ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಹಸಿರು ಪ್ರತಿಷ್ಠಾನ ವಿರುದ್ಧ ಸಿಡಿದ ಆಕ್ರೋಶ

371 (ಜೆ) ವಿಚಾರದಲ್ಲಿ ಕ್ಯಾತೆ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಪ್ರತಿಭಟನೆ
Published 2 ಜೂನ್ 2024, 6:22 IST
Last Updated 2 ಜೂನ್ 2024, 6:22 IST
ಅಕ್ಷರ ಗಾತ್ರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ 371 (ಜೆ) ವಿಶೇಷ ಸ್ಥಾನಮಾನದ ವಿಚಾರವಾಗಿ ಕ್ಯಾತೆ ತೆಗೆದ ಹಸಿರು ಪ್ರತಿಷ್ಠಾನದ ಮುಖಂಡರ ವಿರುದ್ಧ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಶನಿವಾರ ಸಾವಿರಾರು ಜನರು ಬೃಹತ್ ಪ್ರತಿಭಟನೆ ನಡೆಸಿದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಬೋಧಕರು, ವಿದ್ಯಾರ್ಥಿಗಳು, ಚಿಂತಕರು, ಹಿಂದುಳಿದ, ಕನ್ನಡಪರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮಾನವ ಸರಪಳಿ ರಚಿಸಿ, ರಸ್ತೆ ಸಂಚಾರ ತಡೆದು, ಹಸಿರು ಪ್ರತಿಷ್ಠಾನ ವಿರುದ್ಧ ಘೋಷಣೆ ಕೂಗಿದರು.

ವಿದ್ಯಾರ್ಥಿಗಳು ಕಾಲೇಜುಗಳ ತರಗತಿಯಿಂದ ಹೊರಗುಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟ ಸಮಿತಿಗೆ ಶಕ್ತಿ ತುಂಬಿದರು. ಹಸಿರು ಪ್ರತಿಷ್ಠಾನವು ‘ಸಂವಿಧಾನ ವಿರೋಧಿ’, ‘ಮೀಸಲಾತಿ ವಿರೋಧಿ’, ‘ಅಭಿವೃದ್ಧಿ ವಿರೋಧಿ ಕೂಟ’, ‘ರಾಜ್ಯ ದ್ರೋಹಿಗಳ ಒಕ್ಕೂಟ’ ಎಂದೆಲ್ಲಾ ಘೋಷಣೆ ಕೂಗಿ, ಆಕ್ರೋಶ ಹೊರಹಾಕಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ, 371 (ಜೆ) ಗೆ 10 ವರ್ಷಗಳು ತುಂಬಿದ್ದರೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಅನುಷ್ಠಾನದಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸಿ, ತಿದ್ದುಪಡಿ ಮಾಡುವ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಹಸಿರು ಪ್ರತಿಷ್ಠಾನವು ಅಭಿವೃದ್ಧಿ ಪರವಾದ ಸಾಂವಿಧಾನಿಕ ಸ್ಥಾನಮಾನವನ್ನು ವಿರೋಧಿಸುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘371 (ಜೆ) ಗೆ ವಿರೋಧ ವ್ಯಕ್ತಪಡಿಸಿ, ಅದನ್ನು ತೆಗೆದು ಹಾಕುವಂತಹ ಅಸೂಯೆಯ ಹೇಳಿಕೆಗಳು ಇನ್ನು ಮುಂದೆ ಕೇಳಿ ಬಂದಲ್ಲಿ, ಅದಕ್ಕೆ ತಕ್ಕ ಉತ್ತರ ಕೊಡಲು ನಾವು ಸದಾ ಸಿದ್ಧರಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಇಂದಿನ ಹೋರಾಟ ಕೇವಲ ಎಚ್ಚರಿಕೆಯ ಗಂಟೆ’ ಎಂದರು.

ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ‘ಪ್ರಸ್ತುತ 371 (ಜೆ) ಅಡಿ ಕಲ್ಯಾಣ ಕರ್ನಾಟಕ ಭಾಗದವರಿಗೆ ಸ್ಥಳೀಯ ವೃಂದದ ಹುದ್ದೆಗಳಲ್ಲಿ ಶೇ 80ರಷ್ಟು ಮೀಸಲಾತಿ ಇದೆ. ಹೊರ ಜಿಲ್ಲೆಯವರಿಗೆ ಶೇ 20ರಷ್ಟು ಅವಕಾಶವಿದೆ. ಉಳಿದ ಜಿಲ್ಲೆಗಳಲ್ಲಿ ಶೇ 8ರಷ್ಟು ಮಾತ್ರ ಮೀಸಲು ನೀಡಲಾಗಿದೆ. ನಮ್ಮ ಭಾಗದ ಮೀಸಲಾತಿಯ ಬಗ್ಗೆ ವದಂತಿ ಹಬ್ಬಿಸಿ ವಿರೋಧ ಮಾಡುವುದು ಸರಿಯಲ್ಲ. ಬೆಂಗಳೂರಿನಲ್ಲಿ ಹೋರಾಟ ಮಾಡುವವರ ಮಾತಿಗೆ ಜನರು ಕಿವಿಗೊಡಬಾರದು’ ಎಂದು ಆಗ್ರಹಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಾಂತಪ್ಪ ಸೂರನ್, ಅಲ್‌–ಖಮರ್‌ ಸಂಸ್ಥೆ ಅಧ್ಯಕ್ಷ ಅಸದ್ ಅನ್ಸಾರಿ ಸೇರಿ 15 ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ‘ಸಂವಿಧಾನ ವಿರೋಧಿ ಹಸಿರು ಪ್ರತಿಷ್ಠಾನ ಸಂಘಟನೆಯನ್ನು ರಾಜ್ಯ ಸರ್ಕಾರ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ಶಿಷ್ಟಾಚಾರ ತಹಶೀಲ್ದಾರ್ ನಿಸಾರ್ ಅಹಮದ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಚಿಂತಕರಾದ ಪ್ರತಾಪಸಿಂಗ್ ತಿವಾರಿ, ಪ್ರೊ. ಆರ್.ಕೆ.ಹುಡಗಿ, ಬಸವರಾಜ ಕುಮ್ಮನೂರ, ಗಲಶೆಟ್ಟಿ, ಶರಣಪ್ಪ ಸೈದಾಪುರ, ಸಂಗೀತಾ ಕಟ್ಟಿ, ಮಾಜಿದ್ ದಾಗಿ, ಪ್ರೊ. ಬಿರಾದಾರ, ರೇಣುಕಾ ಸಿಂಘೆ, ಮಲ್ಲಿಕಾರ್ಜುನ ಶೆಟ್ಟಿ, ಹರ್ಷವರ್ಧನ, ಸಂಘಟನೆಗಳ ಮುಖಂಡರಾದ ಲಿಂಗರಾಜ ಸಿರಗಾಪೂರ, ಶರಣು ಐ.ಟಿ., ಮುತ್ತಣ್ಣ ನಾಡಗೇರಿ, ಮಂಜುನಾಥ ನಾಲವಾರಕರ್, ಸಚಿನ್ ಫರತಾಬಾದ್, ಗೋಪಾಲ ನಾಟೀಕರ್, ದತ್ತು ಶಿವಲಿಂಗಪ್ಪ, ಮನೋಹರ್ ಬೀರನೋರ, ರವಿ ದೇಗಾಂವ, ಆನಂದ ಕಪನೂರ ಭಾಗವಹಿಸಿದ್ದರು.

371 (ಜೆ) ಅನ್ನು ಯಾರೋ ಬಂದು ಸುಮ್ಮನೆ ಕೊಟ್ಟಿದ್ದಲ್ಲ. ಇದಕ್ಕಾಗಿ ನಮ್ಮ ಹಿರಿಯರು ದಶಕಗಳ ಕಾಲ ಹೋರಾಟ ಮಾಡಿದ್ದಾರೆ. ಅದನ್ನು ಉಳಿಸಿಕೊಳ್ಳಲು ನಾವು ಬೀದಿಗೆ ಇಳಿದು ಹೋರಾಡುತ್ತೇವೆ.
–ಪ್ರಜ್ಞಾ ಚಿಂಚನಸೂರ, ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ
ಎಂಜಿನಿಯರ್ ಮೆಡಿಕಲ್ ಸೀಟುಗಳು ಸಿಗುತ್ತವೆ ಎಂಬ ಭರವಸೆಯಿಂದ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. 371 (ಜೆ) ಕಸಿದುಕೊಂಡರೆ ವಿದ್ಯಾರ್ಥಿಗಳ ಭರವಸೆಯೇ ಕಿತ್ತುಕೊಂಡಂತೆ.
–ಜಯಶ್ರೀ, ಅಲ್‌– ಖಮರ್ ಕಾಲೇಜಿನ ವಿದ್ಯಾರ್ಥಿನಿ
ಎಲ್ಲ ಸೌಕರ್ಯಗಳು ಇಲ್ಲದಿರುವುದಕ್ಕೆ ನಮ್ಮ ಭಾಗದ ಜಿಲ್ಲೆಗಳು ಎಸ್‌ಎಸ್‌ಎಲ್‌ಸಿ ಪಿಯುಸಿ ಪರೀಕ್ಷೆಗಳ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿ ಬರುತ್ತವೆ. 371 (ಜೆ) ಒಂದೇ ನಮಗೆ ಆಶಾಕಿರಣವಾಗಿದೆ.
–ಬಸವಂತ ರೆಡ್ಡಿ, ಶರಣಬಸವೇಶ್ವರ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ

‘ಐತಿಹಾಸಿಕ ಹಿನ್ನೆಲೆ ತಿಳಿದುಕೊಳ್ಳಲಿ’

‘ಪ್ರಾದೇಶಿಕ ಅಸಮಾನತೆ ತೊಲಗಿಸಲು ದೇಶದ ಹಲವೆಡೆ 371 ಅಡಿ ‘ಎ’ ‘ಬಿ’ ‘ಸಿ’ ಅಡಿ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ನಮಗೆ 371 (ಜೆ) ಅಡಿ ಮೀಸಲಾತಿ ಸಿಕ್ಕಿದೆ. ಇದರ ವಿರುದ್ಧ ಹೋರಾಡುವವರು ಐತಿಹಾಸಿಕ ಹಿನ್ನೆಲೆ ತಿಳಿದುಕೊಳ್ಳಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘30ಕ್ಕೂ ಹೆಚ್ಚು ವರ್ಷಗಳ ಕಾಲ ಹೋರಾಡಿದ್ದರ ಫಲವಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದು 371 (ಜೆ) ಅನುಷ್ಠಾನಗೊಂಡಿದೆ. ಎಲ್ಲ ಕ್ಷೇತ್ರಗಳನ್ನು ಅಧ್ಯಯನ ಮಾಡಿ ವೈಜ್ಞಾನಿಕ ಸಂಶೋಧನೆ ಮಾಡಿ ವರದಿಯನ್ನು ಸಲ್ಲಿಸಿದ್ದೇವೆ’ ಎಂದರು. ‘ನಮ್ಮ ಕೆಲವು ಸಹದ್ಯೋಗಿಗಳಲ್ಲಿ ಈ ಬಗ್ಗೆ ತಪ್ಪು ಕಲ್ಪನೆ ಇದ್ದರೆ ಅದನ್ನೂ ಸರಿಪಡಿಸುತ್ತೇವೆ. ಈ ಹಿಂದಿನ ಸರ್ಕಾರದಲ್ಲಿನ ಗೊಂದಲಗಳನ್ನು ನಿವಾರಿಸಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT