ಮಂಗಳವಾರ, ಮೇ 24, 2022
25 °C
ದೀಪದಾನ ಸಮಾರಂಭ

ಆಸ್ಪತ್ರೆ ಯಶಸ್ಸಿನಲ್ಲಿ ನರ್ಸ್‌ಗಳ ಪಾತ್ರ ದೊಡ್ಡದು: ಡಾ.ಕೆ.ಪಿ. ಪ‍ದ್ಮಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ನರ್ಸ್‌ಗಳ ಶ್ರಮವಿಲ್ಲದೇ ಈ ಜಗತ್ತಿನ ಯಾವುದೇ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜು ಬೆಳೆಯಲು ಸಾಧ್ಯವಿಲ್ಲ. ಅಷ್ಟೊಂದು ಮಹತ್ವ ಈ ವೃತ್ತಿಗೆ ಇದೆ’ ಎಂದು ಇಲ್ಲಿನ ಇಎಸ್‌ಐಸಿ ಆಸ್ಪತ್ರೆಯ ಮೇಲ್ವಿಚಾರಕಿ ಡಾ.ಕೆ.ಪಿ. ಪ‍ದ್ಮಜಾ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ನಡೆದ ನರ್ಸಿಂಗ್‌ ಕಾಲೇಜಿನ ಬಿಎಸ್‌ಸಿ ನರ್ಸಿಂಗ್‌ ಪ್ರಥಮ ವರ್ಷದ ವಿದ್ಯಾರ್ಥಿಗಳ ದೀಪದಾನ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಒಂದು ಆಸ್ಪತ್ರೆಯು ವಿಶ್ವಾಸ ಗಳಿಸಿಕೊಳ್ಳುವಲ್ಲಿ ವೈದ್ಯರ ಪಾತ್ರ ಎಷ್ಟು ಮುಖ್ಯವೋ ನರ್ಸ್‌ಗಳ ಪಾತ್ರವೂ ಅಷ್ಟೇ ಮುಖ್ಯ. ಮೇಲಾಗಿ, ಕರುಣೆ ಎಂಬುದು ವೈದ್ಯರಿಗಿಂತ ಒಂದು ಕೈ ಹೆಚ್ಚಾಗಿಯೇ ದಾದಿಯರಿಗೆ ಇರಬೇಕು’ ಎಂದು ಹೇಳಿದರು.

‘ನಿಮ್ಮ ಕಲಿಕೆಯಲ್ಲಿ ಉ‌ತ್ಸಾಹವಿದ್ದರೆ ಮುಂದಿನ ಕೆಲಸದಲ್ಲೂ ಉತ್ಸಾಹ ಬರುತ್ತದೆ. ನಿಮ್ಮ ತಂದೆ– ತಾಯಿ ನಿಮ್ಮ ಮೇಲೆ ನಂಬಿಕೆ ಇಟ್ಟು ಈ ಸೇವಾವಲಯದಲ್ಲಿ ಕಲಿಯಲು ಕಳುಹಿಸಿದ್ದಾರೆ. ಅವರ ನಂಬಿಕೆ ಹಾಗೂ ನಿಮ್ಮೊಳಗಿನ ಉತ್ಸಾಹ ಎರಡೂ ಯಾವತ್ತಿಗೂ ಕುಂದದಂತೆ ನೋಡಿಕೊಳ್ಳಿ’ ಎಂದೂ ಕಿವಿಮಾತು ಹೇಳಿದರು.‌‌

ಇಎಸ್‌ಐ ಕಾಲೇಜಿನ ಡೀನ್‌ ಡಾ.ಇವಾನಾ ಲೋಬೊ ಮಾತನಾಡಿ, ‘ನರ್ಸಿಂಗ್‌ ಕೋರ್ಸ್‌ ಆಯ್ಕೆ ಮಾಡಿಕೊಂಡವರಿಗೆ ದೀಪದಾನ ಮಾಡುವುದಕ್ಕೆ ಅದರದೇ ವಿಶೇಷ ಅರ್ಥವಿದೆ. ದೀಪವು ತಾನು ಉರಿದರೂ ಇನ್ನೊಬ್ಬರಗೆ ಬೆಳಕು ಚೆಲ್ಲುತ್ತದೆ. ಯಾವುದೇ ಸ್ವಾರ್ಥವಿಲ್ಲದೇ ಬೆಳಗುತ್ತದೆ. ಅದೇ ರೀತಿ ನರ್ಸಿಂಗ್‌ ವೃತ್ತಿ ಆಯ್ಕೆ ಮಾಡಿಕೊಂಡವರು ತಮ್ಮ ಸ್ವಾರ್ಥ ಬಿಟ್ಟು, ರೋಗಿಗಳ ಸೇವೆಗೆ ತೊಡಗಿಸಿಕೊಳ್ಳಬೇಕು. ಇದನ್ನು ಫ್ಲಾರೆನ್ಸ್‌ ನೈಟಿಂಗೇಲ್‌ ಅವರು ಹಲವು ವರ್ಷಗಳ ಹಿಂದೆಯೇ ಮಾಡಿ ತೋರಿಸಿದ್ದಾರೆ. ಅವರ ಆದರ್ಶ ಬದುಕು ನಿಮಗೆ ದಾರಿದೀಪವಾಗಲಿ’ ಎಂದು ಹರಿಸಿದರು.

ಇಎಸ್‌ಐಸಿ ಡೆಂಟಲ್‌ ಕಾಲೇಜಿನ ಡೀನ್‌ ಡಾ.ಎಂ.ನಾಗರಾಜ ಮಾತನಾಡಿ, ‘ದೇಶದ ಪ್ರತಿಷ್ಠಿತ ನರ್ಸಿಂಗ್‌ ಕಾಲೇಜುಗಳ ಸಾಲಿನಲ್ಲಿ ಈಗ ಕಲಬುರಗಿ ಇಎಸ್‌ಐಸಿ ಕೂಡ ನಿಂತಿದೆ. ಇಂಥ ಸರ್ಕಾರಿ ಸಂಸ್ಥೆಯಲ್ಲಿ ಕಲಿಯುವುದು ಕೂಡ ಪ್ರತಿಷ್ಠೆಯೇ ಆಗಿದೆ. ಇಲ್ಲಿರುವ ತಜ್ಞರು, ಹಿರಿಯ ಬೋಧಕರಲ್ಲಿನ ಜ್ಞಾನವನ್ನು ಕೇಳಿ ಪಡೆಯಲು ವಿದ್ಯಾರ್ಥಿಗಳು ಹಿಂಜರಿಕೆ ಪಡಬಾರದು’ ಎಂದು ಸಲಹೆ ನೀಡಿದರು.

ಇಎಸ್‌ಐಸಿ ಆಸ್ಪತ್ರೆಯ ನರ್ಸಿಂಗ್‌ ವಿಭಾಗದ ಉಪ ಮೇಲ್ವಿಚಾರಕ ಜಿ.ಸುಧಾಕರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೆಂಥಿಲ್‌ ಕವಿತಾ ಆರ್‌. ಅವರು ‘ಪ್ರತಿಜ್ಞಾವಿಧಿ’ ಬೋಧಿಸಿದರು. ವಿವಿಧ ವಿಭಾಗಗಳ ಡೀನ್‌ಗಳು, ವಿದ್ಯಾರ್ಥಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು