ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಭೀಮಾ ನದಿಗೆ ಹರಿಯದ ನೀರು

Published 22 ನವೆಂಬರ್ 2023, 4:50 IST
Last Updated 22 ನವೆಂಬರ್ 2023, 4:50 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಸುಮಾರು 40 ಗ್ರಾಮಗಳ ಜನ, ಜಾನುವಾರು ಮತ್ತು ಕೃಷಿಗೆ ಅನುಕೂಲವಾಗುವ ಭೀಮಾ ನದಿ ಸಂಪೂರ್ಣ ಬತ್ತಿ ಹೋಗಿದೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಮತ್ತು ಕೃಷ್ಣ ಭಾಗ್ಯ ಜಲ ನಿಗಮ ಕಾಲುವೆ ಮೂಲಕ ಭೀಮಾ ನದಿಗೆ ನೀರು ಹರಿಸಲು ಕನಿಷ್ಠ ಒಂದು ತಿಂಗಳವರೆಗೆ ವಿವಿಧ ರೈತ ಪರ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಿದರೂ ಭೀಮಾ ನದಿಗೆ ಒಂದು ಹನಿ ನೀರು ಬಿಟ್ಟಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಜನ, ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಭೀಮಾ ನದಿ ಬತ್ತಿರುವುದರಿಂದ ನದಿ ದಡದ ಗ್ರಾಮಗಳಲ್ಲಿ ಕೊರೆದಿರುವ ತೆರೆದ ಬಾವಿ, ಕೊಳವೆಬಾವಿಗಳ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿದೆ. ನರೇಗಾ ಯೋಜನೆ ಅಡಿಯಲ್ಲಿ ತೋಡಿರುವ ಕೆರೆಗಳು ಮಳೆ ಬರದ ಕಾರಣ ಸಂಪೂರ್ಣ ಬತ್ತಿ ಹೋಗಿವೆ. ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಸುಮಾರು ನಾಲ್ಕು ಕೆರೆ ಮತ್ತು 500ಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಅವೆಲ್ಲವೂ ಮಳೆ ಬರದ ಕಾರಣ ಬತ್ತಿ ಹೋಗಿವೆ’ ಎಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನಿರ್ದೇಶಕ ಶಿವು ಪ್ಯಾಟಿ ಹೇಳಿದರು.

ಶಾಸಕ ಎಂ.ವೈ.ಪಾಟೀಲ್ ಅವರು ಆಲಮಟ್ಟಿ ಕಾಲುವೆ ಮೂಲಕ ಭೀಮಾ ನದಿಗೆ ನೀರು ಬಿಡುವಂತೆ ತಿಂಗಳ ಹಿಂದೆ ನೀರಾವರಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಇನ್ನೊಂದೆಡೆ ಪ್ರಾಂತ ರೈತ ಸಂಘದವರು, ಕಬ್ಬು ಬೆಳೆಗಾರರ ಸಂಘದವರು ಪ್ರತಿಭಟನೆ ಮಾಡಿದರೂ ನದಿಗೆ ನೀರು ಬರಲಿಲ್ಲ. ಹೀಗಾಗಿ ಪ್ರತಿಭಟನಕಾರರು ರೋಸಿ ಹೋಗಿದ್ದಾರೆ.

‘ನಾವು ಭೀಮಾ ನದಿಗೆ ಉಜನಿ ಜಲಾಶಯದಿಂದ ನೀರು ಬಿಡುವಂತೆ ಎರಡು, ಮೂರು ಬಾರಿ ಪ್ರತಿಭಟಿಸಿದ್ದೇವೆ; ರಸ್ತೆ ತಡೆ ಚಳವಳಿಯನ್ನೂ ನಡೆಸಿದ್ದೇವೆ. ಹೀಗಿದ್ದರೂ ಸರ್ಕಾರ ಮೌನವಾಗಿದೆ. ಇನ್ನೊಂದೆಡೆ ಕೃಷ್ಣಾ ಭಾಗ್ಯ ಜಲ ನಿಗಮದ ಇಂಡಿ ಕಾಲುವೆ ಮೂಲಕ ನೀರು ಬಿಡುವಂತೆ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ್ ಬಿರಾದಾರ್ ಹಾಗೂ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೂಗಾರ ಬೇಸರ ವ್ಯಕ್ತಪಡಿಸುತ್ತಾರೆ.

ಮಹಾರಾಷ್ಟ್ರದ ಉಜನಿ ಜಲಾಶಯದಲ್ಲಿ ನೀರು ಕಡಿಮೆ ಇರುವುದರಿಂದ ಬಿಡುತ್ತಿಲ್ಲ. ಆಲಮಟ್ಟಿ ಜಲಾಶಯದ ಮೂಲಕ ನೀರು ಬಿಡಿಸಲು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಲಾಗಿದ್ದು ಮತ್ತೊಮ್ಮೆ ಪ್ರಯತ್ನ ಮಾಡುತ್ತೇವೆ
- ಎಂ.ವೈ.ಪಾಟೀಲ್ ಶಾಸಕ
ಭೀಮಾ ನದಿ ಸಂಪೂರ್ಣ ಬತ್ತಿ ಹೋಗಿದೆ. 40 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಭೀಮಾ ನದಿಯಲ್ಲಿ ತಾತ್ಕಾಲಿಕವಾಗಿ ಬಾವಿ ತೋಡಿ ಕುಡಿಯುವ ನೀರು ಪೂರೈಸಬೇಕು.
- ರಮೇಶ್ ಹೂಗಾರ ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT