ಬುಧವಾರ, ಡಿಸೆಂಬರ್ 2, 2020
25 °C

ಕಾಳಗಿ: ‘ಕಾರಂತರ ಕೊಡುಗೆ ಅಮೋಘ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ‘ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ ಮೇರು ಸಾಹಿತಿ ಡಾ.ಕೆ.ಶಿವರಾಮ ಕಾರಂತರು ಬಹು ಅಮೂಲ್ಯ ಕೊಡುಗೆ ನೀಡಿದ್ದಾರೆ’ ಎಂದು ಉಪನ್ಯಾಸಕ ಹಣಮಂತರಾವ ಪಾಟೀಲ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೋರವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಮಾಸಾಚರಣೆ ಕಾರ್ಯಕ್ರಮದಲ್ಲಿ ಸರಣಿ–9ರಲ್ಲಿ ನಾಡಿಗೆ ಡಾ.ಕೆ. ಶಿವರಾಮ ಕಾರಂತರ ಕೊಡುಗೆ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಕಾರಂತರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದರು.

‘ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಜಗತ್ತಿನ ಶ್ರೀಮಂತಿಕೆಯಲ್ಲಿ ಒಂದಾಗಲು ಕಾರಂತರ ಕೊಡುಗೆ ಅನನ್ಯವಾಗಿದೆ. ಮೂಕಜ್ಜಿಯ ಕನಸುಗಳು, ಮರಳಿ ಮಣ್ಣಿಗೆ ಎಂಬ ಮೇರು ಕೃತಿಗಳು ಸೇರಿದಂತೆ 47 ಕಾದಂಬರಿಗಳು ಒಳಗೊಂಡು ಒಟ್ಟು 417 ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಕಾದಂಬರಿಯಲ್ಲಿ ಸಮಾಜದ ಬಗ್ಗೆ ಕಳಕಳಿಯನ್ನು ಎತ್ತಿ ತೋರಿಸಿದ್ದಾರೆ’ ಎಂದರು.

‘ಎಲ್ಲರೂ ಓದುವ, ತಿಳಿಯುವ ಹಾಗೆ ಸರಳವಾದ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದು ಇವರ ವೈಶಿಷ್ಟ್ಯವಾಗಿದೆ. ಪ್ರಸಿದ್ಧ ಇತಿಹಾಸಕಾರರಾದ ರಾಮಚಂದ್ರ ಗುಹಾ ಹೇಳಿರುವಂತೆ ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ ಟ್ಯಾಗೋರ’ ಎಂದು ಕಾರಂತರನ್ನು ವರ್ಣಿಸಿದ್ದು ಅವರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಕಾದಂಬರಿಕಾರ, ಪರಿಸರವಾದಿ, ಪ್ರಗತಿಶೀಲ ಚಿಂತಕ, ಯಕ್ಷಗಾನ ತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಚಿತ್ರ ನಿರ್ದೇಶಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಮ್ಮ ನಾಡಿಗೆ ಪಾರ ಕೊಡಗೆ ನೀಡಿದ್ದಾರೆ ಎಂದರು.

‌ಸರ್ಕಾರಿ ನೌಕರರ ಸಂಘದ ಕಾಳಗಿ ತಾಲ್ಲೂಕು ಘಟಕದ ಕಾರ್ಯದರ್ಶಿ ಭೀಮರೆಡ್ಡಿ ಮಕಾಶಿ ಮಾತನಾಡಿದರು. ಮುಖ್ಯಶಿಕ್ಷಕ ಅಶೋಕ ಮಿಸ್ಕಿನ್, ಶಿಕ್ಷಕಿ ಅರುಂಧತಿ ನೀಲಶೆಟ್ಟಿ, ಆಸ್ರಾ ಪರ್ವಿನ್, ಗುರುನಾಥ ಜಾಧವ, ವಿಜಯಕುಮಾರ, ಖೀರು, ಮಹಾಂತೇಶ್ವರಿ ಕಟ್ಟಿಮನಿ, ಬಾಬುರಾಯ ಮಹಾಜನ, ಅಶೋಕಕುಮಾರ, ರಾಜೇಶ್ವರಿ ರೇವಣಕರ್, ಮಹೇಶ ಮಳ್ಳಿ, ಜಯಶ್ರೀ ದೇವಿರೆಡ್ಡಿ, ಬಸವಾಂಬಿಕೆ ತಾಂಬೂಳೆ, ಬೇಬಿನಂದಾ ಬೀರನಳ್ಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು