ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಸಂತ್ರಸ್ತೆಯರನ್ನು ನಡ್ಡಾ ಯಾವಾಗ ಭೇಟಿ‌ ಮಾಡ್ತಾರೆ?: ಪ್ರಿಯಾಂಕ್ ಖರ್ಗೆ

Published 29 ಏಪ್ರಿಲ್ 2024, 6:58 IST
Last Updated 29 ಏಪ್ರಿಲ್ 2024, 6:58 IST
ಅಕ್ಷರ ಗಾತ್ರ

ಕಲಬುರಗಿ: 'ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ನಡೆದ ತಕ್ಷಣ ಅಲ್ಲಿಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರನ್ನು ಯಾವಾಗ ಭೇಟಿ ಮಾಡುತ್ತಾರೆ' ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ನಗರದ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆರ್. ಅಶೋಕಣ್ಣ, ಬಿ.ವೈ.ವಿಜಯೇಂದ್ರ ಅವರು ಯಾವಾಗ ಭೇಟಿ ‌ಕೊಡುತ್ತಾರೆ? ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದ ಬಿಜೆಪಿ ಕಾರ್ಯಕರ್ತರು ಹಾಸನ ಘಟನೆಗೂ ತಮಗೂ ಸಂಬಂಧವಿಲ್ಲದಂತೆ ಬಾಯಿಮುಚ್ಚಿಕೊಂಡು ಕುಳಿತಿದ್ದು ಏಕೆ? ಬಿಜೆಪಿ ಜಾಲತಾಣದವರು ಪ್ರಜ್ವಲ್ ವಿರುದ್ಧ ಹ್ಯಾಷ್ ಟ್ಯಾಗ್ ಬಳಸಿ ಅವರ ಕೃತ್ಯ ವಿರೋಧಿಸುತ್ತಿಲ್ಲವೇಕೆ' ಎಂದರು.

‘ಜನವರಿಯಲ್ಲಿಯೇ ಬಿಜೆಪಿ ಮುಖಂಡ ದೇವರಾಜೇಗೌಡ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಅಧ್ಯಕ್ಷರಿಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೊ ‌ಇರುವ ಬಗ್ಗೆ ತಿಳಿಸಿದ್ದರು. ಆದರೂ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ಅವರಿಗೆ ಟಿಕೆಟ್ ನೋಡಲು ಮೋದಿ ಅವರು ಒಪ್ಪಿಕೊಂಡಿದ್ದು ಹೇಗೆ’ ಎಂದು ಪ್ರಶ್ನಿಸಿದರು.

'ಪ್ರಜ್ವಲ್ ರೇವಣ್ಣ ಅವರಿಂದ ಸಾವಿರಾರು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂಬ ಮಾಹಿತಿ ಇದೆ. ಅವರೆಲ್ಲ ಹಿಂದೂ ಮಹಿಳೆಯರೇ ಆಗಿದ್ದು, ಅವರಿಗೆ ನ್ಯಾಯ ಕೊಡಿಸಬೇಕು ಎಂದು ಬಿಜೆಪಿಯವರಿಗೆ ಅನಿಸುತ್ತಿಲ್ಲವೇ' ಎಂದೂ ಪ್ರಿಯಾಂಕ್ ಜರಿದರು.

'ಪ್ರಜ್ವಲ್ ಅವರನ್ನು ಕೇಂದ್ರ ಸರ್ಕಾರವೇ ಆಸಕ್ತಿ ವಹಿಸಿ ವಿದೇಶಕ್ಕೆ ಕಳಿಸಿದೆ ಎನ್ನಲಾಗುತ್ತಿದೆ. ಆರೋಪಿಯನ್ನು ರಕ್ಷಿಸುವುದು ಯಾವ ನ್ಯಾಯ' ಎಂದು ಪ್ರಶ್ನಿಸಿದರು.

'ಎಫ್ಐಆರ್ ಆದ ತಕ್ಷಣವೇ ನಮ್ಮ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ. ಆದರೆ, ಈ ವಿಚಾರ ಕುರಿತು ಬಿಜೆಪಿಯವರ ಮೌನ ಬಹಳ ಆತಂಕಕಾರಿಯಾಗಿದೆ' ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT