ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಇಎ ಅಕ್ರಮ: ಇಬ್ಬರು ಪ್ರಾಂಶುಪಾಲರ ಬಂಧನ

Published 29 ನವೆಂಬರ್ 2023, 14:25 IST
Last Updated 29 ನವೆಂಬರ್ 2023, 14:25 IST
ಅಕ್ಷರ ಗಾತ್ರ

ಕಲಬುರಗಿ: ಕಳೆದ ಅಕ್ಟೋಬರ್ 28ರಂದು ವಿವಿಧ ನಿಗಮಗಳ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ ಆರೋಪದ ಮೇರೆಗೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಇಬ್ಬರು ಪ್ರಾಂಶುಪಾಲರನ್ನು ಸಿಐಡಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ ಬುರಕಲ್ ಹಾಗೂ ಅಫಜಲಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಬಸಣ್ಣ (ಬಸವರಾಜ) ಪೂಜಾರಿ ಬಂಧಿತರು.

ಚಂದ್ರಕಾಂತ ಅವರು ಅಫಜಲಪುರದ ರಾಯಲ್ ಪಬ್ಲಿಕ್ ಶಾಲಾ ಕೇಂದ್ರದಲ್ಲಿ ಆರಂಭಿಸಿದ್ದ ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿದ್ದರೆ, ಬಸಣ್ಣ ಪೂಜಾರಿ ಸಿಐಡಿ ಕಸ್ಟೊಡಿಯನ್ ಆಗಿದ್ದರು. ಈ ಸಂದರ್ಭದಲ್ಲಿ ಪರೀಕ್ಷಾ ಅಕ್ರಮಕ್ಕೆ ನೆರವಾಗುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದರು ಎನ್ನಲಾಗಿದೆ. 

ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಕೆಲ ದಿನಗಳ ಹಿಂದೆ ಸಿಐಡಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಕಳುಹಿಸಿದ್ದರು. ಬುಧವಾರ ಅವರನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು.

ಆರೋಪಿ ಚಂದ್ರಕಾಂತ ಬುರಕಲ್ ಪ್ರಾಂಶುಪಾಲರಾಗಿರುವ ಕಾಲೇಜಿನಲ್ಲಿ ಅಧಿಕೃತ ಅಭ್ಯರ್ಥಿಗಳ ಬದಲು ಬೇರೆಯವರು ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರು ಎಂಬ ಆರೋಪಗಳೂ ಕೇಳಿ ಬಂದಿವೆ. ತಾಲ್ಲೂಕಿನಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಚಂದ್ರಕಾಂತ ಅವರ ಅಕ್ರಮದ ಬಗ್ಗೆ ಯಾರೂ ಮೇಲಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ ಎಂದು ಉಪನ್ಯಾಸಕರೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT