ಮಂಗಳವಾರ, ಅಕ್ಟೋಬರ್ 19, 2021
23 °C
ಮೂರು ವರ್ಷದಲ್ಲಿ ₹ 2.25 ಕೋಟಿ ವಿನಿಯೋಗ, ಶಾಲೆ– ಖಬರಸ್ಥಾನಗಳ ಸುಧಾರಣೆಗೆ ಗಮನ

ಪ್ರದೇಶಾಭಿವೃದ್ಧಿ ನಿಧಿ: ಕಲಬುರಗಿ ಉತ್ತರ ಶಾಸಕಿ ಖನೀಜ್‌ ಫಾತಿಮಾ ಸಾಧನೆಗಳೇನು?

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿ ಖನೀಜ್‌ ಫಾತಿಮಾ ಅವರು, ತಮ್ಮ ಪ್ರದೇಶಾಭಿವೃದ್ಧಿ ನಿಧಿಯ ಅರ್ಧದಷ್ಟು ಅನುದಾನವನ್ನು ಸಿಮೆಂಟ್‌ ರಸ್ತೆಗಳ ನಿರ್ಮಾಣಕ್ಕೇ ವಿನಿಯೋಗಿಸಿದ್ದಾರೆ. ಉಳಿದ ಅರ್ಧವನ್ನು ಶಾಲೆಗಳ ಸುಧಾರಣೆ, ಶೌಚಾಲಯ ನಿರ್ಮಾಣ, ಖಬರ್‌ಸ್ಥಾನಗಳ ಅಭಿವೃದ್ಧಿ ಸೇರಿದಂತೆ ಇತರ ಮೂಲಸೌಕರ್ಯಗಳಿಗೆ ಒದಗಿಸಿದ್ದಾರೆ.

‘ನಮ್ಮ ಕ್ಷೇತ್ರದಲ್ಲಿ ಅರ್ಧದಷ್ಟು ರಸ್ತೆಗಳು ಕಿರಿದಾಗಿವೆ. ಮುಖ್ಯರಸ್ತೆಗಳನ್ನು ಈ ಹಿಂದಿನ ಅವಧಿಯಲ್ಲೇ ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ, ನಾನು ಜನವಸತಿ ಪ್ರದೇಶದ ಚಿಕ್ಕ ರಸ್ತೆಗಳನ್ನು ಸುಧಾರಣೆ ಮಾಡಲು ಅದ್ಯತೆ ನೀಡಿದ್ದೇನೆ. 2018ರಲ್ಲಿ ₹ 1.5 ಕೋಟಿ, 2019ರಲ್ಲಿ ₹ 75 ಲಕ್ಷ ಬಿಡುಗಡೆಯಾಗಿದೆ. 2020ನೇ ಸಾಲಿಗೆ ₹ 2 ಕೋಟಿ ಮಂಜೂರಾತಿ ಸಿಕ್ಕಿದ್ದು ಇನ್ನೂ ಹಣ ಬರಬೇಕಿದೆ. ಇಲ್ಲಿಯವರೆಗೂ ಅರ್ಧದಷ್ಟು ನಿಧಿ ಮಾತ್ರ ಬಂದಿದೆ. ಬಂದಷ್ಟನ್ನೂ ಬಳಸಿಕೊಂಡಿದ್ದೇವೆ’ ಎನ್ನುತ್ತಾರೆ ಶಾಸಕಿ.

ಎಲ್ಲಿ, ಏನೇನು ಕಾಮಗಾರಿ?: 30ನೇ ವಾರ್ಡಿನಲ್ಲಿ ಬರುವ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ಸಿಮೆಂಟ್‌ ರಸ್ತೆ ನಿರ್ಮಾಣಕ್ಕೆ ₹ 3.5 ಲಕ್ಷ ವೆಚ್ಚ ಮಾಡಲಾಗಿದೆ. 29ನೇ ವಾರ್ಡಿನ ಸರ್ಕಾರಿ ಬಾಲಕಿಯರ ಶಾಲೆಯ ಹಿಂದಿನ ಭಾಗದ ರಸ್ತೆ ನಿರ್ಮಾಣ ₹ 5 ಲಕ್ಷ, 23ನೇ ವಾರ್ಡಿನಲ್ಲಿ ಹೊಸದಾಗಿ ಸಿ.ಸಿ ರಸ್ತೆಗೆ ₹ 5 ಲಕ್ಷ, 19ನೇ ವಾರ್ಡಿನಲ್ಲಿ ಬರುವ ಕೈಲಾಸ್‌ ನಗರದಲ್ಲಿ ಸಿಸಿ ರಸ್ತೆ ದುರಸ್ತಿಗೆ ₹ 2.6 ಲಕ್ಷ, 44ನೇ ವಾರ್ಡಿನ ವಾತ್ಸಲ್ಯ ಆಸ್ಪತ್ರೆ ಹಿಂಭಾಗದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ₹ 6 ಲಕ್ಷ ವೆಚ್ಚ ಮಾಡಲಾಗಿದೆ.

ಇದಲ್ಲದೇ ಕೆಲವು ಕಡೆ ಹಳೆಯ ಡಾಂಬರು ರಸ್ತೆಗಳನ್ನು ತೆಗೆದು, ಸಿಮೆಂಟ್‌ ಕಾಂಕ್ರೀಟ್‌ ಅಳವಡಿಸಲಾಗಿದೆ. ಮುಖ್ಯವಾಗಿ 9ನೇ ವಾರ್ಡಿನಲ್ಲಿ ಬರುವ ಬಕರಿ ಮಾರ್ಕೆಟ್‌ (ಕುರಿ ವ್ಯಾಪಾರ)ನಲ್ಲಿ ₹ 4 ಲಕ್ಷ ವಿನಿಯೋಗಿಸಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಇದರ ಪಕ್ಕದಲ್ಲೇ ಬರುವ 14ನೇ ವಾರ್ಡಿನ ಪಾಶ್ಚಾಪುರ ಮಾರ್ಗಕ್ಕೆ ₹ 4 ಲಕ್ಷ, ಹಾಗರಗಾ ಕ್ರಾಸ್‌ಗೆ ಸಂಪರ್ಕ ರಸ್ತೆಗೆ ₹ 4 ಲಕ್ಷ,  2ನೇ ವಾರ್ಡಿಗೆ ₹ 4 ಲಕ್ಷ, 9ನೇ ವಾರ್ಡಿನ ಅಬ್ದುಲ್‌ ಗಣಿ ಮಹಲ್‌ನಿಂದ ಸ್ವಪ್ನಾ ಬೇಕರಿವರೆಗಿನ ರಸ್ತೆಗೆ ₹ 6 ಲಕ್ಷ ವೆಚ್ಚ ಮಾಡಿದ್ದಾಗಿಯೂ ಶಾಸಕರು ಮಾಹಿತಿ ನೀಡಿದ್ದಾರೆ.

ಶಾಲೆ, ಖಬರಸ್ತಾನ್‌ಗೆ ಏನೇನು?: ನಗರದ ಅಲ್‌ ಅಮೀನ್‌ ಉರ್ದು ಸರ್ಕಾರಿ ಶಾಲೆ ದುರಸ್ತಿಗೆ ₹ 4 ಲಕ್ಷ, ಸಂತ್ರಾಸವಾಡಿಯ ಸರ್ಕಾರಿ ಶಾಲೆಗೆ ₹ 4 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣ, ಜೈಹಿಂದ್‌ ನಗರದಲ್ಲಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ ಮುಂತಾದ ಕಾಮಗಾರಿಗಳಿಗೆ ಒಟ್ಟು ₹ 9 ಲಕ್ಷ ವೆಚ್ಚ. ವಿವಿಧ ಶಾಲೆಗಳ ಪೀಠೋಪಕರಣ, ಕಂಪ್ಯೂಟರ್‌, ಗ್ರಂಥಾಲಯ, ಸ್ಮಾರ್ಟ್‌ಕ್ಲಾಸ್‌ ಸಲಕರಣೆಗಳನ್ನು ನೀಡಲು ₹ 8 ಲಕ್ಷ ವಿನಿಯೋಗ ಮಾಡಲಾಗಿದೆ ಎನ್ನುವುದು ಅವರ ಮಾಹಿತಿ.

ಪ್ರಸಕ್ತ ಕಾಮಗಾರಿಗಳೇನು?

l ₹ 20 ಲಕ್ಷ ವೆಚ್ಚದಲ್ಲಿ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ಪರಿಶಿಷ್ಟರ ಓಣಿಯ ದುರಸ್ತಿ

l ₹ 20 ಲಕ್ಷ ವೆಚ್ಚದಲ್ಲಿ ವಿವಿಧೆಡೆ ನೀರು ಶುದ್ಧೀಕರಣ ಘಟಕ

l ₹ 5.4 ಲಕ್ಷ ವೆಚ್ಚದಲ್ಲಿ ನಾಲ್ಕು ಖಬರಸ್ಥಾನಗಳ ಅಭಿವೃದ್ಧಿ

ಅಂಕಿ ಅಂಶ

₹ 2 ಕೋಟಿ: ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ

₹ 1.5 ಕೋಟಿ: 2018ರಲ್ಲಿ ಸಲ್ಲಿಸಿದ ಕ್ರಿಯಾಯೋಜನೆ ಮೊತ್ತ

₹ 75 ಲಕ್ಷ: ಮೊದಲ ವರ್ಷದಲ್ಲಿ ಬಂದ ಅನುದಾನ

₹ 2 ಕೋಟಿ: ಎರಡನೇ ವರ್ಷದಲ್ಲಿ ಇದೂವರೆಗೆ ಖರ್ಚಾದ ಅನುದಾನ‌

24 ಶೇಕಡ: ಪರಿಶಿಷ್ಟ ಸಮುದಾಯಗಳಿಗೆ ಮೀಸಲು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು