ಯಡ್ರಾಮಿ: ಟಂಟಂ–ಬೈಕ್ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತ್ತಪಟ್ಟಿದ್ದಾನೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದರೆ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಸುಂಬಡ ಹೊರವಲಯದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಶಿವಪ್ಪ ಭೀಮಪ್ಪ ಚಟ್ಟರ್ಕಿ(58) ಮೃತ್ತಪಟ್ಟ ವ್ಯಕ್ತಿ. ಅವರು ಸಿಂದಗಿ ತಾಲ್ಲೂಕಿನ ಚಟ್ಟರ್ಕಿ ಗ್ರಾಮದವರಾಗಿದ್ದು, ತಾಲ್ಲೂಕಿನ ಹಂಗರಗಾ(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಮೂರು ಜನ ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಹಂಗರಗಾ(ಕೆ)ಯಿಂದ ಯಡ್ರಾಮಿ ಕಡೆಗೆ ಟಂಟಂ ತೆರಳುವಾಗ ಸುಂಬಡ ಸಮೀಪ ಘಟನೆ ನಡೆದಿದೆ. ಬೈಕ್ ಸವಾರನ ಅತಿ ವೇಗದ ಚಾಲನೆಯೇ ಘಟನೆಗೆ ಕಾರಣ. ಬೈಕ್ ಸವಾರನನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದರು.