ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಟಿಕೆಟ್‌ ರಹಿತ ರೈಲು ಪ್ರಯಾಣ: ₹ 34.74 ಕೋಟಿ ದಂಡ ವಸೂಲಿ

ವಿಶೇಷ ಅಭಿಯಾನ, ಒಂದೇ ದಿನ ₹ 2.54 ಲಕ್ಷ ದಂಡ ಸಂಗ್ರಹ
Published 14 ಮೇ 2024, 5:10 IST
Last Updated 14 ಮೇ 2024, 5:10 IST
ಅಕ್ಷರ ಗಾತ್ರ

ಕಲಬುರಗಿ: ಟಿಕೆಟ್‌ ರಹಿತ ಹಾಗೂ ಅನಿಯಮಿತ ಪ್ರಯಾಣ ಮತ್ತು ಶುಲ್ಕ ಪಾವತಿಸದೆ ಲಗೇಜ್‍ಗಳನ್ನು ಕೊಂಡೊಯ್ಯುತ್ತಿದ್ದವರನ್ನು ಪತ್ತೆ ಹಚ್ಚಿರುವ ಸೋಲಾಪುರ ರೈಲ್ವೆ ವಿಭಾಗದ ಅಧಿಕಾರಿಗಳು, ಆ ಪ್ರಯಾಣಿಕರಿಂದ 2023–24ನೇ ಆರ್ಥಿಕ ವರ್ಷದಲ್ಲಿ ₹ 34.74 ಕೋಟಿ ದಂಡ ವಸೂಲಿ ಮಾಡಿದ್ದಾರೆ.

ಟಿಕೆಟ್ ಪಡೆಯದೇ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಕೆಲವರು ಜನರಲ್ ಟಿಕೆಟ್ ಪಡೆದು ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಾರೆ. ಇದನ್ನು ನಿಯಂತ್ರಿಸಲು ಸೋಲಾಪುರ ರೈಲ್ವೆ ವಿಭಾಗದ ವಾಡಿ, ಕಲಬುರಗಿ, ಸೋಲಾಪುರ, ಶಹಾಬಾದ್, ಕುರ್ದುವಾಡಿ, ಲಾತೂರ್, ಪಂಢರಪುರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನೂರಾರು ಟಿಕೆಟ್ ತಪಾಸಣಾ ಅಧಿಕಾರಿಗಳು ಮತ್ತು ಆರ್‌ಪಿಎಫ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಟಿಕೆಟ್ ರಹಿತ ಮತ್ತು ಅನಿಯಮಿತ ಪ್ರಯಾಣವನ್ನು ತಡೆಯಲು ಎಕ್ಸ್‌ಪ್ರೆಸ್, ವಿಶೇಷ ರೈಲು, ಸೂಪರ್ ಫಾಸ್ಟ್, ಪ್ಯಾಸೆಂಜರ್‌ ರೈಲು ಸೇರಿದಂತೆ ಪ್ರಯಾಣಿಕರ ರೈಲು ಸೇವೆಗಳಲ್ಲಿ ಎಲ್ಲ ಅಧಿಕೃತ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಸೇವೆಗಳನ್ನು ಖಚಿತಪಡಿಸಲು ನಿರಂತರ ತಪಾಸಣೆಯ ಜೊತೆಗೆ ವಿಶೇಷ ಟಿಕೆಟ್ ತಪಾಸಣೆ ಕಾರ್ಯಾಚರಣೆಗಳನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.

ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಅಧಿಕೃತ ಟಿಕೆಟ್‌ ಪಡೆದು ಆರಾಮದಾಯಕ ಹಾಗೂ ಸುರಕ್ಷಿತವಾಗಿ ಪ್ರಯಾಣ ಮಾಡಬೇಕು.
ಯೋಗೀಶ ಪಾಟೀಲ, ಸೋಲಾಪುರ ವಿಭಾಗದ ವಾಣಿಜ್ಯ ಆಡಳಿತಾಧಿಕಾರಿ

ಸೋಲಾಪುರ ವಿಭಾಗದ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ, 2022–23ನೇ ಸಾಲಿನ ಹಣಕಾಸು ವರ್ಷದಲ್ಲಿ ಟಿಕೆಟ್ ತಪಾಸಣೆಯ ದಂಡ ಸಂಗ್ರಹ ಮೊತ್ತ ₹ 33.71 ಕೋಟಿಯಾಗಿತ್ತು. 2023–24ನೇ ಸಾಲಿಗೆ ಅದು ₹ 34.74 ಕೋಟಿಗೆ ತಲುಪಿದ್ದು, ಶೇ 3.03ರಷ್ಟು ಹೆಚ್ಚಳವಾಗಿದೆ. ರೈಲ್ವೆ ವರಮಾನದ ದೃಷ್ಟಿಯಿಂದ ಟಿಕೆಟ್ ತಪಾಸಣಾ ದಂಡ ಸಂಗ್ರಹದ ಈ ಮೊತ್ತ ಐತಿಹಾಸಿಕ ಸಾಧನೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ವಿಶೇಷ ಅಭಿಯಾನ: ಮೇ 11ರಂದು ವಿಭಾಗದ 72 ಟಿಕೆಟ್‌ ಪರಿವೀಕ್ಷಕರು (ಟಿಟಿಇ) ಮತ್ತು ಆರ್‌ಪಿಎಫ್‌ ಸಿಬ್ಬಂದಿ ಸೇರಿ ವಿಶೇಷ ಟಿಕೆಟ್ ತಪಾಸಣಾ ಅಭಿಯಾನ ನಡೆಸಿದರು.

ಟಿಕೆಟ್ ರಹಿತ ಹಾಗೂ ಅನಿಯಮಿತ ಪ್ರಯಾಣ, ಶುಲ್ಕ ಕಟ್ಟದೆ ಲಗೇಜ್‍ಗಳನ್ನು ಒಯ್ಯುತ್ತಿದ್ದ 521 ಪ್ರಯಾಣಿಕರಿಂದ ₹2.54 ಲಕ್ಷ ದಂಡ ಮೊತ್ತವನ್ನು ಸಂಗ್ರಹಿಸಿದ್ದಾರೆ. ಇದೇ ವೇಳೆ 11 ಮಂದಿ ಅನಧಿಕೃತ ಬೀದಿ ಬದಿ ವ್ಯಾಪಾರಿಗಳ ವಿರುದ್ಧವೂ ಕ್ರಮ ಕೈಗೊಂಡಿದ್ದಾರೆ.

ಕಳೆದ ವಾರ ನಡೆದ ವಿಶೇಷ ಅಭಿಯಾನದಲ್ಲಿ ರೈಲು ನಿಲ್ದಾಣ ಹಾಗೂ ಆವರಣದಲ್ಲಿ ಅಕ್ರಮವಾಗಿ ಬೇಯಿಸಿದ ಆಹಾರ ಪದಾರ್ಥ, ಅನಧಿಕೃತ ನೀರಿನ ಬಾಟಲ್‌, ಪ್ಯಾಕೇಜ್ ತಿಂಡಿ, ತಂಪು ಪಾನೀಯ, ಟೀ ಮತ್ತು ಕಾಫಿ ಮಾರುತ್ತಿದ್ದ 148 ಅನಧಿಕೃತ ಮಾರಾಟಗಾರರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 70 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, ₹ 87,505 ದಂಡ ವಸೂಲಿ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂದೇ ತಿಂಗಳಲ್ಲಿ ₹ 10.12 ಲಕ್ಷ ದಂಡ ಹಾಕಿದ ಟಿಟಿಇ

ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಉತ್ತಮವಾಗಿ ಟಿಕೆಟ್ ತಪಾಸಣೆ ಮಾಡಿ ಅತಿ ಹೆಚ್ಚು ದಂಡ ಹಾಕಿದ ಟಿಕೆಟ್‌ ಪರಿವೀಕ್ಷಕರನ್ನು (ಟಿಟಿಇ) ವಿಭಾಗದ ವತಿಯಿಂದ ಸನ್ಮಾನಿಸಲಾಗುತ್ತದೆ. ಈ ಮೂಲಕ ಟಿಟಿಇಗಳ ಕಾರ್ಯಕ್ಷಮತೆ ಉತ್ತೇಜಿಸಿ ಟಿಕೆಟ್‌ ರಹಿತ ಪ್ರಯಾಣ ತಡೆಯಲು ಸೋಲಾಪುರ ವಿಭಾಗ ಮುಂದಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಟಿಟಿಇಗಳಾದ ಎಸ್‌.ಎ. ಉಬಾಲೆ ₹ 56.44 ಲಕ್ಷ ಎಸ್.ಕೆ.ಝಾ ₹ 50.09 ಲಕ್ಷ ಹಾಗೂ ಜಿ.ಎಸ್.ರಾಜಾಪುರೆ ₹ 48.54 ಲಕ್ಷ ದಂಡವನ್ನು ಟಿಕೆಟ್‌ ರಹಿತ ಪ್ರಯಾಣಿಕರಿಂದ ವಸೂಲಿ ಮಾಡಿದ್ದರು. ಟಿಟಿಇ ಎಸ್.ಎ.ಉಬಾಳೆ ಹಾಗೂ ಎಸ್‌.ಕೆ. ಝಾ ಅವರು ಒಂದೇ ತಿಂಗಳಲ್ಲಿ ಕ್ರಮವಾಗಿ ₹ 10.12 ಲಕ್ಷ ಹಾಗೂ ₹ 7.11 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಒಂದೇ ದಿನದಲ್ಲಿ ₹1.02 ಲಕ್ಷ ದಂಡ ವಸೂಲಿ ಮಾಡಿದ್ದ ಶ್ರೇಯಸ್ಸು ಟಿಟಿಇ ಫಲೀಕ್ ಶೇಖ್ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT