ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಣುಕಾಚಾರ್ಯರು ಬೋಧನೆ ದಾರಿ ದೀಪ; ಡಾ. ವೀರಸೋಮೇಶ್ವರ ಶಿವಾಚಾರ್ಯರ

Last Updated 26 ಏಪ್ರಿಲ್ 2022, 6:57 IST
ಅಕ್ಷರ ಗಾತ್ರ

ಚಿಂಚೋಳಿ: ಪಟ್ಟಣದಲ್ಲಿ ಇದೇ ಮೊದಲ ಬಾರಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಸೋಮವಾರ ಸಂಭ್ರಮದಿಂದ ಜರುಗಿತು.

ಇಲ್ಲಿನ ಮಹಾಂತೇಶ್ವರ ಮಠದಿಂದ ವೈಜನಾಥ ಪಾಟೀಲ ಸ್ಮಾರಕದವರೆಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯರ ಮೆರವಣಿಗೆ ಜತೆಗೆ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಯೂ ನಡೆಯಿತು.

ಈ ವೇಳೆ ಸುಮಂಗಲೆಯರ ಪೂರ್ಣಕುಂಭ, ವಾದ್ಯಮೇಳ, ವಿದ್ಯುತ್ ದೀಪಲಂಕಾರದೊಂದಿಗೆ ಪಂಚ ವರ್ಣದ ಧ್ವಜ, ಭಗವಾ ಧ್ವಜದ ಮೆರವಣಿಗೆ ಕಳೆ ತಂದಿತು.

ಕಾರ್ಯಕ್ರಮ ಸುಮಾರು 5 ಗಂಟೆ ತಡವಾಗಿ‌ ಆರಂಭವಾಗಿದ್ದರಿಂದ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಡಾ. ಅವಿನಾಶ ಜಾಧವ, ಹವಾ ಮಲ್ಲಿನಾಥ ಸ್ವಾಮೀಜಿ ಸಮಾರಂಭ ಆರಂಭಕ್ಕೂ ಮುನ್ನ ಬಂದು‌ ನಿರ್ಗಮಿಸಿದರು.

ಈ ವೇಳೆ ಮಾತನಾಡಿದ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯರು, ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ಸಕಲರಿಗೂ ಒಳಿತನ್ನು ಮಾಡುತ್ತ ಬಂದಿದೆ. ರೇಣುಕಾಚಾರ್ಯರು ಬೋಧಿಸಿದ್ದ ಶಪಥ ಧರ್ಮ ಸೂತ್ರಗಳು ಸಕಲರ ಬಾಳಿಗೆ ದಾರಿದೀಪವಾಗಿವೆ ಎಂದರು.

ಯಾಂತ್ರಿಕ ಜೀವನದಲ್ಲಿ ಸುಖ ಶಾಂತಿ‌ ನೆಮ್ಮದಿ ಇಲ್ಲದಂತೆ ಆಗಿದೆ. ನೆಮ್ಮದಿಯ ಬದುಕಿಗೆ ಧರ್ಮವೇ ಮೂಲವಾಗಿದೆ. ಪಂಚಪೀಠಗಳು ಬಡವ ಬಲ್ಲಿದ ಮೇಲು ಕೀಳು ಎನ್ನದೇ ಸಕಲ ಸಮುದಾಯಗಳ ಉನ್ನತಿಗೆ ಶ್ರಮಿಸಿವೆ ಎಂದು ಹೇಳಿದರು.

12ನೇ ಶತಮಾನದ ವಚನ ಸಾಹಿತ್ಯ ಸೃಷ್ಟಿಯ ಹಿಂದೆ ರೇಣುಕಾಚಾರ್ಯರ ಸಾಹಿತ್ಯವೇ ಪ್ರೇರಣೆಯಾಗಿದೆ ಎಂದು ಪ್ರಾಧ್ಯಾಪಕ ಈಶ್ವರಯ್ಯ ಕೂಡಾಂಬಲ್ ಐನೋಳ್ಳಿ ಭಿಪ್ರಾಯಪಟ್ಟರು.

ರೇವಗ್ಗಿಯ ರೇವಣಸಿದ್ದೇಶ್ವರ ಗುಡ್ಡದಲ್ಲಿ ಗುರುಪೀಠ ಸ್ಥಾಪಿಸಬೇಕು ಎಂದು ಜಗದ್ಗುರುಗಳು ಆದೇಶಿದ್ದಾರೆ. ಹಾಗಾಗಿ, ಪೂಜ್ಯರ ಆದೇಶ ಪಾಲಿಸಲು ಸುತ್ತಲ್ಲಿನ ಗ್ರಾಮಗಳ ಭಕ್ತರಿಗೆ ಮನವಿ ಮಾಡುತ್ತೇನೆ ಎಂದು ಸಂಸದ ಡಾ. ಉಮೆಶ ಜಾಧವ ಹೇಳಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ‌ ಕಾರ್ಯಕ್ರಮ ಉದ್ಘಾಟಿಸಿದರು. ಸುಭಾಷ ರಾಠೋಡ ಮಾತನಾಡಿದರು.

ಶ್ರೀನಿವಾಸ ಸರಡಗಿಯ ವೀರೇಶ್ವರ ಮಠದ ರೇವಣಸಿದ್ದ ಶಿವಾಚಾರ್ಯರು, ಕೆಂಚವೃಷಭೇಂದ್ರ ಶಿವಾಚಾರ್ಯರು, ಸೇಡಂನ ಶಿವಶಂಕರ ಶಿವಾಚಾರ್ಯರು, ನಿಡಗುಂದಾದ ಕರುಣೇಶ್ವರ ಶಿವಾ ಚಾರ್ಯರು, ಸೂಗೂರಿನ ಡಾ. ಚನ್ನರು ದ್ರಮುನಿ ಶಿವಾಚಾರ್ಯರು, ನರನಾಳದ ಶಿವಕುಮಾರ ಶಿವಾಚಾರ್ಯರು, ರಟಕಲನ ರೇವಣಸಿದ್ದೇಶ್ವರ ಶಿವಾಚಾರ್ಯರು ಭಾಗವಹಿಸಿದ್ದರು.

ಸ್ವಾಗತ ಸಮಿತಿ ಅಧ್ಯಕ್ಷೆ ಉಮಾ ಪಾಟೀಲ ಸ್ವಾಗತಿಸಿದರು. ಚಂದನಕೇರಾ ಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಪ್ರಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT