ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ನಿರೀಕ್ಷೆಯಲ್ಲಿ ಬ್ಯಾಡ್ಮಿಂಟನ್ ಒಳಾಂಗಣ

15 ವರ್ಷಗಳಾದರೂ ಬದಲಾಗದ ಪರಿಸ್ಥಿತಿ; ಹಾಳಾದ ಅಂಗಣ
Last Updated 26 ಆಗಸ್ಟ್ 2022, 4:05 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿರುವ ಬ್ಯಾಡ್ಮಿಂಟನ್‌ ಒಳಾಂಗಣವು ಆಧುನಿಕ ಸ್ಪರ್ಶದ ನಿರೀಕ್ಷೆಯಲ್ಲಿದೆ. ಸೌಲಭ್ಯಗಳ ಕೊರತೆ ಮಧ್ಯೆಯೇ ಬ್ಯಾಡ್ಮಿಂಟನ್ ಪಟುಗಳು ಆಡುತ್ತಿದ್ದಾರೆ.

ಒಳಾಂಗಣದಲ್ಲಿ ಒಟ್ಟು 6 ಬ್ಯಾಡ್ಮಿಂಟನ್‌ ಅಂಗಣಗಳಿವೆ. 6 ಪೈಕಿ 3 ಅಂಗಣಗಳು ಹಾಳಾಗಿವೆ. ವುಡನ್‌ ಕೋರ್ಟ್‌ಗೆ ಅಳವಡಿಸಿದ ಮ್ಯಾಟ್‌ ಕೂಡ ಅಲ್ಲಲ್ಲಿ ಹಾನಿಗೊಂಡಿದೆ. ಮಳೆ ಬಂದರೆ ಸೋರುವ ಚಾವಣಿ, ವಿದ್ಯುತ್‌ ಪೂರೈಕೆ ಸ್ಥಗಿತವಾದರೆ ಆವರಿಸುವ ಕತ್ತಲು, ಶೌಚಾಲಯ ಸಮಸ್ಯೆ, ಸೌಲಭ್ಯಗಳ ಕೊರತೆ... ಹೀಗೆ ಹಲವು ಸಮಸ್ಯೆಗಳು ಇಲ್ಲಿವೆ.

‘2004ರಲ್ಲಿ ಒಳಾಂಗಣದ ವುಡನ್‌ ಕೋರ್ಟ್‌ ನಿರ್ಮಿಸಲಾಗಿತ್ತು. ಅಲ್ಲಿಂದ ಈವರೆಗೆ ಸಾಕಷ್ಟು ಬ್ಯಾಡ್ಮಿಂಟನ್‌ ಟೂರ್ನಿಗಳನ್ನು ಆಯೋಜಿಸಲಾಗಿದೆ. ಬಳಿಕ 2015ರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್‌ ಟೂರ್ನಿ ಆಯೋಜಿಸಲಾಗಿತ್ತು. ಆಗ ವುಡನ್‌ ಕೋರ್ಟ್‌ ಮೇಲೆ ಮ್ಯಾಟ್‌ ಅಳವಡಿಸಲಾಯಿತು. ಬಳಿಕ ಕ್ರಮೇಣ ಮೂರು ಕೋರ್ಟ್‌ಗಳು ಹಾಳಾಗಿವೆ’ ಎಂದು ಬ್ಯಾಡ್ಮಿಂಟನ್ ತರಬೇತುದಾರ ಸಂಜಯ ಬಣಾದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಯಾಡ್ಮಿಂಟನ್ ಒಳಾಂಗಣದಲ್ಲಿ ಸಮಸ್ಯೆಗಳ ಮಧ್ಯೆಯೇ ನಾವು ಆಟವಾಡುತ್ತಿದ್ದೇವೆ. ಇಲ್ಲಿನ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಇಲ್ಲಿನ ಸೌಲಭ್ಯಗಳು ಕಳಪೆ ಮಟ್ಟದ್ದಾಗಿದ್ದು, ಗುಣಮಟ್ಟ ಕಾಯ್ದುಕೊಳ್ಳಲಾಗಿಲ್ಲ. ಸದಸ್ಯತ್ವ ಶುಲ್ಕ ಪಡೆಯುತ್ತಾರೆ. ಆದರೆ ಸೌಲಭ್ಯ ನೀಡುವುದಿಲ್ಲ’ ಎಂದು ಬ್ಯಾಡ್ಮಿಂಟನ್ ಪಟುವೊಬ್ಬರು ತಿಳಿಸಿದರು.

‘ಕೋರ್ಟ್ ನಿರ್ವಹಣೆ, ಕ್ರೀಡೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರವು ಉತ್ತೇಜನ ನೀಡುವುದರ ಜೊತೆಗೆ ಅನುದಾನ ಕೂಡ ಕೊಡುತ್ತದೆ. ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನುದಾನ ಬಳಕೆ ಆಗುವುದಿಲ್ಲ. ಸರ್ಕಾರಕ್ಕೆ ವಾಪಸ್‌ ಹೋಗುತ್ತದೆ. ಅಂಗಣ ಬದಲಾವಣೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಕಲಬುರಗಿ ಬ್ಯಾಡ್ಮಿಂಟನ್‌ ಸಂಸ್ಥೆಯ ಪ್ರತಿನಿಧಿ ಮಂಜುನಾಥ

‘ಒಳಾಂಗಣದಲ್ಲಿ ವುಡನ್‌ ಕೋರ್ಟ್‌ ಇರುವುದರಿಂದ ಬರೀ ಮೂರು ಕೋರ್ಟ್‌ಗಳಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ಎಲ್ಲಾ ಕೋರ್ಟ್‌ಗಳನ್ನು ಏಕಕಾಲಕ್ಕೆ ಬದಲಿಸಬೇಕು. ಇದಕ್ಕೆ ಹೆಚ್ಚು ವೆಚ್ಚವಾಗುತ್ತದೆ.ಅದಕ್ಕಾಗಿ ಅಂದಾಜು ವೆಚ್ಚದ ಪ್ರಸ್ತಾವ ಸಲ್ಲಿಸುತ್ತೇವೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ ತಿಳಿಸಿದರು.

ಬಾಕ್ಸ್‌–1

‘ಸದಸ್ಯತ್ವದ ಶುಲ್ಕದಿಂದ ನಿರ್ವಹಣೆ‌’

ಬ್ಯಾಡ್ಮಿಂಟನ್ ಒಳಾಂಗಣದಲ್ಲಿ ಅಭ್ಯಾಸ ನಡೆಸಲು ಹೊರಗಿನವರಿಗೂ ಅವಕಾಶವಿದೆ. ಸರ್ಕಾರಿ ನೌಕರರಿಗೆ ₹ 500, 14 ವರ್ಷದೊಳಗಿನವರು ಮತ್ತು ಹಿರಿಯ ನಾಗರಿಕರಿಗೆ ₹ 400 ಶುಲ್ಕವಿದೆ. ಸದ್ಯ 130ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದಾರೆ. ರಾಷ್ಟ್ರೀಯ ಆಟಗಾರರಿಗೆ ಶುಲ್ಕದಲ್ಲಿ ವಿನಾಯಿತಿ ಇದೆ.

‘ಸದಸ್ಯತ್ವ ಶುಲ್ಕದ ರೂಪದಲ್ಲಿ ತಿಂಗಳಿಗೆ ₹ 70 ಸಾವಿರದವರೆಗೆ ಹಣ ಸಂಗ್ರಹವಾಗುತ್ತದೆ. ಇದನ್ನು ಒಳಾಂಗಣದ ನಿರ್ವಹಣೆಗೆ ಬಳಸಲಾಗುತ್ತದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ತಿಳಿಸಿದರು.

ಬಾಕ್ಸ್‌–2

20 ವರ್ಷದಿಂದ ಆಗದ ಬದಲಾವಣೆ

‘2003–04ರಲ್ಲಿ ಬ್ಯಾಡ್ಮಿಂಟನ್ ವುಡನ್‌ ಕೋರ್ಟ್‌ ನಿರ್ಮಿಸಲಾಯಿತು. ಸಮರ್ಪಕ ನಿರ್ವಹಣೆ ಮಾಡಿದ್ದಲ್ಲಿ, ವುಡನ್‌ ಕೋರ್ಟ್‌ನ ಜೀವಿತಾವಧಿ 10 ವರ್ಷ ಇರುತ್ತದೆ.ಆದರೆ, ಇಲ್ಲಿನ ಕೋರ್ಟ್‌ನ ಅವಧಿಯು 15 ವರ್ಷಗಳಿಗೂ ಹೆಚ್ಚಾಗಿದೆ.

‘2015ರಲ್ಲಿ ಅದರ ಮೇಲೆ ಮ್ಯಾಟ್ ಅನ್ನು ಅಳವಡಿಸಲಾಗಿದೆ. ಅದರ ಜೀವಿತಾವಧಿ 6 ವರ್ಷವಾಗಿದ್ದು, ಅದು ಮುಗಿದಿದೆ. ಮ್ಯಾಟ್‌ ಹಾಳಾಗಿದೆ. 8000 ಚದರ ಅಡಿ ಇರುವ ಇಡೀ ಅಂಗಣ ಬದಲಿಸಬೇಕಿದೆ’ ಎಂದು ಕಲಬುರಗಿ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆ ಕಾರ್ಯದರ್ಶಿ ಯೋಗೇಶ ಪಾಟೀಲ ತಿಳಿಸಿದರು.

‘ಬ್ಯಾಡ್ಮಿಂಟ್‌ನ ಅಂಗಣ ಹಾನಿಯಾಗಿದ್ದು, ಹೊಸ ಅಂಗಣ ನಿರ್ಮಾಣಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಟೂರ್ನಿಗಳ ಆಯೋಜನೆ ಸಂದರ್ಭದಲ್ಲಿ ತಾತ್ಕಾಲಿಕ ದುರಸ್ತಿ ಮಾಡಲಾಗುತ್ತದೆ ಹೊರತು ಶಾಶ್ವತ ರೂಪದ ಕಾರ್ಯಗಳು ನಡೆಯುವುದಿಲ್ಲ. ಹೀಗಾಗಿ ಇಲ್ಲಿ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್‌ ಟೂರ್ನಿಗಳ ಆಯೋಜನೆ ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

ಕೋಟ್ಸ್..

ಬ್ಯಾಡ್ಮಿಂಟನ್‌ ಅಂಗಣಗಳು ಹಾಳಾ ಗಿದ್ದು, ದುರಸ್ತಿ ಕೈಗೊಳ್ಳಬೇಕಿದೆ. ವಿದ್ಯುತ್ ಸಮಸ್ಯೆ ಪರಿಹರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು

ಫಿರೋಜ್‌, ಬ್ಯಾಡ್ಮಿಂಟನ್ ರಾಷ್ಟ್ರೀಯ ಕ್ರೀಡಾಪಟು

ಜಿಲ್ಲಾ ಕ್ರೀಡಾಂಗಣದಲ್ಲಿ ಈಗಾಗಲೇ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಬ್ಯಾಡ್ಮಿಂಟನ್‌ ಅಂಗಣವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುವುದು

ಗಾಯತ್ರಿ, ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT