ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾಪುರ: ಖಾಸಗಿ ಶಾಲೆಯಲ್ಲಿ ಅನಧಿಕೃತ 6, 7ನೇ ತರಗತಿ!

ಅನುಮತಿ ಇಲ್ಲದೇ ತರಗತಿ ನಡೆಸಿದ ಸಂಸ್ಥೆ: ಶಿಕ್ಷಣ ಇಲಾಖೆ ಅಧಿಕಾರಿಗಳ ಸಹಮತ–ಆರೋಪ
ತೀರ್ಥಕುಮಾರ ಬೆಳಕೋಟಾ
Published 13 ಜೂನ್ 2024, 5:16 IST
Last Updated 13 ಜೂನ್ 2024, 5:16 IST
ಅಕ್ಷರ ಗಾತ್ರ

ಕಮಲಾಪುರ: ಪಟ್ಟಣದ ಶ್ರೀ ಶಾಯಿಕೃಪಾ ಶಿಕ್ಷಣ ಸಂಸ್ಥೆಯ ಶ್ರೀ ಸಾಯಿ ಕೃಪಾ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದೆರಡು ವರ್ಷಗಳಿಂದ ಅನಧಿಕೃತ ತರಗತಿಗಳನ್ನು ನಡೆಸಲಾಗುತ್ತಿರುವುದು ಈಚೆಗೆ ಬೆಳಕಿಗೆ ಬಂದಿದೆ.

ಎರಡು ವರ್ಷಗಳವರೆಗೆ ಅನಧಿಕೃತವಾಗಿ ತರಗತಿ ನಡೆಸಿದರೂ ಕ್ರಮಕೈಗೊಳ್ಳದ, ಪಾಲಕರಿಗೆ ತಿಳಿಸದ ಸಿಆರ್‌ಸಿ, ಬಿಆರ್‌ಸಿ, ಬಿಇಒ ಕಮಲಾಪುರದಲ್ಲೆ ಕಾರ್ಯನಿರ್ವಹಿಸುತ್ತಿರುವ ಡಯಟ್‌ ಅಧಿಕಾರಿಗಳ ವಿರುದ್ಧ ಪಾಲಕರು ಹಿಡಿಶಾಪ ಹಾಕುತ್ತಿದ್ದಾರೆ.

ಸಾಯಿ ಕೃಪಾ ಶಾಲಾ ಆಡಳಿತ ಮಂಡಳಿಯವರಿಗೆ ಕೇವಲ 5ನೇ ವರೆಗೆ ತರಗತಿ ನಡೆಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. 6 ಮತ್ತು 7 ನೇ ತರಗತಿಯ ಅನುಮತಿ ಇಲ್ಲದಿದ್ದರೂ 2022–2023ನೇ ಸಾಲಿನಲ್ಲಿ 6ನೇ ತರಗತಿಗೆ 34 ಮಕ್ಕಳ ದಾಖಲಾತಿ ಪಡೆದುಕೊಂಡಿದ್ದಾರೆ. 2023–2024 ನೇ ಸಾಲಿನಲ್ಲಿ ಸುಮಾರು 45 ಮಕ್ಕಳ ದಾಖಲಾತಿ ಪಡೆದಿದ್ದಾರೆ.

8ನೇ ತರಗತಿಗೆ ಬೇರೆ ಶಾಲೆಗೆ ದಾಖಲಾತಿ ಪಡೆಯಲು ವರ್ಗಾವಣೆ ಪ್ರಮಾಣ ಪತ್ರ ನೀಡುವಂತೆ ಮಕ್ಕಳ ಸಂಬಂಧಪಟ್ಟ ಪಾಲಕರು ಅರ್ಜಿ ಸಲ್ಲಿಸಿದ್ದಾರೆ. ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಇಂದು, ನಾಳೆ ಎಂದು ದಿನ ದೂಡುತ್ತಲೆ ಹೋಗಿದ್ದಾರೆ. ಕೊನೆಗೆ ‘ನಮ್ಮಲ್ಲಿ ನಿಮ್ಮ ಮಕ್ಕಳ ದಾಖಲಾತಿ ಇಲ್ಲ. ಕಲಬುರಗಿ ಶೇಖ್‌ ರೋಜಾದಲ್ಲಿ ನಡೆಸುತ್ತಿರುವ ಕೋರಬಿಟ್‌ ಶಾಲೆಯಲ್ಲಿ ದಾಖಲಿಸಲಾಗಿದೆ. ಆ ಶಾಲೆಯ ವರ್ಗಾವಣೆ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದಾರೆ. ವಿಷಯ ತಿಳಿದು ಪಾಲಕರು ದಿಗ್ಬ್ರಾಂತರಾಗಿದ್ದಾರೆ.

‘ನಿಮ್ಮ ಶಾಲೆಯಲ್ಲೆ 6, 7ನೇ ತರಗತಿ ಅನುಮತಿ ಪಡೆದಿದ್ದೇವೆ ಎಂದು ಹೇಳಿದ್ದೀರಿ, ಶುಲ್ಕ ಭರಿಸಿಕೊಂಡು ಸಾಯಿ ಕೃಪಾ ಶಾಲೆಯದ್ದೇ ರಸೀದಿ ಕೊಟ್ಟಿದ್ದೀರಿ. ಇಲ್ಲಿಯೇ ಪರೀಕ್ಷೆ ನಡೆಸಿದ್ದೀರಿ, 6ನೇ ತರಗತಿ ಅಂಕಪಟ್ಟಿ, ಎಲ್ಲ ದಾಖಲಾತಿಗಳು ಸಾಯಿ ಕೃಪಾ ವಿದ್ಯಾಮಂದಿರ ಶಾಲೆಯದ್ದೇ ಇವೆ. ಈಗ ವರ್ಗಾವಣೆ ಪ್ರಮಾಣ ಪತ್ರ ಮಾತ್ರ ಬೇರೆ ಶಾಲೆಯದ್ದು ಕೊಟ್ಟರೆ ನಮ್ಮ ಮಕ್ಕಳ ಭವಿಷ್ಯದ ಗತಿ ಏನು ಎಂದು ಪಾಲಕರು ಪ್ರತಿಭಟಿಸಿದ್ದಾರೆ. ಕಲಬುರಗಿ ನಗರದಲ್ಲಿನ ಶಾಲೆಯ ವರ್ಗಾವಣೆ ಪತ್ರ ಕೊಟ್ಟರೆ ನಮ್ಮ ಮಕ್ಕಳ ಗ್ರಾಮೀಣ ಮೀಸಲಾತಿ ಕೈ ತಪ್ಪುತ್ತದೆ. ಮುಂದೆ ನಮಗೆ ಅಗತ್ಯ ದಾಖಲಾತಿಗಳು ಬೇಕಾದಾಗ ನಾವು ಎಲ್ಲಿ ಅಲೆಯಬೇಕು. ಕೋರಬಿಟ್‌ ಶಾಲೆ ಎಲ್ಲಿದೆ ಎಂದು ನಮಗೆ, ನಮ್ಮ ಮಕ್ಕಳಿಗೆ ಗೊತ್ತೇ ಇಲ್ಲ. ನೀವು ಕಮಲಾಪುರದಲ್ಲಿ ತರಗತಿ ನಡೆಸಿ ಎಲ್ಲಿಯದೋ ವರ್ಗಾವಣೆ ಪ್ರಮಾಣಪತ್ರ ಕೊಟ್ಟು ಕೈತೊಳೆದುಕೊಂಡರೆ ನಮ್ಮ ಮಕ್ಕಳ ಭವಿಷ್ಯದ ಗತಿ ಏನಾಗಬೇಕು’ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದರು.

‘ಈ ಅಕ್ರಮದಲ್ಲಿ ಆಡಳಿತ ಮಂಡಳಿ, ಮುಖ್ಯಶಿಕ್ಷಕರ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ, ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಹಾಗೂ ಡಯಟ್‌ನ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಇವರೆಲ್ಲರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಮಕ್ಕಳ ಪಾಲಕರಾದ ನಾಮದೇವ ಚವಾಣ್‌, ಭೀಮಾಶಂಕರ ರಾಜೇಶ್ವರ, ನಾರಾಯಣ ಸಾವಜಿ, ನಂದಕುಮಾರ ರಾಠೋಡ್‌, ರಮೇಶ ರಾಠೋಡ್‌, ಅರುಣಾ ವಿಜಯಕುಮಾರ ರಾಠೋಡ, ಬಸವರಾಜ ಡಿಗ್ಗಿ ಸುರೇಶ ಮತ್ತಿತರರು ಒತ್ತಾಯಿಸಿದ್ದಾರೆ.

ಈ ಕುರಿತು ಸ್ಪಷ್ಟನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಂಪರ್ಕಿಸಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ.

ಅನುಮತಿ ಇಲ್ಲದೇ 6, 7ನೇ ತರಗತಿ ನಡೆಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲಿಸಲಾಗುವುದು. ಪ್ರಮಾದ ಕಂಡು ಬಂದಲ್ಲಿ ಸಂಸ್ಥೆ ಹಾಗೂ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು
–ಸಕ್ರೆಪ್ಪಗೌಡ ಬಿರಾದಾರ, ಡಿಡಿಪಿಐ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT