ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ವಿಮಾನ ನಿಲ್ದಾಣದಲ್ಲಿ ಐಎಲ್‌ಎಸ್‌ಗೆ ಚಾಲನೆ

Published 16 ಮೇ 2024, 13:55 IST
Last Updated 16 ಮೇ 2024, 13:55 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಮಾನವನ್ನು ಸುಲಭ ಭೂಸ್ಪರ್ಶ ಮಾಡಲು ನೆರವಾಗುವ ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್‌ (ಐಎಲ್‌ಎಸ್‌) ಬಳಕೆಗೆ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಜಂಟಿ ಪ್ರಧಾನ ವ್ಯವಸ್ಥಾಪಕ (ಸಿಎನ್‌ಎಸ್‌) ಆರ್‌. ದಿವಾಕರ್ ಅವರು ಗುರುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ದಿವಾಕರ್, ‘ಐಎಲ್‌ಎಸ್ ಅಳವಡಿಕೆಯು ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಹೆಚ್ಚಳಕ್ಕೆ ಕೊಡುಗೆ ನೀಡಲಿದೆ. ಈ ಭಾಗದಲ್ಲಿ ಉತ್ತಮ ಸಂಪರ್ಕ ಮತ್ತು ಪ್ರಾದೇಶಿಕ ಆರ್ಥಿಕ ಬೆಳವಣಿಗೆಯನ್ನೂ ಉತ್ತೇಜಿಸಲಿದೆ’ ಎಂದರು.

ವಿಮಾನ ನಿಲ್ದಾಣ ನಿರ್ದೇಶಕ ಚಿಲಕಾ ಮಹೇಶ ಮಾತನಾಡಿ, ‘ರಡಾರ್ ಆಧಾರಿತ ಐಎಲ್‌ಎಸ್‌ ಉಪಕರಣಗಳನ್ನು ರಷ್ಯಾದಿಂದ ತರಿಸಿ ಅಳವಡಿಸಲಾಗಿದೆ. ಮಂಜು ಕವಿದ ವಾತಾವರಣ, ಮಳೆ, ಕಡಿಮೆ ಬೆಳಕನಲ್ಲಿಯೂ ಐಎಲ್‌ಎಸ್‌ ಉಪಕರಣವು ಪೈಲಟ್‌ಗೆ ನಿಖರವಾದ ತಾಂತ್ರಿಕ ಮಾರ್ಗದರ್ಶನ ಹಾಗೂ ಸಂದೇಶಗಳನ್ನು ರವಾನಿಸುತ್ತದೆ’ ಎಂದು ಹೇಳಿದರು.

‘ಈ ಯೋಜನೆಗಾಗಿ ಎಎಐ ₹12.12 ಕೋಟಿ ವೆಚ್ಚ ಮಾಡಿದೆ. ಇದು ದೇಶದಾದ್ಯಂತ ವಿಮಾನ ಪ್ರಯಾಣಿಕರ ಸುರಕ್ಷತೆ ಮತ್ತು ಹಾರಾಟದ ದಕ್ಷತೆಗೆ ನೀಡಿದ ಆದ್ಯತೆಯನ್ನು ಸೂಚಿಸುತ್ತದೆ. ತಡೆರಹಿತ ವಿಮಾನಗಳ ಹಾರಾಟಕ್ಕೆ ಐಎಲ್‌ಎಸ್‌ ಅನುಕೂಲ ಮಾಡಿಕೊಡಲಿದೆ’ ಎಂದರು.

‘ವಿಮಾನ ಪೈಲಟ್ 550 ಮೀಟರ್‌ ಎತ್ತರದಿಂದ ರನ್‌ವೇ ಅನ್ನು ಸುಲಭವಾಗಿ ನೋಡಬಹುದು. ರನ್‌ವೇ ಕೇಂದ್ರ ವಿದ್ಯುತ್ (ಸೆಂಟ್ರಲ್‌ ಲೈಟಿಂಗ್) ಜಾಲವು ಸ್ಪಷ್ಟವಾದ ಹಾದಿಯನ್ನು ತೋರಿಸುತ್ತದೆ’ ಎಂದು ಹೇಳಿದರು.

ಕಲಬುರಗಿ– ತಿರುಪತಿ– ಬೆಳಗಾವಿಗೆ ವಿಮಾನ

‘ವಾರದಲ್ಲಿ ನಾಲ್ಕು ದಿನ ಕಲಬುರಗಿಯಿಂದ ತಿರುಪತಿ ಮಾರ್ಗವಾಗಿ ಬೆಳಗಾವಿಗೆ ಸ್ಟಾರ್‌ಏರ್ ಸಂಸ್ಥೆಯ ವಿಮಾನವು ಹಾರಾಟ ನಡೆಸಲಿದೆ. ಸೋಮವಾರ ಗುರುವಾರ ಶುಕ್ರವಾರ ಮತ್ತು ಶನಿವಾರದಂದು ಕಾರ್ಯಾಚರಣೆ ನಡೆಸಲಿದೆ’ ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ. ‘ಬೆಳಗಾವಿಯಿಂದ ವಿಮಾನವು ತಿರುಪತಿ ತಲುಪಿದ ಬಳಿಕ ಕೆಲಹೊತ್ತು ನಿಲುಗಡೆಯಾಗಿ ಅಲ್ಲಿಂದ ಹೊರಟು ಸಂಜೆ 5.30ಕ್ಕೆ ಕಲಬುರಗಿ ತಲುಪಲಿದೆ. ಪ್ರಯಾಣಿಕರನ್ನು ಹತ್ತಿಸಿಕೊಂಡು ಸಂಜೆ 6ಕ್ಕೆ ಕಲಬುರಗಿಯಿಂದ ಹೊರಟ ವಿಮಾನವು ತಿರುಪತಿಗೆ ಹೋಗಿ ಅಲ್ಲಿಂದ ಬೆಳಗಾವಿಗೆ ಹಾರಲಿದೆ’ ಎಂದು ಮಾಹಿತಿ ನಿಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT