ಧ್ವನಿ–ಬೆಳಕಿನ ಜಲಧಾರೆ ಉದ್ಘಾಟನೆ

ಕಲಬುರ್ಗಿ: ಇಲ್ಲಿಯ ಸೇಡಂ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಸಂಸ್ಥೆಯ ಅಮೃತ ಸರೋವರ ರಿಟ್ರೀಟ್ ಸೆಂಟರ್ನಲ್ಲಿ ನವೀಕೃತ ಬೃಹತ್ ಶಿವಲಿಂಗದ ಬಳಿಯ ಜಾನಕಿ ಜಲಧಾರೆ, ಹೊಸ ಲೇಜರ್ ಶೋ, ಧ್ವನಿ–ಬೆಳಕಿನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಿತು.
ಗುಲಬರ್ಗಾ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಗಡಿಬಿಡಿ, ಗಲಿಬಿಲಿಯ ಜೀವನ ಹಾಗೂ ಕೋವಿಡ್ ಆತಂಕದ ಈ ಸಮಯದಲ್ಲಿ ಇಂತಹ ಆಧ್ಯಾತ್ಮಿಕ ಪರಿಸರ ಹಾಗೂ ಮನಸ್ಸಿಗೆ ಮುದ ನೀಡುವ ವಾತಾವರಣದ ಅವಶ್ಯಕತೆ ಇದೆ. ಯುವ ಜನತೆ ಇಂತಹ ಪರಿಸರದಲ್ಲಿ ಹೆಚ್ಚು ಸಮಯ ಕಳೆಯಬೇಕು’ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ‘ಮಹಿಳೆಯರು ಅನುಭವಿಸುತ್ತಿರುವ ಯಾತನೆಯನ್ನು ಹೋಗಲಾಡಿಸಲು ರಾಜಯೋಗದ ಶಕ್ತಿ ಅತಿ ಆವಶ್ಯಕವಾಗಿದೆ. ಸುತ್ತಲಿನ ಜನ ಈ ಕೇಂದ್ರದ ಪ್ರಯೋಜನ ಪಡೆಯಬೇಕು’ ಎಂದರು.
ಬ್ರಹ್ಮಕುಮಾರಿ ಸಂಸ್ಥೆಯ ಕಲಬುರ್ಗಿ ಉಪವಲಯದ ಮುಖ್ಯಸ್ಥೆ ರಾಜಯೋಗಿನಿ ಬಿಕೆ ವಿಜಯಾದೀದಿ ಅವರು, ‘ಧ್ವನಿ–ಬೆಳಕಿನ ಕಾರ್ಯಕ್ರಮ ಹಾಗೂ ಜಲಧಾರೆ ನಯನ ಮನೋಹರವಾಗಿದೆ. ಇದು ಕಲಬುರ್ಗಿಯ ಜನರಿಗೆ ಹೊಸ ಅನುಭವವನ್ನುಂಟು ಮಾಡಲಿದೆ’ ಎಂದು ಹೇಳಿದರು.
‘ಅಮೃತ ಸರೋವರ ಈಗ ಕಲಬುರ್ಗಿಯ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿದೆ. ಹಚ್ಚ ಹಸಿರಿನಿಂದ ಕೂಡಿದ ಪರಿಸರ, ಬೃಹತ್ ಶಿವಲಿಂಗ, ದ್ವಾದಶ ಜ್ಯೋತಿರ್ಲಿಂಗಗಳ ಜತೆಗೆ ಲೇಜರ್ ಶೋ ಹಾಗೂ ಜಾನಕಿ ಜಲಧಾರೆಯ ಧ್ವನಿ–ಬೆಳಕಿನ ಕಾರ್ಯಕ್ರಮ ಈ ತಾಣದ ಮೆರಗನ್ನು ಇನ್ನಷ್ಟು ಹೆಚ್ಚಿಸಿವೆ. ಇಲ್ಲಿಯ ಪ್ರಶಾಂತ ವಾತಾವರಣ ಎಲ್ಲರನ್ನೂ ಸೆಳೆಯುತ್ತಿದೆ’ ಎಂದು ಬ್ರಹ್ಮಕುಮಾರಿ ಸಂಸ್ಥೆಯ ಸಮಾಜ ಸೇವಾ ವಿಭಾಗದ ರಾಷ್ಟ್ರೀಯ ಸಂಯೋಜಕರಾದ ರಾಜಯೋಗಿ ಬಿ.ಕೆ. ಪ್ರೇಮಣ್ಣ ಹೇಳಿದರು.
ಅಮೃತ ಸರೋವರದ ಸಂಚಾಲಕಿಯರಾದ ಬಿ.ಕೆ. ಶಿವಲೀಲಾ ಅಕ್ಕ, ಆದರ್ಶ ನಗರ ಸೇವಾ ಕೇಂದ್ರದ ಮುಖ್ಯಸ್ಥೆ ಬಿ.ಕೆ. ದಾನೇಶ್ವರಿ ಅಕ್ಕ, ಶಿಕ್ಷಣ ವಿಭಾಗದ ಸಂಯೋಜಕಿ ಬಿ.ಕೆ. ಸವಿತಾ, ಚಿರಾಯು ಆಸ್ಪತ್ರೆಯ ಅಧ್ಯಕ್ಷ ಡಾ. ಮಂಜುನಾಥ ದೋಶೆಟ್ಟಿ ವೇದಿಕೆಯಲ್ಲಿದ್ದರು.
ತನುಶ್ರೀ ಹಾಗೂ ಅಂಬಿಕಾ ನೃತ್ಯ ಪ್ರದರ್ಶನ ನೀಡಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.