ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ದಸರಾ | ಬಹುಭಾಷಾ ಕವಿಗೋಷ್ಠಿಗೆ 60 ಮಂದಿ ಆಯ್ಕೆ

Published 14 ಅಕ್ಟೋಬರ್ 2023, 5:25 IST
Last Updated 14 ಅಕ್ಟೋಬರ್ 2023, 5:25 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಅ. 18ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯಲಿರುವ ‘ಬಹುಭಾಷಾ ಕವಿಗೋಷ್ಠಿ’ಯಲ್ಲಿ 12ಕ್ಕೂ ಅಧಿಕ ಭಾಷೆಯ ಕವನಗಳನ್ನು 60 ಮಂದಿ ವಾಚಿಸಲಿದ್ದಾರೆ. ಈ ಕವನಗಳನ್ನೆಲ್ಲ ಒಟ್ಟುಗೂಡಿಸಿ ಕವನಸಂಕಲನ ಹೊರತರುವ ಯೋಜನೆಯನ್ನೂ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಹಾಕಿಕೊಂಡಿದೆ.

‘ಕನ್ನಡ, ಇಂಗ್ಲಿಷ್, ಹಿಂದಿ, ಕೊಡವ, ಅರೆಭಾಷೆಗೌಡ, ಕುಂಬಾರ, ಬ್ಯಾರಿ, ತುಳು, ಮಲಯಾಳಂ, ತಮಿಳು, ಹವ್ಯಕ, ಮರಾಠಿ ಸೇರಿದಂತೆ 12ಕ್ಕೂ ಅಧಿಕ ಭಾಷೆಯ ಸುಮಾರು 200 ಕವನಗಳು ಕವಿಗೋಷ್ಠಿಗಾಗಿ ಬಂದಿದ್ದವು. ಅವುಗಳಲ್ಲಿ 60 ಕವನಗಳನ್ನು ಆಯ್ಕೆ ಮಾಡಲಾಯಿತು’ ಎಂದು ಸಮಿತಿಯ ಅಧ್ಯಕ್ಷ ಉಜ್ವಲ್‌ ರಂಜಿತ್ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

18ರಂದು ಬೆಳಿಗ್ಗೆ 9 ಗಂಟೆಗೆ ಗಾಂಧಿ ಮೈದಾನದ ರಸ್ತೆಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ಹಿರಿಯ ಕವಿ ಸಾಹಿತಿ  ಡಾ.ಕೋರನ ಸರಸ್ವತಿ ಪ್ರಕಾಶ್ ಅವರು ಪುಷ್ಪನಮನ ಸಲ್ಲಿಸಲಿದ್ದಾರೆ. ಬಳಿಕ, ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕವಿಗೋಷ್ಠಿಯನ್ನು ಹೈಕೋರ್ಟ್‌ನ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಉದ್ಘಾಟಿಸಲಿದ್ದಾರೆ’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ‘ಕಾಂತಾರ’ ಚಲನಚಿತ್ರ ಖ್ಯಾತಿಯ ಯುವ ಸಾಹಿತಿ, ಪ್ರಮೋದ್ ಮರವಂತೆ ಆಗಮಿಸಲಿದ್ದು, ಡಾ.ಕೋರನ ಸರಸ್ವತಿ ಪ್ರಕಾಶ್ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. 

ಅತಿಥಿಯಾಗಿ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ ಮೋರಿಕಲ್ಲು, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಶ್ ನಾಣಯ್ಯ, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪತ್ರಿಕೋದ್ಯಮಿ ಜಿ.ರಾಜೇಂದ್ರ ಕವಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಿದ್ದಾರೆ ಎಂದರು. 

ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಮಾತನಾಡಿ, ‘ಮಂಗಳೂರು, ಮೈಸೂರು ಮಾತ್ರವಲ್ಲ ಹೊರರಾಜ್ಯಗಳ ಕಾಸರಗೋಡು, ಚಿತ್ತೂರಿನಿಂದಲೂ ಕವಿಗಳು ಭಾಗವಹಿಸಲು ಉತ್ಸುಕತೆ ತೋರಿದ್ದಾರೆ. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದರು.

ಸಮಿತಿಯ ಸಹಕಾರ್ಯದರ್ಶಿ ‍ಪ್ರಸಾದ್ ಸಂಪಿಗೆಕಟ್ಟೆ, ಸದಸ್ಯರಾದ ಅರುಣ್ ಕೂರ್ಗ್, ಅಬ್ದುಲ್ ಕೌಸರ್, ಎಸ್.ಜಿ.ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT