ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಂರಕ್ಷಣೆಗೆ ಅಭಿವೃದ್ಧಿ ವಿಧೇಯಕ ಅಗತ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ಅಭಿಮತ
Last Updated 17 ಜುಲೈ 2022, 12:29 IST
ಅಕ್ಷರ ಗಾತ್ರ

ಕಲಬುರಗಿ: ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಜಾರಿಯಿಂದ ಕನ್ನಡದ ಸಂರಕ್ಷಣೆ ಸಾಧ್ಯವಾಗಲಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ ಜೋಶಿ ಹೇಳಿದರು.

ವಿಕಾಸ ಅಕಾಡೆಮಿ ಹಾಗೂ ಶಾಹಿನ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಭಾನುವಾರ ನಡೆದ ‘ಕಲ್ಯಾಣ ಕರ್ನಾಟಕ ಅನುದಾನ ರಹಿತ ಪ್ರತಿನಿಧಿತ ಕನ್ನಡ ಶಾಲೆಗಳ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ನ್ಯಾ.ಎಸ್‌.ಆರ್.ಬನ್ನೂರುಮಠ ನೇತೃತ್ವದ ಸಮಿತಿಯು ಈ ವಿಧೇಯಕದ ಕರಡು ತಯಾರಿಸಿದೆ. ಅದರಲ್ಲಿ ಕನ್ನಡವನ್ನು ಅನ್ನದ ಭಾಷೆಯಾಗಿಸುವ ಅಂಶಗಳಿವೆ. ಕನ್ನಡಿಗರಿಗೆ ಉದ್ಯೋಗ ನೀಡಿದ ಕೈಗಾರಿಕೆಗಳಿಗೆ ಮಾತ್ರ ಸರ್ಕಾರದಿಂದ ನೆರವು ನೀಡಬೇಕು. ಸ್ಥಳೀಯ ಪ್ರಾಧಿಕಾರಗಳು, ಮಂಡಳಿಗಳು, ಸಹಕಾರ ಸಂಘಗಳ ನೇಮಕಾತಿಯಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಬೇಕು. ನ್ಯಾಯಾಲಯಗಳಲ್ಲಿ ಕನ್ನಡ ಬಳಕೆ ಮಾಡಬೇಕು ಎನ್ನುವ ಅಂಶಗಳನ್ನು ಕಾಯ್ದೆಯಲ್ಲಿ ಸೇರಿಸಲಾಗಿದೆ’ ಎಂದು ಹೇಳಿದರು.

ಈ ಕಾಯ್ದೆ ಅಡಿ ಜಾರಿ ಪ್ರಾಧಿಕಾರ ಸ್ಥಾಪನೆ ಮಾಡಲು ಅವಕಾಶ ಇದೆ. ರಾಜ್ಯ ಮಟ್ಟದ ಸಮಿತಿಯನ್ನೂ ರಚಿಸಬಹುದು. ಆಗಸ್ಟ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಇದು ಚರ್ಚೆಗೆ ಬರಲಿದೆ. ಎಲ್ಲ ಶಾಸಕರೂ ಪಕ್ಷಾತೀತವಾಗಿ ಬೆಂಬಲಿಸುವ ನಂಬಿಕೆ ಇದೆ ಎಂದರು.

ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಲು ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರ ತೊಡಕಾಗಿ ಪರಿಣಮಿಸಿದೆ. ಕನ್ನಡ ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ದೆಹಲಿ ಸರ್ಕಾರ ಮಾಡಿದ ಕೆಲಸವನ್ನು ಇಲ್ಲಿಯ ಸರ್ಕಾರಕ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಶಾಲೆಗಳ ಹೆಸರನ್ನು ಕರ್ನಾಟಕ ಪಬ್ಲಿಕ್ ಶಾಲೆ ಎಂದು ಬದಲಿಸಲಾಗಿದೆ. ಆದರೆ, ಶಿಕ್ಷಕರನ್ನು ನೇಮಿಸಿಲ್ಲ. ಇದು ಹೀಗೆಯೇ ಮುಂದುವರಿದರೆ ಇನ್ನು ಹತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಸಹ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಮಾತೃಭಾಷೆಗೆ ತನ್ನದೇ ಆದ ಶಕ್ತಿ ಇದೆ. ಆ ಭಾಷೆಗಳು ಇಲ್ಲದಿದ್ದರೆ ದೇಶವೊಂದು ಇದ್ದೂ ಸತ್ತಂತೆ. ಆದ್ದರಿಂದ ಸರ್ಕಾರಗಳು ಭಾಷಾ ಸಂರಕ್ಷಣೆಗೆ ಮುಂದಾಗಬೇಕು. ನಾವು ಸಹ ಬ್ರಿಟಿಷರ ಭಾಷೆಯ ಗುಲಾಮರಾಗದೇ ಕನ್ನಡವನ್ನು ಉಳಿಸುವ ಕೆಲಸ ಮಾಡಬೇಕು’ ಎಂದರು.

ದೇಶದ ಮನಸ್ಸಿಗೆ ಪಾರ್ಶ್ವವಾಯು ಹೊಡೆದಿದೆ. 10 ವರ್ಷಗಳಲ್ಲಿ ಪ್ರಾದೇಶಿಕ ಭಾಷೆಗಳ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಕ್ಷೀಣಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 250 ಕನ್ನಡ ಶಾಲೆಗಳು ಬಂದ್ ಆಗಿವೆ. ನಾವು ಈ ಮಾನಸಿಕತೆಯಿಂದ ಆದಷ್ಟು ಬೇಗ ಹೊರಗೆ ಬರಬೇಕು ಎಂದು ಹೇಳಿದರು.

ಶಾಹಿನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಅಬ್ದುಲ್ ಖದೀರ್ ಮಾತನಾಡಿ, ‘ಪ್ರತಿಯೊಬ್ಬರಿಗೂ ಮಾತೃಭಾಷೆ ಮುಖ್ಯ. ಕನ್ನಡ ಶಾಲೆಗಳು ಉಳಿಯಬೇಕು. ಅದಕ್ಕಾಗಿ ಅನುದಾನ ರಹಿತ ಕನ್ನಡ ಶಾಲೆಗಳಿಗೆ ನಮ್ಮ ಸಂಸ್ಥೆಯಿಂದ ಚಿಕ್ಕ ಕೊಡುಗೆ ನೀಡಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ಕನ್ನಡ ಮಾಧ್ಯಮದಲ್ಲಿ ಓದಿದ ನಮ್ಮ ಸಂಸ್ಥೆಯ 30 ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಿದರು.

ಶಾಹಿನ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಎಸ್‌.ಎಚ್‌.ಖಾದ್ರಿ ಇದ್ದರು.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಎಲ್ಲ ತಾಲ್ಲೂಕುಗಳ ಅನುದಾನ ರಹಿತ ಕನ್ನಡ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಕಸಾ‍ಪ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT