ಶುಕ್ರವಾರ, ಜೂನ್ 5, 2020
27 °C
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ₹ 171 ಕೋಟಿ ಅನುದಾನ: ಅಧ್ಯಕ್ಷೆ ಶಶಿಕಲಾ ಟೆಂಗಳಿ ಭರವಸೆ

ಮಾಜಿ ದೇವದಾಸಿಯರಿಗೆ ಜೀವವಿಮೆ, ಮಾಸಾಶಹನ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಈ ಬಾರಿ ₹ 171 ಕೋಟಿ ಅನುದಾನ ಮೀಸಲಿಟ್ಟಿದ್ದು, ದಮನಿತ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಕೆಲವು ಹೊಸ ಯೋಜನೆಗಳನ್ನೂ ಹಾಕಿಕೊಳ್ಳುವ ಚಿಂತನೆ ನಡೆದಿದೆ’ ಎಂದು ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ತಿಳಿಸಿದರು.

‘ರಾಜ್ಯದಲ್ಲಿ ಈಗ 46,666 ಮಾಜಿ ದೇವದಾಸಿಯರು ಇದ್ದಾರೆ. ಜಿಲ್ಲೆಯಲ್ಲಿ ಇವರು ಸಂಖ್ಯೆ 1,466ರಷ್ಟಿದೆ. ಎಲ್ಲರಿಗೂ ಜೀವವಿಮೆ ಮಾಡಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಆದಷ್ಟುಬೇಗ ತೀರ್ಮಾಣ ಕೈಗೊಳ್ಳಲಾಗುವುದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಾಜಿ ದೇವದಾಸಿಯರಿಗೆ ನೆಲೆ, ಉದ್ಯೋಗ, ಜೀವನೋಪಾಯ ಕಲ್ಪಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಘೋಷಿಸಿದೆ. ಮಾಸಾಶನ ಯೋಜನೆ ಇದರಲ್ಲಿ ಹೆಚ್ಚು ಮಹತ್ವ ಪಡೆದಿದೆ. 45 ವರ್ಷ ಮೇಲ್ಪಟ್ಟವರಿಗೆ ಕನಿಷ್ಠ ₹ 1500 ಮಾಸಾಶನ ನೀಡಲಾಗುತ್ತಿದೆ. ಇದನ್ನು ₹ 2,000ಕ್ಕೆ ಏರಿಸಲು ಚಿಂತನೆ ನಡೆದಿದೆ. ಜತೆಗೆ, ಆದಾಯ ಬರುವಂಥ ಚಟುವಟಿಕೆ ಕೈಗೊಳ್ಳಲು ₹ 1 ಲಕ್ಷ ನೆರವು ನೀಡಲಾಗುತ್ತಿದೆ. ಇದರಲ್ಲಿ ₹ 50 ಲಕ್ಷ ಸಹಾಯಧನ ಹಾಗೂ ₹ 50 ಲಕ್ಷ ಬಡ್ಡಿರಹಿತ ಸಾಲವಿರುತ್ತದೆ. ನಿವೇಶನ ಹೊಂದಿದವರು ಮನೆ ಕಟ್ಟಿಕೊಳ್ಳಲು ಬಯಸಿದರೆ ಹಳ್ಳಿಗಳಲ್ಲಿ ₹ 1.75 ಲಕ್ಷ ಹಾಗೂ ನಗರಗಳಲ್ಲಿ ₹ 2 ಲಕ್ಷ ನೆರವು ನೀಡಲಾಗುವುದು’ ಎಂದರು.

‘ಲಿಂಗತ್ವ ಅಲ್ಪಸಂಖ್ಯಾತರು ಇನ್ನೂ ಭಿಕ್ಷೆ ಬೇಡಿಯೇ ಬದುಕುತ್ತಿದ್ದಾರೆ. ಅವರಿಗೆ ಉದ್ಯೋಗ, ಮನೆ, ವ್ಯಾಪಾರ ಕೈಗೊಳ್ಳಲು ವಿವಿಧ ಯೋಜನೆಗಳ ಅಡಿ ಸಹಾಯಧನವಿದೆ. ಪ್ರಸಕ್ತ ವರ್ಷದಿಂದ ಲಿಂಗತ್ವ ಅಲ್ಪಸಂಖ್ಯಾತರನ್ನು ನಿಖರವಾಗಿ ಗುರುತಿಸುವ ಸಲುವಾಗಿಯೇ ಸರ್ಕಾರ ₹ 70 ಲಕ್ಷ ಅನುದಾನ ನೀಡಿದ್ದು, ಸಮೀಕ್ಷೆ ನಡೆಸಲಾಗುತ್ತಿದೆ’ ಎಂದರು.

‘ಉದ್ಯೋಗಿನಿ ಯೋಜನೆ, ಕಿರುಸಾಲ, ಸಮೃದ್ಧಿ ಯೋಜನೆ, ಧನಶ್ರೀ, ಚೇತನಾ (ಧಮನಿಯ ಮಹಿಳೆ) ಹೀಗೆ ವಿವಿಧ ಸಾಲ ಯೋಜನೆಗಳಲ್ಲಿ ಕನಿಷ್ಠ ₹ 10 ಸಾವಿರ ಕೈಗಡದಿಂದ ಹಿಡಿದು ಗರಿಷ್ಠ ₹ 5 ಲಕ್ಷದವರೆಗೂ ಸಾಲ ನೀಡಲಾಗುತ್ತಿದೆ. ಮಾಜಿ ದೇವದಾಸಿಯರು ತಮಗೆ ಗೊತ್ತಿರುವ ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕು. ಏನೂ ಗೊತ್ತಿಲ್ಲದಿದ್ದರೂ ಸರ್ಕಾರವೇ ಕೌಶಲ ತರಬೇತಿ ನೀಡಿ ಅವರಿಗೆ ಸಾಲ ಮಂಜೂರು ಮಾಡಿ ಸಬಲಗೊಳ್ಳುವಂತೆ ಮಾಡುತ್ತದೆ’ ಎಂದು ಶಶಿಕಲಾ ಹೇಳಿದರು.‌

₹ 2 ಕೋಟಿವರೆಗೂ ನೆರವು

‘ಹಿಂದುಳಿದ ಮಹಿಳೆಯರಿಗೆ, ವಿಧವೆ, ನಿರ್ಗತಿಕ, ಅಂಗವಿಕಲ ಹಾಗೂ ಪರಿಶಿಷ್ಟ ಮಹಿಳೆಯರಿಗೆ ನಾನಾ ಬಗೆಯ ಕೌಶಲ ತರಬೇತಿಗಳು ಇವೆ. ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬಂದರೆ ರಾಜ್ಯ ಹಣಕಾಸು ನಿಗಮದಿಂದ ₹ 50 ಲಕ್ಷದಿಂದ ₹ 2 ಕೋಟಿವರೆಗೂ ಸಾಲ ಸಿಗುತ್ತದೆ. ಇದಕ್ಕೆ ವಿಧಿಸುವ ಶೇಕಡ 14ರಷ್ಟು ಬಡ್ಡಿ ದರದಲ್ಲಿ ಶೇಕಡ 10ರಷ್ಟನ್ನು ನಿಗಮವೇ ಭರಿಸುತ್ತದೆ. ಮಹಿಳೆಯರಿಗೆ ಇದು ದೊಡ್ಡ ಆಸರೆಯಾಗಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಹಾಗೂ ನಿಗಮದ ಸದಸ್ಯರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು