚಂದ್ರು, ಚಕ್ಕೆರೆ ಲೋಕೇಶ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.