ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ಡ್ರೈವ್ ಪ್ರಕರಣ | ಎಂಟು ದಿನ ಕತ್ತೆ ಕಾಯುತ್ತಿದ್ದರಾ: ಜೋಶಿ ತರಾಟೆ

Published 23 ಮೇ 2024, 15:57 IST
Last Updated 23 ಮೇ 2024, 15:57 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಹೊರಬಂದಿದ್ದು ಏಪ್ರಿಲ್ 21ಕ್ಕೆ. ಪ್ರಜ್ವಲ್ ಅವರು ದೇಶ ಬಿಟ್ಟು ಹೋಗಿದ್ದು ಏ.28 ಅಥವಾ 29ಕ್ಕೆ. ಈ ಎಂಟು ದಿನಗಳವರೆಗೆ ಇವರೇನು ಕತ್ತೆ ಕಾಯುತ್ತಿದ್ದರಾ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಕೇಳುವ ಪ್ರಶ್ನೆಗೆ ಇದುವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಗೃಹ ಸಚಿವ ಜಿ.ಪರಮೇಶ್ವರ ಅವರು ಉತ್ತರ ಕೊಟ್ಟಿಲ್ಲ. ಪೆನ್‌ಡ್ರೈವ್ ಹೊರಬಂದ ತಕ್ಷಣವೇ ಪ್ರಕರಣವನ್ನು ದಾಖಲಿಸಿಕೊಂಡು, ಏಕೆ ಬಂಧಿಸಲಿಲ್ಲ’ ಎಂದು ಪ್ರಶ್ನಿಸಿದರು.

‘ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದತಿಗೆ ಅದರದ್ದೇ ಆದ ಪ್ರಕ್ರಿಯೆಗಳಿವೆ. ನ್ಯಾಯಾಲಯಕ್ಕೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಕಾನೂನು ಪ್ರಕಾರ ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ತಯಾರಿದೆ. ನಾವು ಪತ್ರ ಬರೆದ ತಕ್ಷಣವೇ ಪಾಸ್‌ಪೋರ್ಟ್‌ ರದ್ದಾಗಬೇಕು ಎಂದು ಬಿಜೆಪಿಯ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.

‘ಒಕ್ಕಲಿಗ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು, ಚುನಾವಣೆ ಮುಗಿಯುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ರಾಜ್ಯ ಸರ್ಕಾರ ತನಿಖೆಗಿಂತ ಹೆಚ್ಚಾಗಿ ರಾಜಕಾರಣ ಮಾಡುತ್ತಿದೆ. ಇದು ಗಂಭೀರ ಪ್ರಕರಣವಾಗಿದ್ದು, ಪ್ರಜ್ವಲ್ ಅವರು ವಿಚಾರಣೆ ಎದುರಿಸಲೇಬೇಕು. ತಪ್ಪು ಮಾಡಿದ್ದರೆ ಕಠಿಣ ಕ್ರಮ ಆಗಲೇಬೇಕು. ಯಾವುದೇ ಅನುಕಂಪ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT