ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಾಲೇಜಿಗೇಕೆ ವಿದ್ಯಾರ್ಥಿಗಳು ಬರುತ್ತಿಲ್ಲ: ಸಚಿವ ನಾಗೇಶ್ ತರಾಟೆಗೆ

Last Updated 27 ಅಕ್ಟೋಬರ್ 2021, 5:05 IST
ಅಕ್ಷರ ಗಾತ್ರ

ಕಲಬುರಗಿ: ‘ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ತೀರಾ ಉತ್ತಮವಲ್ಲದಿದ್ದರೂ ಅಗತ್ಯವಿರುವಷ್ಟು ಮೂಲಸೌಕರ್ಯ, ಉಪನ್ಯಾಸಕರನ್ನು ಒದಗಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿಗೆ ಬರದಿರಲು ಕಾರಣವೇನು? ನೀವು ಎಂದಾದರೂ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳ ಮನವೊಲಿಸುವ ಕೆಲಸ ಮಾಡಿದ್ದೀರಾ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಪ್ರಶ್ನಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಶಾಲಾ, ಕಾಲೇಜುಗಳ ಸಂಖ್ಯೆ, ಅಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ, ಶೌಚಾಲಯ, ಕಟ್ಟಡದಂತಹ ಮೂಲಸೌಕರ್ಯಗಳ ಮಾಹಿತಿ ನೀಡುವಲ್ಲಿ ಕೆಲ ಡಿಡಿಪಿಯು ಹಾಗೂ ಡಿಡಿಪಿಐಗಳು ತಡವರಿಸಿದರು.

ಕಲಬುರಗಿ ಡಿಡಿಪಿಯು ಶಿವಶರಣಪ್ಪ ಮೂಳೆಗಾವ್ ಅವರು ಜಿಲ್ಲೆಯಲ್ಲಿ ಒಟ್ಟು 49 ಸರ್ಕಾರಿ, 29 ಅನುದಾನಿತ ಹಾಗೂ 172 ಖಾಸಗಿ ಕಾಲೇಜು ಸೇರಿ 250 ಪದವಿ ಪೂರ್ವ ಕಾಲೇಜುಗಳಲ್ಲಿ 64,648 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ’49 ಕಾಲೇಜುಗಳ ಪೈಕಿ ಎರಡು ಕಾಲೇಜುಗಳಲ್ಲಿ ಮಾತ್ರ ನಿರೀಕ್ಷಿಸಿದಷ್ಟು ವಿದ್ಯಾರ್ಥಿಗಳಿದ್ದಾರೆ. ಉಳಿದ 47 ಕಾಲೇಜುಗಳಲ್ಲಿ ಪ್ರತಿ 44 ವಿದ್ಯಾರ್ಥಿಗಳಿಗೆ ತಲಾ 6 ಉಪನ್ಯಾಸಕರಿದ್ದಾರೆ. ಆದರೂ, ವಿದ್ಯಾರ್ಥಿಗಳು ಏಕೆ ಬರುತ್ತಿಲ್ಲ. ಕಲಾ ವಿಭಾಗದ ವಿದ್ಯಾರ್ಥಿಗಳೂ ಖಾಸಗಿ ಕಾಲೇಜುಗಳಿಗೆ ಹೋಗಲು ಕಾರಣವೇನು‘ ಎಂದು ಪ್ರಶ್ನಿಸಿದರು.

’ಯಾವ ಕಾಲೇಜಿನಲ್ಲಿ ಎಷ್ಟು ಉಪನ್ಯಾಸಕರ ಕೊರತೆ ಇದೆ ಎಂಬ ಮಾಹಿತಿಯೇ ಇಲ್ಲದಿದ್ದರೆ ಹೇಗೆ? ಹೊಸದಾಗಿ ವಿದ್ಯಾರ್ಥಿಗಳನ್ನು ಕರೆ ತರಲು ಏನು ಮಾಡಿದ್ದೀರಿ? ನಿಮಗೆ ಪಾಠ ಹೇಳುವ ಕೆಲಸ ಇಲ್ಲ. ವಿದ್ಯಾರ್ಥಿಗಳ ಪ್ರವೇಶ ಮಾಡಿಕೊಳ್ಳುವ ಕೆಲಸ ಇಲ್ಲ. ಏನೂ ಕೆಲಸ ಇಲ್ಲದಿದ್ದರೂ ವಿದ್ಯಾರ್ಥಿಗಳನ್ನು ಕರೆತರುವ ನಿಟ್ಟಿನಲ್ಲಿ ಯೋಜನೆ ರೂಪಿಸದಿದ್ದರೆ ಹೇಗೆ‘ ಎಂದು ಬೇಸರದಿಂದ
ನುಡಿದರು.

ವಿದ್ಯಾರ್ಥಿಗಳು, ಶಿಕ್ಷಕರ ಬಗ್ಗೆ ಸೂಕ್ತ ಮಾಹಿತಿ ನೀಡಲು ತಡವರಿಸಿದ ಬಳ್ಳಾರಿ ಜಿಲ್ಲೆಯ ಡಿಡಿಪಿಯು ರಾಮಪ್ಪ ಹಾಗೂ ಡಿಡಿಪಿಯು ರಾಜು ಅವರನ್ನು ಸಚಿವರು ತರಾಟೆಗೆ
ತೆಗೆದುಕೊಂಡರು.

’ಕಂಪ್ಯೂಟರ್‌ ಆಪರೇಟರ್ ಮಾಹಿತಿ ತೆಗೆದುಕೊಟ್ಟಿದ್ದಾನೆ ಎಂದು ಅಷ್ಟನ್ನಾದರೂ ಮಾಹಿತಿ ಕೊಡುತ್ತಿದ್ದೀರಿ. ಇಲ್ಲದಿದ್ದರೆ ಅದೂ ಇಲ್ಲ. ಒಂದು ದೊಡ್ಡ ಇಲಾಖೆಯನ್ನು ನಡೆಸುತ್ತಿದ್ದೇವೆ. ನಮಗೊಂದಿಷ್ಟು ಜವಾಬ್ದಾರಿ ಇದೆ ಎಂದೂ ಅನಿಸುವುದಿಲ್ಲವೇ‘ ಎಂದರು.

ಸರ್ಕಾರಿ ಶಾಲಾ–ಕಾಲೇಜುಗಳಲ್ಲಿ ಮಕ್ಕಳ ಪ್ರವೇಶ ಕ್ಷಿಣಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಸುಧಾರಣೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಆಗುವಂತೆ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ನಳೀನ್ ಅತುಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ಸೇರಿದಂತೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಅಧಿಕಾರಿಗಳು ಹಾಗೂ ಬಿಇಒಗಳು
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT