ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಶೀಲತೆಗೆ ₹300 ಕೋಟಿ ಖರ್ಚು: ಸಚಿವ ಪ್ರಿಯಾಂಕ್ ಖರ್ಗೆ

ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ
Published 21 ಮೇ 2024, 5:55 IST
Last Updated 21 ಮೇ 2024, 5:55 IST
ಅಕ್ಷರ ಗಾತ್ರ

ಕಲಬುರಗಿ: ‘ಯುವಕರಿಗೆ ಶಿಕ್ಷಣದ ಜತೆಗೆ ಕೌಶಲ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಮುಂದಿನ ಒಂದು ವರ್ಷದಲ್ಲಿ ಉದ್ಯಮಶೀಲತೆಗಾಗಿ ಸುಮಾರು ₹300 ಕೋಟಿ ಖರ್ಚು ಮಾಡುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಉದ್ಯಮಶೀಲತೆಗೆ ಬೇಕಾದ ನೀಲನಕ್ಷೆ ತಯಾರಿಸಿ, ನಮ್ಮ ಭಾಗದ ಯುವಕರಿಗಾಗಿ ನೂರಾರು ಕೋಟಿ ರೂಪಾಯಿ ವಿನಿಯೋಗಿಸುತ್ತೇವೆ’ ಎಂದರು.

‘ಕಳೆದ 10 ವರ್ಷಗಳಿಂದ 371 (ಜೆ) ವಿಶೇಷ ಸ್ಥಾನಮಾನ ಅದ್ಭುತವಾಗಿ ಕೆಲಸ ಮಾಡಿದೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರಿಗೆ ಅದರ ಬಗ್ಗೆ ಗೊತ್ತಿಲ್ಲ. ಬಿಜೆಪಿ, ಜೆಡಿಎಸ್‌ನವರ ಬಳಿ 371 (ಜೆ) ಪ್ರಮಾಣ ಪತ್ರವಿದೆ. ಅದರ ಲಾಭವನ್ನು ಎಲ್ಲರೂ ಪಡೆಯುತ್ತಿದ್ದಾರೆ. ಆದರೆ, ನಮ್ಮನ್ನು ಬೈದು ಯಾರ್‍ಯಾರಿಗೋ ಮತಚಲಾಯಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇದುವರೆಗೆ 371 (ಜೆ) ಅಡಿ 7,000 ಎಂಬಿಬಿಎಸ್, 1,378 ದಂತ ವೈದ್ಯಕೀಯ, 22,219 ಎಂಜಿನಿಯರ್, 3,808 ಬಿಎಸ್‌ಸಿ ಅಗ್ರಿ, 3,448 ಹೋಮಿಯೋಪತಿ ಮತ್ತು ಭಾರತೀಯ ವೈದ್ಯ ಪದ್ಧತಿ, 4,593 ಫಾರ್ಮಸಿ ಸೀಟುಗಳು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸಿಕ್ಕಿವೆ. ಈ ಬಗ್ಗೆ ಕಾರ್ಯಕರ್ತರು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

‘ಸದನದಲ್ಲಿ ಮಂಡನೆಯಾಗುವ ಮಸೂದೆಗಳು ಕಾಯ್ದೆಯ ರೂಪದಲ್ಲಿ ಬರಬೇಕಾದರೆ ಮೇಲ್ಮನೆಯಲ್ಲಿಯೂ ಬಹುಮತ ಇರಬೇಕು. ಹೀಗಾಗಿ, ಪರಿಷತ್ ಚುನಾವಣೆಯ ಗೆಲವು ಅವಶ್ಯವಿದೆ’ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ‘ಪದವೀಧರರ ಚುನಾವಣೆ ಬಹಳ ವಿಚಿತ್ರವಾಗಿದೆ. ಮತದಾರರು ಕರೆದ ಕಡೆಗೆ ಅಭ್ಯರ್ಥಿಗಳು ಹೋಗಲು ಆಗುವುದಿಲ್ಲ. ನಾವು ಕರೆದಲ್ಲಿಗೆ ಮತದಾರರೂ ಬರುವುದಿಲ್ಲ. ಹೀಗಾಗಿ, ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಬೂತ್ ಮಟ್ಟದಲ್ಲಿ ಮತದಾರರನ್ನು ಭೇಟಿಯಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಬೇಕು’ ಎಂದು ಹೇಳಿದರು.

‘ಅಭ್ಯರ್ಥಿಯ ಅನುಪಸ್ಥಿತಿಯ ನಡುವೆಯೂ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು ಮತ್ತು ಪರಾಭವಗೊಂಡ ಅಭ್ಯರ್ಥಿಗಳು, ತಾಲ್ಲೂಕಿನ ಪ್ರಮುಖರ ಸಭೆ ಕರೆಯಬೇಕು. ಮತದಾರರನ್ನು ತಲುಪುವ ವಿಧಾನಗಳ ಬಗ್ಗೆ ಚರ್ಚೆ ಮಾಡಬೇಕು. ಮತದಾನದ ದಿನ ಪ್ರತಿಯೊಂದು ಮತಗಟ್ಟೆಯ ಬಳಿ 15–20 ಮುಖಂಡರು ಸೇರಿ, ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವಂತೆ ಮತದಾರರ ಮನವೊಲಿಸಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಚಿವ ರಹೀಂ ಖಾನ್, ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕನೀಜ್ ಫಾತಿಮಾ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ, ಮುಖಂಡರಾದ ಮಾಲೀಕಯ್ಯ ಗುತ್ತೇದಾರ, ರೇವುನಾಯಕ ಬೆಳಮಗಿ, ಶರಣಪ್ಪ ಮಟ್ಟೂರು, ರಾಜಗೋಪಾಲರೆಡ್ಡಿ, ಜಿ.ಆರ್.ವಿಜಯಕುಮಾರ, ನಾಗೇಶ್ವರ ರಾವ ಮಾಲಿಪಾಟೀಲ, ಸುಭಾಷ ರಾಠೋಡ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT