ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವದ್ರೋಹಿಗಳ ಗುರುತಿಸುವ ಕೆಲಸ ಆಗಲಿ: ಅರುಣ ಜೋಳದಕೂಡ್ಲಿಗಿ

Published 10 ಮೇ 2024, 6:00 IST
Last Updated 10 ಮೇ 2024, 6:00 IST
ಅಕ್ಷರ ಗಾತ್ರ

ಕಲಬುರಗಿ: ‘ವಿಶ್ವಗುರು ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಬಸವ ದ್ರೋಹಿಗಳು, ವಚನ ಪರಂಪರೆಗೆ ವಿರುದ್ಧವಾಗಿ ನಡೆದುಕೊಳ್ಳುವ ದ್ರೋಹಿಗಳು ಯಾರು ಎಂಬುದನ್ನು ಪತ್ತೆ ಹಚ್ಚುವ ಕೆಲಸ ಆಗಬೇಕಿದೆ’ ಎಂದು ಸಾಹಿತಿ, ಸಹಾಯಕ ಪ್ರಾಧ್ಯಾಪಕ ಪ್ರೊ.ಅರುಣ ಜೋಳದಕೂಡ್ಲಿಗಿ ಪ್ರತಿಪಾದಿಸಿದರು.

ನಗರದ ಜಗತ್‌ ವೃತ್ತದ ಬಳಿ ಗುರುವಾರ ಬಸವ ಜಯಂತಿ ಉತ್ಸವ ಸಮಿತಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘12ನೇ ಶತಮಾನದಲ್ಲಿ ಬಸವಣ್ಣನವರ ಕೊಲೆಗೆ ಸನಾತನಿಗಳು ಕಾರಣರಾಗಿದ್ದರು. ಇಂದು ಸನಾತನಿಗಳ ಜೊತೆಗೆ ಗುರುತಿಸಿಕೊಂಡವರೇ ಬಸವ ದ್ರೋಹಿಗಳು ಎನಿಸುತ್ತಾರೆ. ಅಂಥವರ ಬಗ್ಗೆ ಬಸವ ಧರ್ಮಾನುಯಾಯಿಗಳು ಎಚ್ಚರ ವಹಿಸಬೇಕು’ ಎಂದರು.

‘ಡಾ.ಎಂ.ಎಂ.ಕಲಬುರ್ಗಿಯವರನ್ನು ಯಾರು ಕೊಂದರು, ಏತಕ್ಕಾಗಿ ಕೊಂದರು ಎಂಬ ಬಗ್ಗೆ ವಿಶೇಷ ತನಿಖಾ ದಳವು ಸಾವಿರಾರು ಪುಟಗಳ ವರದಿಯನ್ನು ಸಲ್ಲಿಸಿದೆ. ಆ ಕುರಿತು ‘ಪ್ರಜಾವಾಣಿ’ ಹಲವಾರು ಸರಣಿ ವರದಿಗಳನ್ನು ಪ್ರಕಟಿಸಿದೆ. ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂಬ ಹಂಬಲದಿಂದ ಕಲಬುರಗಿಯವರು ವಚನಗ್ರಂಥಗಳನ್ನು ಸಂಪಾದಿಸಿದ್ದರು. ಆ ಕಾರ್ಯ ಪೂರ್ಣಗೊಳ್ಳಬಾರದು ಎಂಬ ಉದ್ದೇಶದಿಂದ ಕಲಬುರ್ಗಿಯವರನ್ನೂ ಕೊಂದರು. ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದ ಬಸವಣ್ಣನವರನ್ನೂ ಇದೇ ಸನಾತನಿಗಳು ಕೊಲೆ ಮಾಡಿದ್ದರು’ ಎಂದು ಅರುಣ ಜೋಳದಕೂಡ್ಲಿಗಿ ಹೇಳಿದರು. 

ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಮಾತನಾಡಿ, ‌‘ಬಸವಣ್ಣನವರ ಹೆಸರನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ₹600 ಕೋಟಿ ಮಂಜೂರು ಮಾಡುವ ಮೂಲಕ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸುತ್ತಿದ್ದಾರೆ’ ಎಂದರು.

ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಮಾತನಾಡಿ, ‘ಬಸವಣ್ಣನವರ ಚಿಂತನೆ, ವಚನ ಸಾಹಿತ್ಯವನ್ನು ದೇಶ, ವಿದೇಶಗಳಿಗೆ ತಲುಪಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬಸವೇಶ್ವರ ಅಧ್ಯಯನ ಪೀಠ ಆರಂಭಿಸಬೇಕು. ವಿದೇಶಿ ವಿ.ವಿ.ಗಳಲ್ಲಿಯೂ ಪೀಠ ಸ್ಥಾಪಿಸಲು ಆರ್ಥಿಕ ನೆರವು ನೀಡಬೇಕು’ ಎಂದು ತಿಳಿಸಿದರು.

ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು.

ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀನಿವಾಸ ಸರಡಗಿಯ ವೀರಭದ್ರ ಶಿವಾಚಾರ್ಯರು, ವಿಧಾನಪರಿಷತ್ ಸದಸ್ಯ ಹಾಗೂ ಎಚ್‌ಕೆಇ ಸೊಸೈಟಿ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಮೇಯರ್ ವಿಶಾಲ ದರ್ಗಿ, ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶರಣಕುಮಾರ ಮೋದಿ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ವಿನೋದ ಪಾಟೀಲ ಸರಡಗಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಲ್ಯಾಣಪ್ಪ ಪಾಟೀಲ ಮಳಖೇಡ, ಶರಣು ಭೂಸನೂರ, ರವಿ ಬಿರಾದಾರ, ಮಂಜು ರೆಡ್ಡಿ, ವೀರಣ್ಣ ಹೊನ್ನಳ್ಳಿ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಎಂಆರ್‌ಎಂಸಿ ಕಾಲೇಜಿನ ಡೀನ್ ಡಾ.ಶರಣಗೌಡ ಪಾಟೀಲ, ಡಾ.ರವಿಕುಮಾರ್ ರ‍್ಯಾಕಾ, ಬಸವ ಜಯಂತಿ ಉತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ವೀರಣ್ಣ ಹೊನ್ನಳ್ಳಿ, ಶ್ರೀಶೈಲ ಘೂಳಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಬಸವ ಜಯಂತಿ ಅಂಗವಾಗಿ ಕಲಬುರಗಿಯ ಜಗತ್‌ ವೃತ್ತಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ
–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಬಸವ ಜಯಂತಿ ಅಂಗವಾಗಿ ಕಲಬುರಗಿಯ ಜಗತ್‌ ವೃತ್ತಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಲಿಂಗಾಯತ ಸಮುದಾಯ ದೊಡ್ಡದಿದೆ. ಆದರೆ ಬಸವಣ್ಣನವರ ಚಿಂತನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಮಾಜದ ಜನರು ಬರದೇ ಇರುವುದು ಖೇದಕರ
ಬಿ.ಜಿ.ಪಾಟೀಲ ವಿಧಾನಪರಿಷತ್ ಸದಸ್ಯ
ಬಸವಣ್ಣನವರ ಫೋಟೊ ಮನೆಯಲ್ಲಿ ಹಾಕಿಕೊಂಡವರು ಜಾತಿಯನ್ನು ನೋಡಿ ಮನೆ ಕೊಡುತ್ತಾರೆ. ಇಂತಹ ಕಹಿ ಅನುಭವ ನನಗೂ ಆಗಿದೆ. ಅವರಿಗೆ ಬಸವಣ್ಣನವರ ಫೋಟೊ ತೆಗೆಯಿರಿ ಎಂದು ಹೇಳಿದೆ
ಅರುಣ ಜೋಳದಕೂಡ್ಲಿಗಿ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT