ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಮರಳು ದರ ದುಬಾರಿ, ನಿಂತ ಕಾಮಗಾರಿ

Published 19 ಆಗಸ್ಟ್ 2023, 6:39 IST
Last Updated 19 ಆಗಸ್ಟ್ 2023, 6:39 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನಲ್ಲಿ ಮರಳಿನ ಕೊರತೆಯಿಂದ ಕಟ್ಟಡ ನಿರ್ಮಾಣ ಸ್ಥಗಿತಗೊಂಡಿವೆ. ಇದರಿಂದ ಮರಳು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಖರೀದಿಸಬೇಕು. ಇಲ್ಲವೇ ಕೆಲಸ ನಿಲ್ಲಿಸುವ ಸ್ಥಿತಿಯಲ್ಲಿ ನಿರ್ಮಾಣ ಹಂತದ ಮನೆ ಮಾಲೀಕರ ಸ್ಥಿತಿಯಾಗಿದೆ.

ಮನೆಗಳ ಕಾಲಂ ಮತ್ತು (ಆರ್‌ಸಿಸಿ) ಛತ್ತು ಹಾಕಲು ಸ್ವಲ್ಪ ದಪ್ಪವಿರುವ ಮರಳು ಬೇಕು. ಈ ಮರಳು ಸಾಧ್ಯವಿಲ್ಲದ ಕಾರಣ ಚಿಂಚೋಳಿ, ಸುಲೇಪೇಟ ಮೊದಲಾದ ಕಡೆಗಳಲ್ಲಿ ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಲಾಗಿದೆ.

ಕೆಲವು ಮನೆಗಳ ಕಾಲಂ ಹಾಕಿ ಗೋಡೆ ನಿರ್ಮಿಸಿದ್ದು ಛತ್ತು ಹಾಕಲು ರಾಡ್ ಬಿಗಿದು ತಿಂಗಳು ಗತಿಸಿದರೂ ಮರಳು ಸಿಗದೇ ಛತ್ತು ಹಾಕಲಾಗಿಲ್ಲ ಇದರಿಂದ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ ಎನ್ನುತ್ತಾರೆ ಸೆಂಟ್ರಿಂಗ್ ಕೆಲಸದ ಇಸ್ಮಾಯಿಲ್.

3 ಕಟ್ಟಡಗಳಿಗೆ ನಾನು ರಾಡ್ (ಕಬ್ಬಿಣದ ಸರಳು) ಬಿಗಿದಿದ್ದೇನೆ. ಮರಳು ಲಭಿಸಿದರೆ ನಾಳೇಯೇ ಲಿಫ್ಟ್‌ ತಂದು ಛತ್ತು ಹಾಕುತ್ತೇವೆ. ಆದರೆ ಮರಳೇ ಸಿಗುತ್ತಿಲ್ಲ. ತುಂಬಾ ಜರೂರು ಇರುವವರು ಒಂದು ಟೌರಸ್ ಲಾರಿಗೆ ₹90 ಸಾವಿರ ಹಣ ನೀಡಿ ಬೇರೆ ರಾಜ್ಯದಿಂದ ಮರಳು ತಂದು ಮನೆಯ ಛತ್ತು ಹಾಕಿಸಿಕೊಂಡಿದ್ದಾರೆ.

ವ್ಯಕ್ತಿಯೊಬ್ಬರು 6 ಬ್ರಾಸ್‌ನ ಟಿಪ್ಪರ್ ಸುಮಾರು 30 ರಿಂದ 32 ಟನ್ ಮರಳಿಗೆ ₹42 ಸಾವಿರ ಕೊಟ್ಟು ತರುತ್ತಿದ್ದಾರೆ. ಇದರಿಂದ ಸ್ವಂತ ಮನೆ ಕನಸು ಹೊತ್ತು ಮನೆ ನಿರ್ಮಾಣಕ್ಕೆ ಮುಂದಾದವರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಲೋಕೋಪಯೋಗಿ ಉಪ ವಿಭಾಗದ ಕಚೇರಿಯಲ್ಲಿ ಮರಳು ಬ್ಯಾಂಕ್ ಸ್ಥಾಪಿಸಿ ಮನೆ ನಿರ್ಮಾಣಕ್ಕೆ ರಿಯಾಯಿತಿ ದರದಲ್ಲಿ ಮರಳು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಚುನಾವಣೆಯ ನಂತರ ಮರಳು ದಂಧೆಗೆ ಬ್ರೇಕ್‌ ಬಿದ್ದಿದೆ ಆದರೆ ಇದರ ಪರಿಣಾಮ ಕಟ್ಟಡ ಮನೆ ಸ್ವಂತ ಸೂರು ಹೊಂದುವ ಕನಸಿನ ವ್ಯಕ್ತಿಗಳಿಗೆ ಬರೆ ಹಾಕಿದರೆ, ಸರ್ಕಾರಿ ಕೆಲಸಗಳಿಗೂ ಸಿಗದಂತಾಗಿದೆ.

ಸರ್ಕಾರದಿಂದ ವಿವಿಧ ಬಿಲ್ಲು ಪಾವತಿ ತಡೆ ಹಿಡಿದಿದ್ದರಿಂದ ಮರಳಿನ ಕೊರತೆಯಿಂದ ಗುತ್ತಿಗೆದಾರರು ತಲೆ ಕೆಡಿಸಿಕೊಳ್ಳದೇ ಕೆಲಸ ನಿಲ್ಲಿಸಿ ಕೈತೊಳೆದುಕೊಂಡಿದ್ದಾರೆ. ಆದರೆ ಸ್ವಂತ ಮನೆ ನಿರ್ಮಿಸಿ ಕೊಳ್ಳಬೇಕು ಎಂಬುವವರಿಗೆ ತೊಂದರೆಯಾಗಿದೆ.

ಮರಳಿನ ಕೊರತೆಯಿಂದ ಛತ್ತು ಹಾಕುವ ಕೆಲಸ ಸ್ಥಗಿತವಾಗಿದೆ. ಕೆಲವು ಕಡೆ ಪ್ಲಾಸ್ಟರ್ ಮತ್ತು ಗೋಡೆ ಕೆಲಸಗಳು ನಿಂತು ಹೋಗಿದ್ದು ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ
-ಮಹಮದ್ ಜಾಕೀರ್ ಸೆಂಟ್ರಿಂಗ್ ಕೆಲಸದ ಮುಖ್ಯಸ್ಥ
ನನಗೆ ಒಂದು ಟ್ರಾಕ್ಟರ್ ಮರಳು ಬೇಕಿತ್ತು ಎಲ್ಲಿಯೂ ಸಿಗುತ್ತಿರಲಿಲ್ಲ. ಆಗ ನಾನು ₹12 ಸಾವಿರ ನೀಡಿ ಒಂದು ಟ್ರಾಕ್ಟರ್ ಮರಳು ತಂದಿದ್ದೇನೆ
-ಹೆಸರು ಬೇಡ. ನಿರ್ಮಾಣ ಹಂತದ ಕಟ್ಟಡದ ಮಾಲೀಕ ಚಂದಾಪುರ
ಚಿತ್ತಾಪುರದಲ್ಲಿ ಎರಡು ಕಡೆ ಮರಳು ಗಣಿಗಾರಿಕೆ ನಡೆಯುತ್ತಿದೆ. ಬೇಕಾದವರು ಅಲ್ಲಿಂದ ತಂದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಸೇಡಂನಲ್ಲೂ ಆರಂಭವಾಗಲಿದೆ.
-ಪ್ರವೀಣಕುಮಾರ ಉಪ ನಿರ್ದೇಶಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT