ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: 530 ಶಿಕ್ಷಕ ಹುದ್ದೆಗಳು ಖಾಲಿ, ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರೇ ಗತಿ

Published 1 ಜೂನ್ 2023, 0:01 IST
Last Updated 1 ಜೂನ್ 2023, 0:01 IST
ಅಕ್ಷರ ಗಾತ್ರ

ಜಗನ್ನಾಥ ಡಿ. ಶೇರಿಕಾರ

ಚಿಂಚೋಳಿ: ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಪ್ರಸಕ್ತ ವರ್ಷ ಶಿಕ್ಷಣ ಇಲಾಖೆಗೆ ಕಾಡತೊಡಗಿದೆ. ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಳ್ಳುವುದು ಶಾಲ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅನಿವಾರ್ಯತೆಯಾಗಿದೆ.

ತಾಲ್ಲೂಕಿನ ಹಲವು ಶಾಲೆಗಳಲ್ಲಿ ಕಾಯಂ ಶಿಕ್ಷಕರು ಇಲ್ಲದೇ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇಂಗ್ಲೀಷ್ ಭಾಷೆಯ ಬೋಧನೆಗೆ ಕೆಲವು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರಿಲ್ಲದಿರುವುದರ ಜತೆಗೆ ವಿಜ್ಞಾನ, ಗಣಿತ ವಿಷಯಗಳ ಶಿಕ್ಷಕರ ಕೊರತೆಯೂ ಹೆಚ್ಚಾಗಿದೆ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮರಿಚೀಕೆಯಾಗಿದೆ.

ತಾಲ್ಲೂಕಿನಲ್ಲಿ 307 ಸರ್ಕಾರಿ ಶಾಲೆಗಳಿವೆ. ಇದರಲ್ಲಿ 275 ಪ್ರಾಥಮಿಕ ಶಾಲೆಗಳಾಗಿದ್ದು, 32 ಪ್ರೌಢ ಶಾಲೆಗಳಿವೆ. ಪ್ರಾಥಮಿಕ ಶಾಲೆಗಳಲ್ಲಿ 1,151 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ 304 ಹುದ್ದೆಗಳನ್ನು ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಹೆಚ್ಚುವರಿ ಹುದ್ದೆಗಳಾಗಿ ಪರಿವರ್ತಿಸಲಾಗಿದೆ. ಪ್ರಾಥಮಿಕ ಶಾಲೆಯ 450 ಹುದ್ದೆಗಳು ಖಾಲಿಯಿವೆ.

ತಾಲ್ಲೂಕಿನ 32 ಸರ್ಕಾರಿ ಪ್ರೌಢ ಶಾಲೆಗಳಿಗೆ 274 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 80 ಹುದ್ದೆಗಳು ಖಾಲಿಯಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಸುಮಾರು 15,000 ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಕಲಬುರಗಿ ವಿಭಾಗ ಮತ್ತು ಮೈಸೂರು ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿದೆ. ಇದರಿಂದ ಪ್ರಸಕ್ತ ವರ್ಷವೂ ಅತಿಥಿ ಶಿಕ್ಷಕರೇ ಗತಿ ಎನ್ನುವಂತಾಗಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ಶೇ 6ರಷ್ಟು ಸರ್ಕಾರಿ ನೌಕರರ ವರ್ಗಾವಣೆಗೆ ಹಸಿರು ನಿಶಾನೆ ತೋರಿಸಿದ್ದರಿಂದ ತಾಲ್ಲೂಕಿನಲ್ಲಿ ಮತ್ತಷ್ಟು ಶಿಕ್ಷಕರು ವರ್ಗಾವಣೆಗೆ ಸಜ್ಜಾಗಿದ್ದಾರೆ. ತಮ್ಮ ಸ್ವಂತ ಜಿಲ್ಲೆಗಳತ್ತ ಒಲವು ತೋರಿದ್ದಾರೆ. ಹೀಗಾಗಿ ಶಿಕ್ಷಕರ ಖಾಲಿ ಹುದ್ದೆಗಳ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

ಅತಿಥಿ ಶಿಕ್ಷಕರ ನೇಮಕಾತಿಗೆ ಸಿದ್ಧತೆ ಕೈಗೊಳ್ಳಲಾಗಿದೆ. ಖಾಲಿ ಇರುವ ಹುದ್ದೆಗಳ ವಿವರ ಉಪನಿರ್ದೆಶಕರ ಕಚೇರಿಗೆ ಸಲ್ಲಿಸಿದ್ದೇವೆ. ಜೂ.13ರ ಒಳಗಾಗಿ ಅತಿಥಿ ಶಿಕ್ಷಕರ ನೇಮಕಾತಿ ಪೂರ್ಣಗೊಳ್ಳಲಿದೆ

-ಸುಧಾರಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಿಂಚೋಳಿ

ಚಿಂಚೋಳಿಯಲ್ಲಿ ಆದರ್ಶ ವಿದ್ಯಾಲಯದ ಆಂಗ್ಲ ಮಾಧ್ಯಮ ಶಾಲೆ ಇದ್ದರೂ ಇಲ್ಲಿ ಆಂಗ್ಲ ಭಾಷೆ ವಿಜ್ಞಾನ ಶಿಕ್ಷಕರೇ ಇಲ್ಲ. ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತಾಗಿದೆ

-ಅಮರೇಶ ಗೋಣಿ, ಪೋಷಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT