ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ಕಾಟ ತಾಳದೇ ಅಧಿಕಾರಿಗಳ ರಾಜೀನಾಮೆ: ಮಲ್ಲಿಕಾರ್ಜುನ ಖರ್ಗೆ

Published 13 ಮಾರ್ಚ್ 2024, 14:20 IST
Last Updated 13 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇದನ್ನು ಮಾಡುವುದಕ್ಕೆ ಮನಸ್ಸು ಒಪ್ಪದೇ ಅಧಿಕಾರಿಗಳು ರಾಜೀನಾಮೆ ನೀಡುತ್ತಿದ್ದಾರೆ. ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಇವರ ಒತ್ತಡ ತಾಳದೇ ರಾಜೀನಾಮೆ ನೀಡಿರಬಹುದು’ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಬುಧವಾರ ಇಲ್ಲಿ ಆಯೋಜಿಸಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಾಗೂ ₹ 1,460 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪರವಾಗಿ ರಣಕಹಳೆ ಮೊಳಗಿಸಿದರು. 

‘ದೇಶದಲ್ಲಿ ಇನ್ನೂ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳು ಇದ್ದಾರೆ. ಅಕ್ರಮಗಳನ್ನು ಮಾಡುವಂತೆ ಅಂಥವರ ಮೇಲೆ ಮೋದಿ, ಶಾ ಒತ್ತಡ ಹೇರುತ್ತಿದ್ದಾರೆ’ ಎಂದರು.

‘ಮೋದಿ ಸರ್ಕಾರ ವಿರೋಧ ಪಕ್ಷಗಳ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಖಾತೆಯಲ್ಲಿದ್ದ ಜನರು ದೇಣಿಗೆ ನೀಡಿದ ಹಣ ₹ 300 ಕೋಟಿ, ₹ 400 ಕೋಟಿಯನ್ನು ಐಟಿ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒಂದು ಪೈಸೆಯನ್ನೂ ಖರ್ಚು ಮಾಡಲು ನಮಗೆ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಒಂದೇ ದಿನ ಬಿಜೆಪಿಗೆ ₹ 335 ಕೋಟಿ ದೇಣಿಗೆ ಹರಿದು ಬಂದಿದೆ. ಚುನಾವಣಾ ಬಾಂಡ್ ಮೂಲಕ ತನಗೆ ಹಣ ನೀಡಿದವರಿಗೆ ಬಿಜೆಪಿ ಯೋಜನೆಗಳನ್ನು ಗುತ್ತಿಗೆ ನೀಡಿದೆ. ಸರ್ಕಾರಿ ಜಾಗಗಳನ್ನು ಲೀಸ್ ಮೇಲೆ ನೀಡಿದೆ. ಬಾಂಡ್ ಖರೀದಿಸಿದವರ ಹೆಸರು ಹೊರಗೆ ಬಂದರೆ ತನ್ನ ಕಳ್ಳತನ ಬಯಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಸ್‌ಬಿಐ ಮೇಲೆ ಒತ್ತಡ ತಂದು ಮಾಹಿತಿ ನೀಡಲು ಗಡುವನ್ನು ವಿಸ್ತರಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲು ಹೇಳಿತ್ತು’ ಎಂದು ಆಪಾದಿಸಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 30 ಲಕ್ಷ ಹುದ್ದೆ ಭರ್ತಿ’

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನಿರುದ್ಯೋಗಿಗಳಿಗೆ ತಲಾ ₹ 1 ಲಕ್ಷ ಖರ್ಚು ಮಾಡಿ ತರಬೇತಿ ನೀಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.

‘ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ನೀಡಿದ್ದ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದೇವೆ.  ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು, ಉದ್ಯೋಗ ಭದ್ರತೆಯಿಲ್ಲದ ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ದುಪ್ಪಟ್ಟುಗೊಳಿಸಲಾಗುವುದು. ಆದಿವಾಸಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮುಖ್ಯವಾಹಿನಿಗೆ ತರಲಾಗುವುದು. ಜನಗಣತಿಯ ಅಂಕಿ–ಅಂಶಗಳನ್ನು ಆಧರಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ನೆರವು ನೀಡಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಮೋದಿ ವಿರುದ್ಧ ವಾಗ್ದಾಳಿ: ಮಾರ್ಚ್‌ 16ರಂದು ಕಲಬುರಗಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಇತ್ತೀಚೆಗೆ ಪ್ರಧಾನಿ ಮೋದಿ ಅವರು ಕಲಬುರಗಿಯನ್ನು ಕೇಂದ್ರವಾಗಿಸಿಕೊಂಡಿದ್ದು, ಆಗಾಗ ಭೇಟಿ ಕೊಡುತ್ತಲೇ ಇದ್ದಾರೆ. ದೆಹಲಿಯಲ್ಲಿ ಭೇಟಿ ಮಾಡಿದಾಗ, ‘ಮೋದಿ ಅವರೇ ಆಗಾಗ ಐದಾರು ವಿಮಾನಗಳನ್ನು ತೆಗೆದುಕೊಂಡು ಕಡು ಬಿಸಿಲಿನ ಕಲಬುರಗಿಗೆ ಬರುತ್ತೀರಿ. ಕಲಬುರಗಿಗೆ ಬನ್ನಿ, ಸಂತೋಷ. ಆದರೆ, ಬಂದಾಗ ನಮ್ಮ ಜನರಿಗೆ ಏನನ್ನಾದರೂ (ಯೋಜನೆ) ಕೊಟ್ಟು ಹೋಗಿ. ಖಾಲಿ ಕೈಯಿಂದ ಹೋದರೆ ಹೇಗೆ’ ಎಂದು ಪ್ರಶ್ನಿಸಿದ್ದೆ ಎಂದು ಸ್ಮರಿಸಿದರು.

‘ಮೋದಿ ಅವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಣ ಹಾಕುವುದಾಗಿ ತಿಳಿಸಿದ್ದರು. ಮೋದಿಯವರೇ, ಇವೆರಡು ಘೋಷಣೆಗಳನ್ನು ಈಡೇರಿಸಿದ್ದೀರಾ’ ಎಂದು ಖರ್ಗೆ ಪ್ರಶ್ನಿಸಿದರು.

ಸಂವಿಧಾನ ಬದಲಾಯಿಸುವ ಹೇಳಿಕೆ ನೀಡಿದ ವ್ಯಕ್ತಿಗೆ (ಅನಂತಕುಮಾರ ಹೆಗಡೆ) ಬಿ ಫಾರಂ ಕೊಟ್ಟವರೂ ನೀವೇ (ಬಿಜೆಪಿ), ಗೆಲ್ಲಿಸಿಕೊಂಡು ಬಂದವರೂ ನೀವೇ. ಈಗ ಅವರ ಹೇಳಿಕೆಗೂ ನಿಮಗೂ ಸಂಬಂಧವಿಲ್ಲ ಎಂದರೆ ಹೇಗೆ?
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT