ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ದಶಕದ ಬಳಿಕ ಬಣ್ಣ ಕಂಡ ಸರ್ಕಾರಿ ಶಾಲೆ

ಸವಿತಾನಂದನಾಥ ಸ್ವಾಮೀಜಿ ಕಾರ್ಯಕ್ಕೆ ಪೋಷಕರು, ವಿದ್ಯಾರ್ಥಿಗಳ ಹರ್ಷ
Last Updated 26 ಜನವರಿ 2023, 5:46 IST
ಅಕ್ಷರ ಗಾತ್ರ

ವಾಡಿ: ದಶಕದಿಂದ ಸುಣ್ಣಬಣ್ಣ ಕಾಣದೇ ಮಂಕಾಗಿದ್ದ ಸರ್ಕಾರಿ ಶಾಲೆಗೆ ಸ್ವಾಮೀಜಿಯೊಬ್ಬರು ತಮ್ಮ ಗುರುಗಳ ಜನ್ಮದಿನ ಪ್ರಯುಕ್ತ ಬಣ್ಣ ಬಳಿಸಿ ಅಂದ ಹೆಚ್ಚಿಸಿದ್ದಾರೆ. ಆ ಮೂಲಕ ಶಾಲೆಯ ಮಕ್ಕಳು ಹಾಗೂ ಪೋಷಕರ ಸಂಭ್ರಮಕ್ಕೆ ಕಾರಣರಾಗಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ಕೊಂಚೂರಿನ ಮಹರ್ಷಿ ಸವಿತಾ ಪೀಠದ ಪೀಠಾಧಿಪತಿ ಸವಿತಾನಂದನಾಥ ಸ್ವಾಮೀಜಿ, ತಮ್ಮ ಗುರುಗಳಾದ ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ಜಯಂತ್ಯುತ್ಸವ ಪ್ರಯುಕ್ತ ವಾಡಿ ಕ್ಲಸ್ಟರ್‌ನ ಸೇವಾಲಾಲ ನಗರ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಬಳಿಸಿದ್ದಾರೆ. ಕಟ್ಟಡಕ್ಕೆ ₹50 ಸಾವಿರ ದೇಣಿಗೆ ನೀಡಿ ಬಣ್ಣ ಬಳಿಸಿದ್ಧಾರೆ. ಕಳೆದ ಹತ್ತಾರು ವರ್ಷಗಳಿಂದ ಬಣ್ಣ ಕಾಣದೆ ಸೊರಗಿದ್ದ ಶಾಲೆ ಈಗ ರಂಗು ಹೆಚ್ಚಿಸಿಕೊಂಡಿದ್ದು, ಮಕ್ಕಳನ್ನು ಕೈಬೀಸಿ ಕರೆಯುತ್ತಿದೆ.

ಬಹುತೇಕ ಸರ್ಕಾರಿ ಶಾಲೆಗಳು, ವಿವಿಧ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಸುಸಜ್ಜಿತ ಕೋಣೆ-ಕಟ್ಟಡಗಳಿಲ್ಲದೇ ಬಳಲುತ್ತಿವೆ. ಹೀಗಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಾಲಾ ಅಭಿವೃದ್ಧಿಗೆ ದಾನಿಗಳ ಕೊರತೆ ಕಾಡುತ್ತಿದೆ. ಶಿಕ್ಷಣದ ಗುಣಮಟ್ಟ ಮತ್ತು ಶಾಲಾ ಸೌಕರ್ಯ ಚೇತರಿಕೆಗಾಗಿ ಇಲಾಖೆ ಇನ್ನಿಲ್ಲದ ಕಸರತ್ತು ಮಾಡುತ್ತಿದೆ.ಇಂತಹ ಸಂದರ್ಭದಲ್ಲಿ ಸವಿತಾನಂದನಾಥ ಸ್ವಾಮೀಜಿ ಕಾರ್ಯ ಮಾದರಿಯಾಗಿದೆ. ಪೂಜ್ಯರ ಈ ಸೇವೆಯಿಂದ ಸಂತಸಗೊಂಡಿರುವ ಮುಖ್ಯಗುರು ರೇಣುಕಾ ಬೇವಿನಮರ ಶ್ರೀಗಳನ್ನು ಶಾಲೆಗೆ ಆಹ್ವಾನಿಸಿ ಅಭಿನಂದಿಸಿದ್ದಾರೆ.ಶಿಕ್ಷಕರಾದ ಶಾಂತಾ ಮಾನ್ವಿ, ಅತಿಥಿ ಶಿಕ್ಷಕರಾದ ಸುಧಾ ಗುತ್ತೇದಾರ, ರಾಧಾ ರಾಠೋಡ, ಸೀತಾಬಾಯಿ ಹೇರೂರ ಪೂಜ್ಯರ ಸೇವೆಯನ್ನು ಶ್ಲಾಘಿಸಿದ್ದಾರೆ.

ಡಾ.ಬಾಲಗಂಗಾಧರನಾಥ ಸ್ವಾಮೀಜಿ ರಾಜ್ಯದಲ್ಲಿ ಒಟ್ಟು ಐದು ಕೋಟಿ ಸಸಿ ನೆಟ್ಟಿದ್ದಾರೆ. ಆದಿಚುಂಚನಗಿರಿ ಮಠದ ಸಂಸ್ಥೆಗಳಲ್ಲಿ ಒಟ್ಟು 1.5 ಲಕ್ಷ ಮಕ್ಕಳು ಊಟ ವಸತಿ ಸಹಿತ ಶಿಕ್ಷಣ ಪಡೆಯುತ್ತಿದ್ದಾರೆ.‌ ಅಂಥಹ ಮಹಾತ್ಮರ ಶಿಷ್ಯನಾಗಿ ನಾನು ಅಳಿಲು ಸೇವೆ ಸಲ್ಲಿಸಿದ್ದೇನೆ ಎನ್ನುತ್ತಾರೆ ಸವಿತಾನಾಂದ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT