ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ದಾಳಿ ಶಂಕೆ: ಕಲಬುರ್ಗಿಯಲ್ಲೂ ಹೈ ಅಲರ್ಟ್‌

Last Updated 17 ಆಗಸ್ಟ್ 2019, 10:10 IST
ಅಕ್ಷರ ಗಾತ್ರ

ಕಲಬುರ್ಗಿ: ಉಗ್ರರ ದಾಳಿ ಶಂಕೆ ಹಿನ್ನೆಲೆಯಲ್ಲಿ ಕಲಬುರ್ಗಿ ನಗರದಲ್ಲಿಯೂ ಶನಿವಾರದಿಂದ ಹೈ ಅಲರ್ಟ್‌ ಘೋಷಿಸಲಾಗಿದ್ದು, ಜನನಿಬಿಡ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ರಾಜ್ಯದಲ್ಲಿ ಉಗ್ರರ ದಾಳಿ ನಡೆಯುವ ಸಂಭವ ಇದೆ ಎಂಬ ಗುಪ್ತಚರ ಇಲಾಖೆ ನೀಡಿದ ಎಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲೆಡೆ ಹೈ ಅಲರ್ಟ್‌ ಘೋಷಿಸಲಾಗಿದೆ. ನಗರದ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ದೊಡ್ಡ ದೇವಸ್ಥಾನಗಳು, ದರ್ಗಾ, ಚರ್ಚ್‌ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿಯೂ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಡಿಸಿಪಿ ಕಿಶೋರಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಸಶಸ್ತ್ರ ಮೀಸಲು ಪಡೆಯನ್ನೂ ಸಿದ್ಧಗೊಳಿಸಲಾಗಿದೆ. ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ, ಮೆಟಲ್‌ ಡಿಟೆಕ್ಟರ್‌ ಟೀಮ್‌, ಬೆರಳಚ್ಚು ತಜ್ಞರು ಹೀಗೆ ಎಲ್ಲ ಬಗೆಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.

ಶುಕ್ರವಾರ ಬೆಳಿಗ್ಗೆ ಬಸ್‌ನಿಲ್ದಾಣ, ರೈಲು ನಿಲ್ದಾಣ ಹಾಗೂ ದರ್ಗಾಗಳಲ್ಲಿ ಶ್ವಾನದಳ ಮತ್ತು ಬಾಂಬ್‌ ನಿಷ್ಕ್ರಿಯ ದಳದ ಸಿಬ್ವಂದಿ ತಪಾಸಣೆಗೆ ಧಾವಿಸಿದರು. ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ಕಂಡು ಪ್ರಯಾಣಿಕರು ಪ್ರಯಾಣಿಕರು ಗಾಬರಿಯಾದರು. ಈ ಸಂದರ್ಭದಲ್ಲಿ ನಿಲ್ದಾಣದ ಸಿಬ್ಬಂದಿ ಜನರನ್ನು ಸಮಾಧಾನಗೊಳಿಸಿದರು.

‘ಇದು ಕೇವಲ ಮುಂಜಾಗೃತಾ ಕ್ರಮದ ತಪಾಸಣೆಯಾಗಿದ್ದ ಯಾರೂ ಹೆದರಬೇಕಿಲ್ಲ. ಊಹಾಪೋಹಗಳಿಗೆ ಕಿವಿಗೊಡಬೇಕಿಲ್ಲ’ ಎಂದು ಸಾರಿಗೆ ಸಿಬ್ಬಂದಿ ಲೋಡ್‌ಸ್ಪೀಕರ್‌ನಲ್ಲಿ ಮಾಹಿತಿ ನೀಡಿದರು.

ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ವಾಹನಗಳನ್ನೂ ನಿಲ್ಲಿಸಲಾಗಿದೆ. ಸಾರ್ವಜನಿಕರ ಓಡಾಟ ಇರುವ ಕಡೆಗಳಲ್ಲಿ ಲೋಹ ಶೋಧಕ ಯಂತ್ರ (ಮೆಟಲ್‌ ಡಿಟೆಕ್ಟರ್‌) ಅಳವಡಿಸಲಾಗಿದ್ದು, ಜನರನ್ನು ಅದರ ಮೂಲಕವೇ ಹಾದುಹೋಗುವಂತೆ ಸೂಚಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT