ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದಲ್ಲಿಯೇ ಮೊದಲಿಗೆ ಬತ್ತಿದ ಕೃಷ್ಣೆ

ಜನ, ಜಾನುವಾರುಗಳಿಗೆ ನೀರಿನ ಅಭಾವ, ಪಟ್ಟಣಕ್ಕೆ ನೀರು ವ್ಯತ್ಯಯ ಸಾಧ್ಯತೆ
Last Updated 4 ಫೆಬ್ರುವರಿ 2016, 10:43 IST
ಅಕ್ಷರ ಗಾತ್ರ

ದೇವದುರ್ಗ: ತಾಲ್ಲೂಕಿನ ಹೂವಿನಹೆಡ್ಗಿ ಗ್ರಾಮದ ಮುಂದೆ ಹರಿಯುವ ಕೃಷ್ಣಾ ನದಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಬತ್ತಿದ್ದು, ಪಟ್ಟಣ ಸೇರಿದಂತೆ ನದಿ ಪಾತ್ರದ ಗ್ರಾಮಗಳ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಶ್ವತ ಕುಡಿಯುವ ನೀರಿನ ಯೋಜನೆಯ ಮೂಲಕ ಪ್ರತಿನಿತ್ಯ ಪುರಸಭೆ ವ್ಯಾಪ್ತಿಯ ಸುಮಾರು 20ವಾರ್ಡ್‌ಗಳಿಗೆ ಪ್ರತಿನಿತ್ಯ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡಲಾಗುತ್ತದೆ. ಫೆಬ್ರುವರಿ ತಿಂಗಳಲ್ಲಿಯೇ ಈ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ 3 ತಿಂಗಳು ಬೇಸಿಗೆಯಲ್ಲಿ ಇನ್ನಷ್ಟು ನೀರಿನ ಸಮಸ್ಯೆ ಎದುರಾಗಲಿದ್ದು,  ಈ ನೀರನ್ನೇ ನಂಬಿಕೊಂಡಿರುವ ಪಟ್ಟಣದ ನಾಗರಿಕರಿಗೆ ಅತಂಕ ಎದುರಾಗಿದೆ.

ಈ ಬಾರಿ ಆಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದ ಪ್ರಯುಕ್ತ ಕಳೆದ ಆಗಸ್ಟ್‌ ತಿಂಗಳಿಂದ ಇಲ್ಲಿವರೆಗೂ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆ ಇದೆ. ಎಷ್ಟೇ ಬೇಸಿಗೆ ಇದ್ದರೂ ನದಿಯಲ್ಲಿ ಕನಿಷ್ಠ ನೀರಿನ ಪ್ರಮಾಣ ಇರುತ್ತಿತ್ತು. ಆದರೆ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿ ರುವುದು ಇದೇ ಮೊದಲ ಬಾರಿಗೆ ಎಂಬುದು ಗ್ರಾಮಸ್ಥರ ಹೇಳಿಕೆ.

ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿ ನಿಂತಿದ್ದು, ನಮ್ಮ ತಂದೆಯವರ ಕಾಲದಿಂದಲೂ ಈ ರೀತಿ ಕೃಷ್ಣಾ ನದಿ ಬತ್ತಿದ ಉದಾಹರಣೆ ಇಲ್ಲ ಎಂದು ನದಿ ಪಾತ್ರ ವಗಡಂಬಳಿ ಗ್ರಾಮದ ಶ್ರೀನಿವಾಸ ತಿಳಿಸಿದರು. ಪ್ರತಿನಿತ್ಯ ಪಟ್ಟಣಕ್ಕೆ 10ರಿಂದ 11 ಲಕ್ಷ ಲೀಟರ್‌ನಷ್ಟು ನದಿಯಿಂದ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಒಂದು ವಾರದಿಂದ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ.

ನದಿಯಿಂದ ಜಾಕ್‌ವೆಲ್‌ಗೆ ನೀರು ಕಳಿಸುವ ಸ್ಥಳ ಇನ್‌ಟೇಕ್‌ವೆಲ್‌ ( ನದಿಯಲ್ಲಿನ ಬಾವಿ)ಗೆ ನೀರು ಕಡಿಮೆಯಾಗಿರುವುದರ ಬಗ್ಗೆ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ನದಿಯ ಆಚೆ ದಂಡೆಯಲ್ಲಿ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರನ್ನು ಯಂತ್ರಗಳ ಮೂಲಕ ಗುಂಡಿ ಅಗೆದು ಇನ್‌ಟೇಕ್‌ವೆಲ್‌ಗೆ ಹರಿಸಿದ್ದಾರೆ.  ಇದರಿಂದ ಒಂದು ವಾರ ಕಾಲ ಮಾತ್ರ ಪಟ್ಟಣಕ್ಕೆ  ನೀರು ಸರಬರಾಜು ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.

ಆಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಈ ಬಾರಿ ಡಿಸೆಂಬರ್‌ ಮೊದಲ ವಾರದಲ್ಲಿಯೇ ಕಾಲುವೆಗಳಿಗೆ ನೀರು ನಿಲ್ಲಿಸಲಾಗಿದೆ. ಬೇಸಿಗೆ ಬೆಳೆಗಳನ್ನು ಬೆಳೆಯದಂತೆ ರೈತರಿಗೆ ಎಚ್ಚರಿಕೆ ನೀಡಲಾಗಿದೆ. ಆದರೂ ನದಿ ಪಾತ್ರದ ರೈತರು ನದಿ ನೀರಿನಿಂದ ಭತ್ತ ಬೆಳೆಯಲಾಗಿದೆ. ತಾಲ್ಲೂಕಿನಲ್ಲಿ ಸುಮಾರು 70ಕಿ.ಮೀ ದೂರ ಹರಿಯುವ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನರು ನದಿ ನೀರನ್ನೇ ಕುಡಿಯುವ ಪರಿಸ್ಥಿತಿ ಇದೆ.

ಆಣೆಕಟ್ಟೆಯಿಂದ ನದಿಗೆ ನೀರು ಹರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ನದಿಯಲ್ಲಿ ಇದ್ದ ಅಲ್ಪ,ಸ್ವಲ್ಪ ನೀರು ಕುಡಿಯಲು ಅನುಕೂಲವಾಗುತ್ತಿದ್ದರೂ ಅದೇ ನೀರನ್ನು ಪಂಪ್‌ಸೆಟ್‌ಗಳ ಮೂಲಕ ಹಗಲು, ರಾತ್ರಿ ಎನ್ನದೇ ರೈತರು ಭತ್ತದ ಗದ್ದೆಗಳಿಗೆ ಬಿಡುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ.
ನದಿ ಪಾತ್ರದ ಗ್ರಾಮಗಳಾದ ಬಾಗೂರು, ಅಂಚೆಸುಗೂರು, ಕರ್ನಾಳ, ಗೋಪಾಳಪುರ, ಅಂಜಳ  ಇತ್ಯಾದಿ ಗ್ರಾಮಗಳ ಜನರು ನದಿಯಲ್ಲಿನ ನೀರಿಗೆ ಅಡ್ಡಲಾಗಿ ಒಡ್ಡುಗಳನ್ನು ನಿರ್ಮಿಸಿಕೊಂಡು ಗದ್ದೆಗಳಿಗೆ ನೀರು ಬಿಡುವುದರಿಂದ ಹಲವು ಗ್ರಾಮಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ.

***ಕೃಷ್ಣಾ ನದಿ ಸಂಪೂರ್ಣ ಬತ್ತಿ ದೆ. ಪಟ್ಟಣಕ್ಕೆ ಕುಡಿಯುವ ನೀರಿಗೆ ಅಣೆಕಟ್ಟೆಯಿಂದ ನೀರು ಬಿಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ

ಫೆರೋಜ್‌ ಖಾನ್‌
ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT