ಭಾನುವಾರ, ಆಗಸ್ಟ್ 14, 2022
26 °C
ಮಾಜಿ ಶಾಸಕ ಬಿ.ಆರ್. ಪಾಟೀಲ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಜಂಟಿ ಪತ್ರಿಕಾಗೋಷ್ಠಿ

ಕಲಬುರ್ಗಿ: ಬೀಜ, ಗೊಬ್ಬರ ಕೊರತೆ ನೀಗಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆ ಬೀಜ, ಗೊಬ್ಬರಕ್ಕಾಗಿ ರೈತ ಸಂಪರ್ಕ ಕೇಂದ್ರಗಳ ಮೊರೆ ಹೋಗಿದ್ದಾರೆ. ಆದರೆ, ಸಮರ್ಪಕವಾಗಿ ಬೀಜ, ಗೊಬ್ಬರ ಲಭ್ಯವಿಲ್ಲ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದು, ರಾಜ್ಯದಲ್ಲಿ ಸರ್ಕಾರ ಏನು ಮಾಡುತ್ತಿದೆ’ ಎಂದು ಮಾಜಿ ಶಾಸಕ ಬಿ.ಆರ್‌.ಪಾಟೀಲ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೊಗರಿಯ ಕಣಜ ಕಲಬುರ್ಗಿಯಲ್ಲಿ ತೊಗರಿ ಬಿತ್ತನೆಗೆ ಬೇಕಾದ ಪೂರಕ ವಾತಾವರಣ ಸರ್ಕಾರ ಒದಗಿಸಿಲ್ಲ. ಭೌಗೋಳಿಕ ವಿಶೇಷ (ಜಿಐ) ಮಾನ್ಯತೆ ಸಿಕ್ಕಿದೆರೂ ಕ್ರಮೇಣ ತೊಗರಿ ಬೆಳೆಯುವ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗಿ, ಹೆಸರು, ಉದ್ದು ಬೆಳೆಯುವ ಪ್ರವೃತ್ತಿ ರೈತರಲ್ಲಿ ಕಂಡು ಬರುತ್ತಿದೆ. ಹೆಸರಿಗೆ ₹ 7200 ಬೆಂಬಲ ಬೆಲೆ ಘೋಷಿಸುವ ಸರ್ಕಾರ ತೊಗರಿಗೆ ಮಾತ್ರ ₹ 6300 ಬೆಲೆ ನಿಗದಿ ಮಾಡಿದೆ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯ ಜೊತೆಗೆ ರಾಜ್ಯದ ವತಿಯಿಂದ ₹ 1955 ಕೋಟಿ ಮೀಸಲಿಟ್ಟು ಬೆಂಬಲ ಬೆಲೆಯನ್ನು ಘೋಷಿಸಿತ್ತು. ಕಳೆದ ಬಾರಿ ರಾಜ್ಯ ಸರ್ಕಾರ ತನ್ನ ಪಾಲಿನ ಬೆಂಬಲ ಬೆಲೆ ಘೋಷಿಸಲಿಲ್ಲ. ಜೊತೆಗೆ ಮಾರುಕಟ್ಟೆಯಲ್ಲೇ ರೈತರಿಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ ಬೆಂಬಲ ಬೆಲೆಯಡಿ ಯಾರೂ ತಮ್ಮ ತೊಗರಿಯನ್ನು ಮಾರಲಿಲ್ಲ. ಕ್ರಮೇಣ ಬೆಂಬಲ ಬೆಲೆ ಪದ್ಧತಿಯನ್ನೇ ರದ್ದುಗೊಳಿಸುವ ಹುನ್ನಾರ ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಅಗತ್ಯ ಪ್ರಮಾಣದಷ್ಟು ಬಿತ್ತನೆ ಬೀಜ, ಡಿಎಪಿ ಗೊಬ್ಬರ ಸಕಾಲಕ್ಕೆ ಪೂರೈಕೆ ಆಗದಿರುವುದು ರಾಜ್ಯ ಸರ್ಕಾರದ ಲೋಪ. ರಾಜ್ಯಮಟ್ಟದಲ್ಲಿ ಬೀಜ ಖರೀದಿಗೆ ಟೆಂಡರ್ ಅಂತಿಮಗೊಳಿಸಿ ಅದರಲ್ಲಿಯೂ ಸಾಕಷ್ಟು ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪಗಳಿವೆ. ತೊಗರಿಗೆ ಕನಿಷ್ಠ ₹ 8 ಸಾವಿರ ಬೆಂಬಲ ಬೆಲೆ ಘೋಷಿಸಬೇಕು. ಇದನ್ನು ತೊಗರಿ ಕೊಯ್ಲು ಆರಂಭವಾಗುತ್ತಿದ್ದಂತೆಯೇ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಮೂರು ತಿಂಗಳಲ್ಲಿ ಬರುವ ಹೆಸರು ಬೆಳೆಗೆ ₹ 7,200 ಬೆಂಬಲ ಬೆಲೆ ಘೋಷಿಸುವ ಸರ್ಕಾರ ಆರು ತಿಂಗಳ ಬೆಳೆಯಾದ ತೊಗರಿಗೆ ₹ 6300 ಘೋಷಿಸುವುದು ಅನ್ಯಾಯದ ಪರಮಾವಧಿ’ ಎಂದು ಟೀಕಿಸಿದರು.

ಮಾಜಿ ಶಾಸಕ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ‘2020ರಲ್ಲಿ ಎಣ್ಣೆಬೀಜಗಳು ಹಾಗೂ ಕಾಳುಗಳನ್ನು ಅತ್ಯವಶ್ಯಕ ವಸ್ತುಗಳ ಪಟ್ಟಿಯಿಂದ ಕೈಬಿಡಲಾಗಿದೆ. ಇದರ ಪರಿಣಾಮ ದೊಡ್ಡ ವ್ಯಾಪಾರಿಗಳು ಎಣ್ಣೆಬೀಜಗಳನ್ನು ಅಕ್ರಮವಾಗಿ ದಾಸ್ತಾನಿಟ್ಟುಕೊಳ್ಳುವ ಮೂಲಕ ಕೃತಕ ಅಭಾವ ಸೃಷ್ಟಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ರೈತರಿಗಿಂತ ಕಾರ್ಪೊರೇಟ್ ಗೆಳೆಯರಿಗೆ ಲಾಭ ಮಾಡಿಕೊಡುವ ಉದ್ದೇಶವಿದೆ’ ಎಂದರು.

‘ತೊಗರಿಯಲ್ಲಿ ಅತ್ಯಧಿಕ ಪೌಷ್ಟಿಕಾಂಶಗಳಿವೆ. ಅದನ್ನು ಹೆಚ್ಚು ಬೆಳೆಯಲು ಉತ್ತೇಜಿಸಬೇಕು. ಆದರೆ, ಕೇಂದ್ರ ಸರ್ಕಾರವು ಈವರೆಗೆ ಎಣ್ಣೆಬೀಜಗಳ ಉತ್ಪಾದನೆ ವಿಚಾರದಲ್ಲಿ ಇನ್ನೂ ಸ್ವಾವಲಂಬಿಯಾಗಿಲ್ಲ. ಪ್ರತಿ ವರ್ಷವೂ 26 ರಿಂದ 27 ದಶಲಕ್ಷ ಮೆಟ್ರಿಕ್ ಟನ್ ಎಣ್ಣೆಬೀಜ ಹಾಗೂ ಕಾಳುಗಳು ಅಗತ್ಯವಿದ್ದು, 22 ದಶಲಕ್ಷ ಮೆಟ್ರಿಕ್ ಟನ್ ಮಾತ್ರ ಬೆಳೆಯುತ್ತಿದ್ದೇವೆ. ಉಳಿದ ಕಾಳುಗಳನ್ನು ಪಕ್ಕದ ಬರ್ಮಾ, ಮಲೇಷ್ಯಾ ರಾಷ್ಟ್ರಗಳಿಂದ ದುಬಾರಿ ಬೆಲೆಗೆ ಆಮದು ಮಾಡಿಕೊಳ್ಳುತ್ತದೆ’ ಎಂದರು.

‘ಉತ್ತರ ಭಾರತದಲ್ಲಿ ರೈತರು ಹೆಚ್ಚಾಗಿ ಹೆಸರು ಕಾಳು ಬೆಳೆಯುತ್ತಾರೆ. ಹೀಗಾಗಿ, ಕೇಂದ್ರ ಸರ್ಕಾರ ತನ್ನ ವೋಟ್‌ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ತೊಗರಿಗಿಂತ ಹೆಚ್ಚು ಬೆಂಬಲ ಬೆಲೆ ಘೋಷಿಸಿದೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.