ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಬಾರದ ಅರಣ್ಯ ಕೃಷಿ ಪ್ರೋತ್ಸಾಹ ಸಹಾಯಧನ

₹44 ಲಕ್ಷ ಸಹಾಯಧನ ಬಾಕಿ; ಸಂಕಷ್ಟಕ್ಕೆ ಸಿಲುಕಿದ ಅನ್ನದಾತರು
Published 5 ನವೆಂಬರ್ 2023, 5:55 IST
Last Updated 5 ನವೆಂಬರ್ 2023, 5:55 IST
ಅಕ್ಷರ ಗಾತ್ರ

ಕಲಬುರಗಿ: ರೈತರ ಕೃಷಿ ‌ಜಮೀನುಗಳಲ್ಲಿ ಅರಣ್ಯ ಕೃಷಿಯನ್ನು ಉತ್ತೇಜಿಸಲು ಅರಣ್ಯ ಇಲಾಖೆ ಜಾರಿಗೊಳಿಸಿದ ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆಯಡಿ ಹೆಸರು ನೋಂದಾಯಿಸಿ ಸಸಿಗಳನ್ನು ಪಡೆದ ರೈತರಿಗೆ ಸಹಾಯಧನ ಸಿಗದಿರುವುದು ಅನ್ನದಾತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಜಿಲ್ಲೆಯಲ್ಲಿ 5 ವರ್ಷಗಳ ಅವಧಿಯಲ್ಲಿ 1200ಕ್ಕೂ ಹೆಚ್ಚು ರೈತರು ಅರಣ್ಯ ಇಲಾಖೆಯಲ್ಲಿ ಹೆಸರು ನೋಂದಾಯಿಸಿ ಸಸಿಗಳನ್ನು ಪಡೆದು ನೆಟ್ಟಿದ್ದಾರೆ. ಆ ಸಸಿಗಳನ್ನು ಪೋಷಣೆ ಮಾಡಲು ಸರ್ಕಾರದಿಂದ 3 ವರ್ಷಗಳ ಅವಧಿಗೆ ಮೊದಲ ವರ್ಷ ₹35, 2ನೇ ವರ್ಷ ₹40, 3ನೇ ವರ್ಷದಲ್ಲಿ ₹50 ಸಹಾಯಧನ ನೀಡುತ್ತಿದೆ.

ಅರಣ್ಯ ಇಲಾಖೆ ವತಿಯಿಂದ ಲಿಂಬೆ, ಸಾಗುವಾನಿ, ಮಹಾಗನಿ, ನೇರಳೆ, ಹಲಸು, ಶ್ರೀಗಂಧ, ಮಾವು, ರೆಂಜ, ಪುನರ್‌ಪುಳಿ, ಬಾದಾಮಿ, ಕರಿಬೇವು, ಸೀತಾಫಲ, ನುಗ್ಗೆ, ಹೆಬ್ಬೇವು, ಪೇರು, ಮುಂತಾದ ಸಸಿಗಳನ್ನು ವಿತರಿಸಿ ಅರಣ್ಯ ಕೃಷಿ ಪ್ರೋತ್ಸಾಹಿಸಲು ಆದ್ಯತೆ ನೀಡುತ್ತಿದೆ.

ಆದರೆ,  2018–19 ಸಾಲಿನಲ್ಲಿ 27,346 ಸಸಿಗಳಿಗೆ ₹8.2 ಲಕ್ಷ, 2019–20ನೇ ಸಾಲಿನಲ್ಲಿ 179 ರೈತರಿಗೆ ₹16.71 ಲಕ್ಷ, 2020–21 ಸಾಲಿನಲ್ಲಿ 136 ರೈತರಿಗೆ ₹18.35 ಲಕ್ಷ ಅನುದಾನ ಒದಗಿಸಲಾಗಿದೆ.‌

ಆದರೆ, 2021–22, 2022–23ನೇ ಸಾಲಿನಲ್ಲಿ 605 ರೈತರು 2,26,800 ಸಸಿಗಳನ್ನು ಪಡೆದು ನೆಟ್ಟಿದ್ದರು. ಅದರಲ್ಲಿ 1,25,326 ಸಸಿಗಳು ಬದುಕುಳಿದಿವೆ. ಅವುಗಳಿಗೆ ಸಹಾಯಧನ ಪಡೆಯಲು ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಸಸಿಗಳ ನೆಟ್ಟು 2 ವರ್ಷ ಕಳೆದರೂ ರೈತರಿಗೆ ಸಹಾಯಧನ ಬಿಡುಗಡೆ ಮಾಡಿಲ್ಲ.

₹44.39 ಲಕ್ಷ ಬಾಕಿ: 2021–22 ಸಾಲಿನಲ್ಲಿ 302 ರೈತರ 85,133 ಸಸಿಗಳಿಗೆ ₹29.79 ಲಕ್ಷ ಹಾಗೂ 2022–23ನೇ ಸಾಲಿನಲ್ಲಿ 179 ರೈತರ 40,193 ಸಸಿಗಳಿಗೆ ₹14.06 ಲಕ್ಷ ಸಹಾಯಧನ ಬಿಡುಗಡೆ ಮಾಡುವುದು ಬಾಕಿ ಇದೆ.

ಈ ವರ್ಷ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದು, ನೀರಿನ ಸಮಸ್ಯೆಯೂ ಎದುರಾಗಿದೆ. ಸರ್ಕಾರ ಸಹಾಯಧನ ನೀಡಿದರೆ ಸಸಿಗಳ ಪೋಷಣೆಗೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಆಳಂದ ರೈತ.

ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡುವ ಮುಂದಾಗಿರುವ ಅರಣ್ಯ ಇಲಾಖೆ ರೈತರಿಗೆ ಅನುದಾನ ನೀಡಬೇಕು. ಕೃಷಿ ಅರಣ್ಯ ಪ್ರೋತ್ಸಾಹ ನೀಡಲು ಹೆಚ್ಚಿನ ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು ಎನ್ನುತ್ತಾರೆ ರೈತ ಮುಖಂಡ ಶಿವನಗೌಡ ಪಾಟೀಲ.

3 ವರ್ಷಗಳ ಅವಧಿಗೆ ಸಹಾಯಧನ 581 ರೈತರ ₹44.39 ಲಕ್ಷ ಬಾಕಿ ಶ್ರೀಘ್ರವೇ ಹಣ ಬಿಡುಗಡೆಗೆ ಒತ್ತಾಯ

2 ವರ್ಷಗಳಿಂದ ಸಹಾಯಧನ ನೀಡದಿರುವುದರಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ಶೀಘ್ರವೇ ಸಹಾಯಧನದ ಅನುದಾನ ಬಿಡುಗಡೆ ಮಾಡಬೇಕು. ಶರಣಬಸಪ್ಪ ಮಮಶೆಟ್ಟಿ ರೈತ ಹೋರಾಟಗಾರ

‘ಅನುದಾನ ಬಿಡುಗಡೆ ಸಾಧ್ಯತೆ’

‘ಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದರಿಂದ ರೈತರ ಖಾತೆಗಳಿಗೆ ಸಹಾಯಧನದ ಹಣ ಹಾಕಲು ಸಾಧ್ಯವಾಗಿಲ್ಲ’ ಎಂದು ಜಿಲ್ಲಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್‌ ಮುನಿರ್‌ಅಹ್ಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಈ ತಿಂಗಳಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ. ಬಿಡುಗಡೆಯಾದ ನಂತರ ‘3 ವರ್ಷಗಳ ಅವಧಿಯಲ್ಲಿ ಕ್ರಮವಾಗಿ ಹೆಸರು ನೋಂದಾಯಿತ ರೈತರ ಖಾತೆಗಳಿಗೆ ಹಣ ಹಾಕಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT