ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಕೀರ್ತಿ ಹೆಚ್ಚಿಸಿದ್ದೇನೆ; ಅಭಿವೃದ್ಧಿಗೆ ಮತ ನೀಡಿ: ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್‌ ಅಭ್ಯರ್ಥಿ
Last Updated 25 ಏಪ್ರಿಲ್ 2019, 9:37 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಿಮ್ಮ ಪ್ರತಿನಿಧಿಯಾಗಿ ನೀವು ತಲೆ ತಗ್ಗಿಸುವ ಕೆಲಸ ನಾನೆಂದೂ ಮಾಡಿಲ್ಲ. ಕಲಬುರ್ಗಿಯ ಕೀರ್ತಿ ಹೆಚ್ಚಿಸಿದ್ದೇನೆ. ನನ್ನ ಕೆಲಸ ನೋಡಿ, ಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿ ಮತ್ತು ಹಿತಾಸಕ್ತಿ ಕಾಪಾಡಲಿಕ್ಕೆ ನನಗೆ ಮತ ನೀಡಿ’ ಎಂಬುದು ಕಾಂಗ್ರೆಸ್‌ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರ ಮನವಿ.

ಅವರು ‘ಪ್ರಜಾವಾಣಿ‘ಗೆ ನೀಡಿದ ಸಂದರ್ಶನದ ಸಾರ ಇಲ್ಲಿದೆ.

* ಹಿಂದಿನ ನಿಮ್ಮ 11 ಚುನಾವಣೆಗಳಿಗೂ, ಈಗಿನದಕ್ಕೂ ಏನು ವ್ಯತ್ಯಾಸ?

ಈ ಚುನಾವಣೆ ನನಗೆ ಅಷ್ಟಾಗಿ ಕಷ್ಟಕರ ಅನಿಸುತ್ತಿಲ್ಲ. ಕೆಲಸ ಮಾಡಿ ಮತ ಕೇಳುತ್ತಿದ್ದೇನೆ. ಆಡಳಿತ ವಿರೋಧಿ ಅಲೆ ಇಲ್ಲ. ಅಭ್ಯರ್ಥಿ (ನನ್ನ) ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬಿಜೆಪಿಯವರೂ ಅಷ್ಟೇ. ನನ್ನ ವಿರುದ್ಧವಾಗಿ ಹೇಳುತ್ತಿಲ್ಲ. ಬದಲಿಗೆ ಮೋದಿ ಅವರಿಗೆ ಮತ ಕೊಡಿ ಎನ್ನುತ್ತಿದ್ದಾರೆ. ಇದು ಸರಿಯಲ್ಲ. ಅಭ್ಯರ್ಥಿಗಳನ್ನು ಹೋಲಿಕೆ ಮಾಡಿ, ಕೆಲಸ ನೋಡಿ ಮತ ನೀಡಬೇಕು. ಕಲಬುರ್ಗಿ ಪ್ರತಿನಿಧಿ ಮೋದಿ ಅಲ್ಲ. ಮೋದಿ ಪ್ರಧಾನಿ ಆಗಲು ಪೈಪೋಟಿ ನಡೆಸಿರಬಹುದು. ಮೋದಿ 2014ರ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನೇ ಈಡೇರಿಸಿಲ್ಲ. ಇನ್ನು ಈ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರಾ?

* ಖರ್ಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರಲ್ಲ?

ಕಲಬುರ್ಗಿಯಲ್ಲಿ ಏನೇನು ಅಭಿವೃದ್ಧಿ ಕೆಲಸ ಆಗಿವೆ ಎಂಬ ಕಲ್ಪನೆ ಮೋದಿಗೆ ಮತ್ತು ಬಿಜೆಪಿ ನಾಯಕರಿಗೆ ಇಲ್ಲ. ನಾನು ಕೇಂದ್ರ ಕಾರ್ಮಿಕ ಸಚಿವನಾಗಿದ್ದಾಗ ಇಲ್ಲಿ ಇಎಸ್‌ಐಸಿ ಸಂಸ್ಥೆ ಸ್ಥಾಪಿಸಿದೆ. ಈ ಸ್ವಾಯತ್ತ ಸಂಸ್ಥೆಯನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ಪಡೆದು ಏಮ್ಸ್‌ ಸ್ಥಾಪಿಸಬಹುದಿತ್ತು. ಅದನ್ನು ಮಾಡಲಿಲ್ಲ. ಇಎಸ್‌ಐಸಿಯಲ್ಲಿಯ ಖಾಲಿಹುದ್ದೆಗಳನ್ನೂ ಭರ್ತಿ ಮಾಡಲಿಲ್ಲ. ಅಸಂಘಟಿತ ಕಾರ್ಮಿಕ ವಲಯಕ್ಕೆ ನೀಡಿದ್ದ ಸೌಲಭ್ಯವನ್ನೂ ವಾಪಸ್ಸು ಪಡೆದಿದ್ದರು. ನಾನು ಹೋರಾಟ ನಡೆಸಿದ ನಂತರ ಸರಿಯಾಯಿತು.

ರೈಲ್ವೆ ಸಚಿವನಾಗಿದ್ದಾಗ ರಾಜ್ಯಕ್ಕೆ 27 ಹೊಸ ರೈಲು ಆರಂಭಿಸಿದೆ. ಕಲಬುರ್ಗಿ ರೈಲ್ವೆ ವಿಭಾಗಕ್ಕೆ ಎರಡು ಕಡೆ ಜಮೀನನ್ನು ಹಸ್ತಾಂತರಿಸಿದ್ದೆ. ಇವರು ಹೊಸ ವಿಭಾಗ ಆರಂಭಿಸಲಿಲ್ಲ. ಇದ್ದ ಸೌಲಭ್ಯವನ್ನೂ ಬಳಕೆಗೂ ಅವಕಾಶ ನೀಡಲಿಲ್ಲ. ವಾಡಿ–ಗುಲಬರ್ಗಾ, ಬೀದರ್‌–ಗುಲಬರ್ಗಾ ಹೊಸ ಮಾರ್ಗ ಮಾಡಿದ್ದು ನಾವು. ಕಲಬುರ್ಗಿಗೆ ಅಷ್ಟೇ ಅಲ್ಲ, ಹೈದರಾಬಾದ್‌ ಕರ್ನಾಟಕಕ್ಕೆ ಮೋದಿ ಸರ್ಕಾರದ ಕೊಡುಗೆ ಶೂನ್ಯ.

* ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿಲ್ಲ ಏಕೆ?

ಕಲಬುರ್ಗಿ ವಿಮಾನ ನಿಲ್ದಾಣವನ್ನು ಉಡಾನ್‌ ಯೋಜನೆಯಲ್ಲಿ ಸೇರಿಸಿ ವಿಮಾನ ಸೇವೆ ಆರಂಭಿಸಿ ಎಂದು ಕೇಂದ್ರ ಸಚಿವರನ್ನು ಭೇಟಿಯಾಗಿ ಒತ್ತಾಯಿಸಿದ್ದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು ಕರೆತಂದು ನಾವು ಮಾಡಿರುವ ಕೆಲಸ ತೋರಿಸಿದ್ದೆ. ಉಡಾನ್‌ ಯೋಜನೆಯಲ್ಲಿ ಮಾರ್ಗಗಳ ಹರಾಜು ನಡೆದರೂ ವಿಮಾನಯಾನ ಆರಂಭಿಸಲಿಲ್ಲ. ಇದರ ಶ್ರೇಯ ನನಗೆ ಬರುತ್ತದೆ ಎಂದು ಅವರು ಹೀಗೆ ಮಾಡಿದರು. ವಿಮಾನ ನಿಲ್ದಾಣವನ್ನು ನೀವೇ ಉದ್ಘಾಟನೆ ಮಾಡಬಹುದಿತ್ತಲ್ಲ? ನಮಗೆ ಬೇಕಿರುವುದು ಶ್ರೇಯ ಅಲ್ಲ, ಸೌಲಭ್ಯ. ನಾನು ಕೇಂದ್ರ ಸಚಿವನಾಗಿದ್ದಾಗ ಅಭಿವೃದ್ಧಿ ವಿಷಯದಲ್ಲಿ ಹೀಗೆ ರಾಜಕೀಯ ಬೆರೆಸಿರಲಿಲ್ಲ. ಆದರೆ, ಈಗಿನವರಿಗೆ ನಮ್ಮ ಅಭಿವೃದ್ಧಿ ಕಾಮಗಾರಿ ಸಹಿಸಲು ಆಗುತ್ತಿಲ್ಲ.

* 371 (ಜೆ) ಯಾರ ಕೊಡುಗೆ?

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು. ಗೃಹ ಸಚಿವರಾಗಿದ್ದ ಎಲ್‌.ಕೆ. ಅಡ್ವಾಣಿ ಪ್ರಸ್ತಾವ ತಿರಸ್ಕರಿಸಿದ್ದರು. ತಾವೂ ಪ್ರಯತ್ನ ಮಾಡಿದ್ದೇವೆ ಎಂದು ಹೇಳುತ್ತಿರುವವರು ತಮ್ಮ ಬಳಿ ಈ ಕಾಯ್ದೆಯ ಕರಡು ಇದ್ದರೆ ತೋರಿಸಲಿ. ನೀವು ಹೋರಾಟ ಮಾಡಿರಬಹುದು, ಕೇಳಿರಬಹುದು. ಎಲ್ಲರೂ ಕೇಳ್ತಾರೆ. ನಿಮ್ಮ ಸರ್ಕಾರ ತಿರಸ್ಕರಿಸಿದ್ದ ಪ್ರಸ್ತಾಪ ಪುರಸ್ಕಾರವಾಗುವಂತೆ ಮಾಡಿದ್ದು ಯಾರು? ಸೋನಿಯಾ ಗಾಂಧಿ ಅವರ ಸಹಕಾರದಿಂದ ಸರ್ವಾನುಮತದಿಂದ ಈ ಕಾಯ್ದೆ ಜಾರಿ ಮಾಡಿಸಿದೆ. ಇದು ಖಂಡಿತವಾಗಿಯೂ ಕಾಂಗ್ರೆಸ್‌ ಕೊಡುಗೆ. ಕಾಂಗ್ರೆಸ್‌ ಪ್ರತಿನಿಧಿಯಾಗಿ ನಾನು ಕೆಲಸ ಮಾಡಿದ್ದೇನೆ. ಈ ಕಾಯ್ದೆ ಜಾರಿಗೆ ನಾನು ಕಾರಣ.

* ನೀವು ಪುತ್ರ ವ್ಯಾಮೋಹಿ ಎಂದು ವಿರೋಧಿಗಳು ಹೇಳುತ್ತಿದ್ದಾರಲ್ಲ

ಪಕ್ಷದ ಆದೇಶದ ಮೇರೆಗೆ ನಾನು ಸಂಸತ್ತಿಗೆ ಸ್ಪರ್ಧಿಸಬೇಕಾಗಿ ಬಂತು. ಚಿತ್ತಾಪುರ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿ ಬೇಕು ಎಂಬ ಕಾರಣಕ್ಕೆ ಪಕ್ಷ ಪ್ರಿಯಾಂಕ್‌ ಅವರನ್ನು ಕಣಕ್ಕಿಳಿಸಿತು. ಸ್ವಸಾರ್ಮಥ್ಯ, ಪಕ್ಷ ಸೇವೆಗಾಗಿ ಅವರಿಗೆ ಸ್ಥಾನಮಾನ ದೊರೆತಿದೆ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಈಗ ಮಗನ ಮೋಹ ಎಂದು ಕೆಲವರು ಟೀಕಿಸುತ್ತಿರುವುದು ಮತ್ಸರದ ಮಾತು.

* ನೀವು ಮೇಲ್ವರ್ಗದವರ ವಿರೋಧಿ ಎಂಬ ಆರೋಪ ಇದೆಯಲ್ಲ?

ಯಾರೊಂದಿಗಾದರೂ ನಾನು ಜಗಳ ಮಾಡಿದ್ದೀನಾ? ಯಾವುದೇ ಸಮುದಾಯಕ್ಕೆ ನನ್ನಿಂದ ತೊಂದರೆ ಆಗಿದೆಯಾ? ನಾನು ಯಾರ ಮನಸ್ಸನ್ನೂ ನೋಯಿಸುವ ಕೆಲಸ ಮಾಡಿಲ್ಲ. ರೈಲ್ವೆ, 371 (ಜೆ) ಜಾರಿ, ಆಸ್ಪತ್ರೆಗಳನ್ನು ಆರಂಭಿಸಿದ್ದು ಎಲ್ಲ ವರ್ಗದವರಿಗಾಗಿ ಅಲ್ಲವೇ? ಲಿಂಗಾಯತ ಶಿಕ್ಷಣ ಸಂಸ್ಥೆಗಳಾದ ಎಚ್‌ಕೆಇ ಸಂಸ್ಥೆಗೆ ನಾನು ಕಂದಾಯ ಸಚಿವನಾಗಿದ್ದಾಗ ರಾಯಚೂರಿನಲ್ಲಿ 62 ಎಕರೆ ಹಾಗೂ ಕಲಬುರ್ಗಿಯಲ್ಲಿ 20 ಎಕರೆ ಜಮೀನು ಮಂಜೂರು ಮಾಡಿಸಿದ್ದೇನೆ. ಬೆಳಗಾವಿ ಕೆಎಲ್‌ಇ ಸಂಸ್ಥೆಯ ಸ್ನಾತಕೋತ್ತರ ಕೇಂದ್ರಕ್ಕೂ ಜಾಗ ಕೊಟ್ಟಿದ್ದೇನೆ. ವಿಜಯಪುರದ ಬಿಎಲ್‌ಡಿಇ ಮತ್ತು ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘಕ್ಕೂ ಸಹಾಯ ಮಾಡಿದ್ದೇನೆ.

ನಾನು ಬಡವರು ಮತ್ತು ಸಾಮಾಜಿಕ ನ್ಯಾಯದ ಪರ ಇರುವುದು ನಿಜ. ಭೂಸುಧಾರಣೆ ಹೋರಾಟ ನಡೆಸಿದ್ದೂ ನಿಜ. ಆಗ ಸ್ವಲ್ಪ ಜನರಿಗೆ ತೊಂದರೆ ಆಗಿರಬಹುದು. ಖರ್ಗೆ ಎಲ್ಲ ವರ್ಗಗಳ ನಾಯಕ ಎಂದರೆ ಬಿಜೆಪಿಯವರಿಗೆ ಅವಮಾನ ಅನಿಸುತ್ತಿರಬೇಕು. ಹೀಗಾಗಿ ಅವರು ಇಂತಹ ಅಪಪ್ರಚಾರನಡೆಸುತ್ತಿದ್ದಾರೆ.

* ಇದು ಬಂಜಾರ ಮತ್ತು ದಲಿತರ ಮಧ್ಯದ ಚುನಾವಣೆ ಎಂಬಂತೆ ಬಿಂಬಿಸಲಾಗುತ್ತಿದೆಯಲ್ಲ?

ಬಂಜಾರರು ಮತ್ತು ನಾವು ಅಣ್ಣ ತಮ್ಮರ ಹಾಗೆ ಇದ್ದೇವೆ. ನನ್ನನ್ನೂ ಅವರು ಗೌರವದಿಂದ ನೋಡುತ್ತಾರೆ. ಚುನಾವಣೆ ಪೂರ್ವ ಹಾಗೂ ಈಗ ಸಾಕಷ್ಟು ಬಂಜಾರರ ಸಭೆ ನಡೆಸಿದ್ದೇವೆ. ಜೆಡಿಎಸ್‌ನ ರೇವೂ ನಾಯಕ ಬೆಳಮಗಿ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಆ ಸಮಾಜದ ಸುಭಾಷ ರಾಠೋಡ, ಬಾಬುರಾವ ಚವ್ಹಾಣ, ಅನೇಕರು ಸ್ವಪ್ರೇರಣೆಯಿಂದ ನಮ್ಮೊಂದಿಗೆ ಬಂದಿದ್ದಾರೆ. ಮತ ವಿಭಜನೆಗಾಗಿ ಕೆಲವರು ಇಂತಹ ಕುತಂತ್ರ ಮಾಡುತ್ತಿದ್ದು, ಅವರು ಯಶಸ್ವಿಯಾಗುವುದಿಲ್ಲ. ಬಂಜಾರರನ್ನು ರಾಜ್ಯದಲ್ಲಿ ಪರಿಶಿಷ್ಟರ ಪಟ್ಟಿಗೆ ಸೇರಿಸಿದ್ದು ಕಾಂಗ್ರೆಸ್‌ ಪಕ್ಷ. ಆಗ ನಾನೂ ಸಚಿವನಾಗಿದ್ದೆ. ಈಗ ಕೆಲವರು ಕಾಂಗ್ರೆಸ್‌ ಏನು ಕೊಟ್ಟಿದೆ ಎಂದು ಕೇಳಿದರೆ ಏನು ಹೇಳುವುದು?

* ಸೋತವರ ಸಂಘ ಎನ್ನುತ್ತಿದ್ದೀರಲ್ಲ...

ನನ್ನ ಎದೆಯಲ್ಲಿ ಖರ್ಗೆ ಇದ್ದಾರೆ. ರಕ್ತ ರಕ್ತದಲ್ಲಿ ಖರ್ಗೆ ಇದ್ದಾರೆ. ಖರ್ಗೆ ಅವರ ಆಶೀರ್ವಾದದಿಂದಲೇ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ. ಸೋಲಿಲ್ಲದ ಸರದಾರ, ಅಭಿವೃದ್ಧಿಯ ಹರಿಕಾರ ಎನ್ನುತ್ತಿದ್ದವರು ಈಗ ನನ್ನನ್ನು ಕೆಟ್ಟವ ಎನ್ನುತ್ತಿದ್ದಾರೆ! ನಾನು ನಿನ್ನೆ ಮೊನ್ನೆ ಬಂದವನಲ್ಲ. 50 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. 48 ವರ್ಷ ವಿಧಾನಸಭೆ ಇಲ್ಲವೆ ಲೋಕಸಭೆಯಲ್ಲಿ ಸಕ್ರಿಯನಾಗಿದ್ದೇನೆ. ಅಂಥವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ.

* ಪ್ರತಿಸ್ಪರ್ಧಿಗೆ ನೀವು ಕೇಳಲೇಬೇಕಿರುವ ಪ್ರಶ್ನೆಗಳು ಯಾವವು?

ನಾನು ಅಭ್ಯರ್ಥಿಗೆ ಪ್ರಶ್ನೆ ಕೇಳಲ್ಲ. ಅವರ ಪಕ್ಷಕ್ಕೆ ಕೇಳುತ್ತೇನೆ. ನೀವು ಯಾವ ಆಧಾರದ ಮೇಲೆ ನನ್ನನ್ನು ವಿರೋಧಿಸುತ್ತಿದ್ದೀರಿ? ನಾನು ಅಭಿವೃದ್ಧಿ ಕೆಲಸ ಮಾಡಿಲ್ಲವಾ? ಚುನಾಯಿತನಾದ ನಂತರ ಸಂಸತ್ತಿನಲ್ಲಿ ಸಕ್ರಿಯನಾಗಿ ಕೆಲಸ ಮಾಡಿಲ್ಲವಾ? ಮಂತ್ರಿಯಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಲ್ಲ ಅನ್ನುತ್ತೀರಾ? ಹಾಗಾದರೆ ಯಾವ ಕಾರಣಕ್ಕಾಗಿ ನನ್ನನ್ನು ವಿರೋಧಿಸುತ್ತಿದ್ದೀರಿ? ಅಭ್ಯರ್ಥಿಯನ್ನು ದತ್ತು ತೆಗೆದುಕೊಂಡವರು ಇದಕ್ಕೆ ಉತ್ತರಿಸಬೇಕು. ಇನ್ನು ಆ ಅಭ್ಯರ್ಥಿಯೂ ಕಾಂಗ್ರೆಸ್‌ ಸಿದ್ಧಾಂತಗಳು ಸರಿ ಇಲ್ಲ. ಬಿಜೆಪಿ ಸಿದ್ಧಾಂತ ಸರಿ ಇವೆ ಎಂದು ಹೇಳುತ್ತಿಲ್ಲ. ಬದಲಿಗೆ ಮೋದಿಯನ್ನು ಪ್ರಧಾನಿ ಮಾಡಬೇಕು ಎಂದೇ ಹೇಳುತ್ತಿದ್ದಾನೆ. ಅಭ್ಯರ್ಥಿಗಳನ್ನು ಹೋಲಿಕೆ ಮಾಡಿ ಮತಕೊಡಿ. ನನ್ನನ್ನು ಗೆಲ್ಲಿಸಿದರೆ ಗುಲಬರ್ಗಾ ಕ್ಷೇತ್ರ ಅಷ್ಟೇ ಅಲ್ಲ, ಕರ್ನಾಟಕ ರಾಜ್ಯಕ್ಕೆ ಏನು ಪ್ರಯೋಜನಾಗುತ್ತದೆ? ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಏನು ಲಾಭ ಆಗುತ್ತದೆ ಎಂಬುದನ್ನು ಚಿಂತಿಸಿ ಮತ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT