4
ಬೆಂಗಳೂರು ನಗರವು ಜಗತ್ತಿನ ಆಕರ್ಷಣೆಯ ಕೇಂದ್ರಬಿಂದು

‘ ದೂರದೃಷ್ಟಿಯ ನಾಯಕ ಕೆಂಪೇಗೌಡ ’

Published:
Updated:
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ ಬುಧವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಮಾತನಾಡಿದರು.

ಶಿವಮೊಗ್ಗ: ಕೆಂಪೇಗೌಡರು ಅಂದಿನ ದಿನಗಳಲ್ಲೇ ಸುಂದರ ನಗರದ ಪರಿಕಲ್ಪನೆಯನ್ನು ರೂಪಿಸಿದ್ದರು ಎಂದು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ ಬುಧವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭದ್ರವಾದ ಕೋಟೆ ಕಟ್ಟುವ ಮೂಲಕ ನಾಡಿನ ಗಡಿ ಹಾಗೂ ಪ್ರಜೆಗಳನ್ನು ರಕ್ಷಿಸುವ ಕೆಲಸ ಮಾಡಿದ್ದರು. ಸ್ತ್ರೀಯರಿಗೆ ಪ್ರಾಮುಖ್ಯತೆ ನೀಡುವ ಅಂಶಗಳನ್ನು ಅವರ ಆಡಳಿತದಲ್ಲಿ ಅಳವಡಿಸಿಕೊಂಡಿದ್ದರು. ಮಲ್ಲಯುದ್ಧ, ಕತ್ತಿವರಸೆ, ಬಿಲ್ಲಗಾರಿಯಂತಹ ಅನೇಕ ಕಲೆಗಳನ್ನು ಕರಗತ ಮಾಡಿಕೊಂಡಿದ್ದರು ಎಂದರು.

ವಿಜಯನಗರ ಅರಸರ ಸಾಮಂತ ರಾಜರಾಗಿದ್ದ ಕೆಂಪೇಗೌಡರು ನಕಲು ನಾಣ್ಯಗಳನ್ನು ಟಂಕಿಸುತ್ತಾರೆಂಬ ಆರೋಪದ ಮೇಲೆ ಅವರನ್ನು ಕಾರಾಗೃಹದಲ್ಲಿ ಇರಿಸಲಾಯಿತು. ಕೊನೆಗೆ ತಮ್ಮ ಸತ್ಯನಿಷ್ಠೆಯಿಂದ ಬಿಡುಗಡೆ ಹೊಂದಿದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಎಂದರು.

ಅಂದಿನ ಜನರಲ್ಲಿ ಅವ್ಯಾಹತವಾಗಿದ್ದ ಮೌಢ್ಯ, ಕಂದಾಚಾರಗಳನ್ನು ಹೋಗಲಾಡಿಸುವಲ್ಲಿ ಶ್ರಮಿಸಿದರು. ಸ್ವತಃ ಕೆಂಪೇಗೌಡ ತಮ್ಮ ಮನೆಯಲ್ಲಿ ವಿವಿಧ ದೇವರನ್ನು ಪ್ರತಿಷ್ಠಾಪಿಸಿ ಆರಾಧಿಸುವ ಮೂಲಕ ಸರ್ವಧರ್ಮ ಸಮನ್ವಯತೆಯ ಸಂದೇಶ ಸಾರಿದ್ದರು ಇಂತಹ ಮಹಾನ್ ನಾಯಕರ ನಿಷ್ಟೆ, ಪ್ರಾಮಾಣಿಕತೆಯನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಕೆಂಪೇಗೌಡರ ಸಕಾಲಿಕ ಆಲೋಚನೆಗಳಿಂದಾಗಿ ಬೆಂಗಳೂರು ವಿವಿಧ ಕೆರೆ-ಕಾಲುವೆಗಳು, ಉದ್ಯಾನಗಳಿಂದ ನಿರ್ಮಾಣಗೊಂಡು ನೆಮ್ಮದಿಯ ಜನ ವಸತಿ ಹಾಗೂ ಸಮೃದ್ಧ ಕೃಷಿ ಪ್ರದೇಶವಾಗಿ ಬೆಳೆದಿತ್ತು. ಬೆಂಗಳೂರಿನ 12 ಹೋಬಳಿಗಳನ್ನು ಪಡೆದು, ಸಮರ್ಥವಾಗಿ ಆಡಳಿತ ನಡೆಸಿದ ಕೆಂಪೇಗೌಡ ಮಾದರಿ ನಗರ ನಿರ್ಮಾಣಕ್ಕೆ ಒತ್ತು ನೀಡಿದ್ದರು ಎಂದರು.

ಬೆಂಗಳೂರು ನಗರ ನಿರ್ಮಾಣ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸಿದ ದೂರದೃಷ್ಟಿಯ ನಾಯಕ ನಾಡಪ್ರಭು ಕೆಂಪೇಗೌಡ ಅವರ ಮುಂದಾಲೋಚನೆಯ ಫಲವಾಗಿ  ಇಂದು ಬೆಂಗಳೂರು ನಗರವು ಜಗತ್ತಿನ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮಾತ್ರವಲ್ಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನ ಪಡೆದಿದೆ ಎಂದರು.

ಶಿವಮೊಗ್ಗವನ್ನು ಸ್ವಚ್ಛ ಹಾಗೂ ಹಸಿರು ನಗರವನ್ನಾಗಿಟ್ಟುಕೊಳ್ಳುವ ಜವಾಬ್ದಾರಿ ನಿಮ್ಮೆಲ್ಲರದು. ನಗರ ಸ್ವಚ್ಛವಾಗಬೇಕಾದರೆ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿ, ಕಸವನ್ನು ನಿಗಧಿಪಡಿಸಿದ ಸ್ಥಳದಲ್ಲೇ ಹಾಕಬೇಕು. ಅದು ಕೇವಲ ನಗರಸಭೆಯ ಕರ್ತವ್ಯ ಮಾತ್ರವಲ್ಲ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದೇ ರೀತಿ ನಗರ ಹಸಿರಾಗಬೇಕಾದರೆ ಶಾಲಾ-ಕಾಲೇಜು ಆವರಣದಲ್ಲಿ ವರ್ಷಕ್ಕೊಂದರಂತೆ ಗಿಡ ನೆಡಲು ಪ್ರತಿಜ್ಞೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯಿಂದ ನಾಡಪ್ರಭು ಕೆಂಪೇಗೌಡರ ಕುರಿತು 15 ನಿಮಿಷಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್, ಮೇಯರ್ ನಾಗರಾಜ್ ಕಂಕಾರಿ, ಉಪಮೇಯರ್ ವಿಜಯಲಕ್ಷ್ಮೀ ಪಾಟೀಲ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕಡಿದಾಳ್ ಗೋಪಾಲ್, ಎನ್ಇಎಸ್ ಸಂಸ್ಥೆಯ ಎ.ಎಸ್. ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್‌ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !