ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಈಶಾನ್ಯ ಪದವೀಧರರ ಕ್ಷೇತ್ರ: ಇಂದು ಮತದಾನ

19 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆಯಲಿರುವ 1,56,623 ಮತದಾರರು
Published 3 ಜೂನ್ 2024, 0:30 IST
Last Updated 3 ಜೂನ್ 2024, 0:30 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಜೂನ್ 3ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ಏಳು ಜಿಲ್ಲೆಗಳಲ್ಲಿ 99,121 ಪುರುಷ, 57,483 ಮಹಿಳಾ ಹಾಗೂ 19 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 1,56,623 ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಕ್ಷೇತ್ರದಲ್ಲಿ 160 ಮುಖ್ಯ ಮತ್ತು 35 ಹೆಚ್ಚುವರಿ ಸೇರಿ ಒಟ್ಟು 195 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಈ ಚುನಾವಣೆಗೆ ಇವಿಎಂ ಬದಲು ಮತಪತ್ರಗಳನ್ನು ಬಳಸಲಾಗುತ್ತಿದೆ. ಅಭ್ಯರ್ಥಿಗಳ ಹೆಸರು ಮತ್ತು ಅವರ ಭಾವಚಿತ್ರವನ್ನೂ ಮತಪತ್ರಗಳಲ್ಲಿ ಮುದ್ರಿಸಲಾಗಿದೆ. ಮತದಾರರು ಪೋಸ್ಟಲ್ ಬ್ಯಾಲೆಟ್ ಮೂಲಕ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದೆ.

ಮತಗಟ್ಟೆಗಳಲ್ಲಿ ನೀಡುವ ನೇರಳೆ ಬಣ್ಣದ ಸ್ಕೆಚ್‌ ಪೆನ್‌ನಿಂದ ಮತದಾರರು ಆದ್ಯತಾ ಮತ ನಮೂದಿಸಬೇಕು. ಆದ್ಯತಾ ಸಂಖ್ಯೆ ನಮೂದಿಸುವಾಗ ಒಂದೇ ಭಾಷೆ ಬಳಸಬೇಕು. ಸ್ಕೆಚ್ ಪೆನ್ ಹೊರತುಪಡಿಸಿ ಇತರೆ ಪೆನ್ ಬಳಸಿ ಮತ ಚಲಾಯಿಸಿದಲ್ಲಿ ಅಂತಹ ಮತಗಳು ಅಸಿಂಧುಗೊಳ್ಳಲಿವೆ.

ಈ ಚುನಾವಣೆಯಲ್ಲಿ ‘ನೋಟಾ’ ಅನ್ವಯಿಸದ ಕಾರಣ ಮತಪತ್ರದಲ್ಲಿ ಇದನ್ನು ಮುದ್ರಿಸಿರುವುದಿಲ್ಲ. ಮತ ಚಲಾಯಿಸುವ ಮತದಾರರಿಗೆ ಅಳಿಸಲಾಗದ ಶಾಹಿಯನ್ನು ಬಲಗೈ ತೋರು ಬೆರಳಿಗೆ ಹಚ್ಚಲಾಗುತ್ತದೆ.

ಸಕಲ ಸಿದ್ಧತೆ: ಶಾಂತಿಯುತ ಮತದಾನಕ್ಕೆ ಆಯಾ ಜಿಲ್ಲೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾನುವಾರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಮಸ್ಟರಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಅಭ್ಯರ್ಥಿಗಳ ಹೆಸರು ಮತ್ತು ಅವರ ಭಾವಚಿತ್ರ ಇರುವ ಮತಪತ್ರಗಳು, ಇಂಕ್ ಸೇರಿ ಇತರೆ ಸಾಮಗ್ರಿಗಳನ್ನು ತೆಗೆದುಕೊಂಡು ತಮಗೆ ನಿಗದಿಪಡಿಸಿದ್ದ ಮತಗಟ್ಟೆಗಳಿಗೆ ತೆರಳಿದರು.

19 ಅಭ್ಯರ್ಥಿಗಳು ಕಣದಲ್ಲಿ: ಹಾಲಿ ಸದಸ್ಯ, ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ ಹುಮನಾಬಾದ್‌, ಬಿಜೆಪಿಯ ಅಮರನಾಥ ಪಾಟೀಲ, ಅನಿಮೇಶ ಮಹಾರುದ್ರಪ್ಪ, ಅಬ್ದುಲ್ ಜಬ್ಬಾರ್, ಕಾಶಿನಾಥ ಎಂ., ಎನ್.ಪ್ರತಾಪರೆಡ್ಡಿ, ಬಸವರಾಜ, ಮಹೆಬೂಬ್, ಮೊಹಮ್ಮದ್ ಹುಸೇನ್ ಮೊಹಮ್ಮದ್ ಅಲಿ, ರಿಯಾಜ್ ಅಹ್ಮದ್, ವಿಲಾಸ ಮಾರುತಿ, ಶರಣಬಸಪ್ಪ ಪೀರಪ್ಪ, ಶರಣಬಸಪ್ಪ ಎಸ್.ಎ., ಶಶಿಧರ ಬಸವರಾಜ, ಶಿವಕುಮಾರ ಜಂಬುನಾಥ ಸ್ವಾಮಿ, ಸತೀಶಕುಮಾರ ಅಮೃತ, ಸಾಯಿನಾಥ ಸಂಜೀವಕುಮಾರ್, ಸುನೀಲಕುಮಾರ ಹೈದ್ರಪ್ಪ ಮತ್ತು ಸುರೇಶ ಸೇರಿ ಒಟ್ಟು 19 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಹೇಮರಡ್ಡಿ ಮಲ್ಲಮ್ಮ ಸಂಶೋಧನಾ ಕೇಂದ್ರದ ಕಟ್ಟಡದಲ್ಲಿ ಜೂನ್ 6ರಂದು ಮತ ಎಣಿಕೆ ನಡೆಯಲಿದೆ.

ಕಲಬುರಗಿಯಲ್ಲಿ 47 ಮತಗಟ್ಟೆ ಸ್ಥಾಪನೆ

ಕಲಬುರಗಿ ಜಿಲ್ಲೆಯಾದ್ಯಂತ 41 ಮುಖ್ಯ ಹಾಗೂ 6 ಹೆಚ್ಚುವರಿ ಸೇರಿ 47 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ 6 ಜನರ ತಂಡದಂತೆ ಒಟ್ಟು 60 ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ 22688 ಪುರುಷ 15826 ಮಹಿಳೆ ಐವರು ಇತರೆ ಸೇರಿ ಒಟ್ಟು 38519 ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಅಫಜಲಪುರದಲ್ಲಿ 4 ಆಳಂದದಲ್ಲಿ 5 ಚಿಂಚೋಳಿ ಚಿತ್ತಾಪುರ ಹಾಗೂ ಜೇವರ್ಗಿಯಲ್ಲಿ ತಲಾ 3 ಶಹಾಬಾದ್ ಕಾಳಗಿ ಹಾಗೂ ಯಡ್ರಾಮಿಯಲ್ಲಿ ತಲಾ 1 ಕಲಬುರಗಿ ನಗರದಲ್ಲಿ 18 ಕಲಬುರಗಿ ಗ್ರಾಮೀಣ ಮತ್ತು ಕಮಲಾಪುರ ತಲಾ 2 ಹಾಗೂ ಸೇಡಂನಲ್ಲಿ 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕಲಬುರಗಿ ಮಹಾನಗರ ಪಾಲಿಕೆ ಕಚೇರಿ ಮತ್ತು ಕಲಬುರಗಿ ತಹಶೀಲ್ದಾರ್ ಕಚೇರಿಯಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT